ಬೆಳಗಾವಿ ಸುವರ್ಣಸೌಧದ ಮೆಟ್ಟಿಲುಗಳ ಮೇಲೆ ಶಾವಿಗೆ ಒಣಹಾಕಿದ ಕಾರ್ಮಿಕೆ ಕೆಲಸದಿಂದ ವಜಾ; ನೆಟ್ಟಿಗರಿಂದ ತರಾಟೆ

Update: 2022-06-02 15:28 GMT

ಬೆಳಗಾವಿ: ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಶಾವಿಗೆ ಒಣಗಿಸಿದ್ದ ಫೋಟೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಮಹಿಳಾ ಕಾರ್ಮಿಕರೊಬ್ಬರನ್ನು ಕೆಲಸದಿಂದ ವಜಾಗೊಳಿಸಿರುವ ಬೆನ್ನಲ್ಲೇ ಅಧಿಕಾರಿಗಳ ನಡೆಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. 

ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲವ್ವ ಎಂಬುವವರು ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮಂಗಳವಾರ ಶಾವಿಗೆ ಒಣಗಿಸಲು ಹಾಕಿದ್ದರು. ಇದನ್ನು  ಯಾರೋ ಸಾಮಾಜಿಕ ಜಾಲತಾಣದಲ್ಲಿ ಹರಿಬಬಿಟ್ಟಿದ್ದರು. ಬಳಿಕ ಆ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿ ತಕ್ಷಣ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಶಾವಿಗೆ ತೆಗೆಸಿದ್ದಾರೆ. 

ಈ ಬಗ್ಗೆ  ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್.ಎಲ್.ಭೀಮನಾಯ್ಕ ಪ್ರತಿಕ್ರಿಯಿಸಿ  ‘ ಕಾರ್ಮಿಕಳಿಂದ ಅಚಾತುರ್ಯವಾಗಿ ಮುಖ್ಯದ್ವಾರದ ಮುಂದೆ ಶಾವಿಗೆ ಒಣ ಹಾಕಿರುತ್ತಾರೆ. ಈ ವಿಚಾರ ನಮ್ಮ ಗಮನಕ್ಕೆ ಬರುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ, ಒಣಗಿಸಲು ಹಾಕಿದ್ದ ಶಾವಿಗೆ ತೆಗೆದಿದ್ದೇವೆ. ಮಲ್ಲವ್ವ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದೇವೆ’ ಎಂದು ತಿಳಿಸಿದ್ದಾರೆ.  

ಇನ್ನು ಮಹಿಳಾ ಕಾರ್ಮಿಕೆಯನ್ನು ಕೆಲಸದಿಂದ ವಾಜಾಗೊಳಿಸಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದ್ದು, #IStandWithMallavva ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಅಭಿಯಾನ ನಡೆಯುತ್ತಿದೆ. 

''ಪಿಡಬ್ಲ್ಯೂಡಿ ಇಂಜಿನಿಯರ್‌ಗಳು, ಅಧಿಕಾರಿಗಳು ಹಣ ಲೂಟಿ ಮಾಡುತ್ತಾರೆ, ಅದರೆ ಅವರೆಲ್ಲ ಉಳಿದಿದ್ದಾರೆ. ಶಾವಿಗೆ ಒಣಹಾಕಿದ  ಕೂಲಿ ಕಾರ್ಮಿಕ ಮಹಿಳೆಯನ್ನು ಮಾತ್ರ ಕೆಲಸದಿಂದ ತೆಗೆದು ಹಾಕಲಾಗಿದೆ. ಅದನ್ನು ಮತ್ತೆ ಮುಂದುವರಿಸಬೇಡಿ  ಎಂದು ಅವರಿಗೆ ಹೇಳಬಹುದಿತ್ತು. ಯಾರೇ ಆದರು ಅವರನ್ನು ತಮ್ಮ ಕೆಲಸದಿಂದ ಹೇಗೆ ತೆಗೆದುಹಾಕಬಹುದು? ಇದು ನ್ಯಾಯೋಚಿತ ಅಲ್ಲ'' ಎಂದು  ಪತ್ರಕರ್ತೆ ಅಶ್ವಿನಿ ಎಂ ಶ್ರೀಪಾದ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. 

''ಬೆಳಗಾವಿಯ ಸುವರ್ಣ ವಿಧಾನಸೌಧ ವರ್ಷಕ್ಕೆ ಹತ್ತು ದಿನ ಬಳಕೆಯಾದರೆ ಅದೇ ಹೆಚ್ಚು. ಪಾಪ, ಆ ಮಲ್ಲವ್ವ ಎಂಬ ದಿನಗೂಲಿ ಕೆಲಸಗಾರ್ತಿ ಈ ಸೌಧದ ಜಗಲಿಯಲ್ಲಿ ಶ್ಯಾವಿಗೆ ಒಣಗಿಸಿದ್ದು ಈಗ ಘೋರ ಅಪರಾಧವಾಗಿ ಹೋಗಿದೆ. ಮಲ್ಲವ್ವನನ್ನು ಅಧಿಕಾರಿಗಳು ಕೆಲಸದಿಂದ ಕಿತ್ತು ಹಾಕಿದ್ದಾರೆ.ಇದು ಶುದ್ಧ ಅನ್ಯಾಯ. ನೆಲ ಬಿಸಿಲು ನಂಬುವ ಜನ, ಅಧಿಕಾರಿಗಳು ಮಲ್ಲವ್ವಗೆ ಮಾಡಿದ ಅಪಚಾರವನ್ನು ಖಂಡಿಸಬೇಕು. ಪಾಪ ಕೂಲಿ ಕಾರ್ಮಿಕರನ್ನ ವಜಾ ಮಾಡತಾರ ಅಂತ. ಮೊದಲ ಅದನ್ನ ಸರಿಯಾಗಿ ಬಳಸೋದು ಕಲಿರಿ…''ಎಂದು ನಟ್ಟಿಗರೊಬ್ಬರು ಫೇಸ್ ಬುಕ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

''ವಿಧಾನಸೌದಲ್ಲಿ ಒಳಗೆ ಇವ್ರು ರಾತ್ರಿ ಮಲಗಬಹುದು, ಊಟ, ಬಾಡೂಟ , ಗೇಮ್ಸ್ ಆಡಬಹುದು, ನೀಲಿ ಚಿತ್ರ ನೋಡಬಹುದು, ಆದ್ರೆ ಆ ಕೆಲಸದ ಮಹಿಳೆ ಸಂಡಿಗೆ ಒಣ ಹಾಕಬಾರದು. ಮಲ್ಲವ್ವ ಗೆ ಮತ್ತೆ ಕೆಲಸ ಸಿಗಲಿ, ನ್ಯಾಯ ದೊರಕಲಿ'' ಎಂದು ಇನ್ನೊಬ್ಬರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. 

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News