ಹಾಸನ ನಗರಸಭೆ ಸದಸ್ಯ ಪ್ರಶಾಂತ್ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2022-06-02 15:01 GMT
ಕೊಲೆಗೀಡಾದ ಪ್ರಶಾಂತ್

ಹಾಸನ : ಜೂ,2: ಜೆಡಿಎಸ್ ನ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. 

ಪೂರ್ಣಚಂದ್ರ ಮತ್ತು ಅರುಣ್ ಎಂಬುವರನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆಗಾಗಿ ರಚನೆಯಾಗಿ ರುವ ವಿಶೇಷ ತಂಡ ತನ್ನ ಕಾರ್ಯವನ್ನು ಚುರುಕುಗೊಳಿಸಿದೆ.
 
ಕಿರಣ್ ಕಾನ್ವೇಂಟ್ ಕ್ರಾಸ್ ನ ಬಳಿ ಮಾರಕಾಸ್ತ್ರದೊಂದಿಗೆ ಆಟೋದಲ್ಲಿ ಬಂದ ದುಷ್ಕರ್ಮಿಗಳು ನಗರದ 16ನೇ ವಾರ್ಡ್ ನಗರಸಭಾ ಸದಸ್ಯ ಪ್ರಶಾಂತ್ ನಾಗರಾಜ್ ಅವರನ್ನು ಹತ್ಯೆ ಮಾಡಿದ್ದರು. 

ಪ್ರಶಾಂತ್ ಬಿಜೆಪಿ ಸೇರಲು ಒತ್ತಡಗಳಿತ್ತು ಎಂದು ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್, ಆರೋಕಿಯಪ್ಪ, ಹಾಗೂ ಡಿ.ವೈ.ಎಸ್.ಪಿ ಉದಯ್ ಬಾಸ್ಕರ್ ಅವರುಗಳನ್ನು ಕೂಡಲೇ ಅಮಾನತು ಪಡಿಸುವಂತೆ ರೇವಣ್ಣ ಒತ್ತಾಯಿಸಿದ್ದರು.

ಈಗಾಗಲೇ ಪ್ರಶಾಂತ್ ನಾಗರಾಜ್ ಅವರನ್ನು ಹತ್ಯೆಗೈದ ಇಬ್ಬರೂ ಆರೋಪಿಗಳನ್ನು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆಂದು ಹೇಳಿದರೂ ಕೂಡ ಇನ್ನು ಪೂರ್ಣ ಮಾಹಿತಿ ಹೊರ ಹಾಕಿರುವುದಿಲ್ಲ.  ಆದರೆ ಕೊಲೆ ಆರೋಪಿಗಳು ಹತ್ಯೆಗೆ ಬಳಸಿದ್ದ ಆಟೋ ಹಾಗೂ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ. ಕೊಲೆಯಾದ ಪ್ರಶಾಂತ್ ನಾಗರಾಜ್ ಅವರ ಪತ್ನಿ ಸೌಮ್ಯ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ​ 

ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜು ಹತ್ಯೆಯಾದ ಹಿನ್ನಲೆಯಲ್ಲಿ ಸಿಟಿ ಬಸ್ ನಿಲ್ದಾಣದ ರಸ್ತೆ, ಕಟ್ಟಿನಕೆರೆ ಮಾರುಕಟ್ಟೆ, ರಾಜಕುಮಾರ್ ನಗರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಅಂಗಡಿ-ಮುಗ್ಗಟನ್ನು ಬಂದ್ ಮಾಡಲಾಗಿತ್ತು. ಒಂದು ದಿನದ ಮಟ್ಟಿಗೆ ಯಾವ ವ್ಯಾಪಾರ ವಹಿವಾಟು ನಡೆಯಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News