ಪಠ್ಯ ಪುಸ್ತಕ ಪರಿಷ್ಕರಣೆ | ಅಜ್ಞಾನ-ಪೂರ್ವಗ್ರಹಗಳೇ ವಿವಾದಕ್ಕೆ ಕಾರಣ: ಡಾ.ಎಚ್.ಸಿ.ಮಹದೇವಪ್ಪ

Update: 2022-06-02 15:31 GMT

ಬೆಂಗಳೂರು, ಜೂ. 2: ‘ಪ್ರಸ್ತುತ ನಡೆಯುತ್ತಿರುವ ಪಠ್ಯ ಪುಸ್ತಕ ವಿವಾದವನ್ನು ಗಮನಿಸಿದಾಗ ಅಲ್ಲಿಯೂ ಸಮಿತಿಯ ಸದಸ್ಯರ ಅಜ್ಞಾನ ಮತ್ತು ಪೂರ್ವಗ್ರಹಗಳೇ ವಿವಾದಕ್ಕೆ ಕಾರಣವಾಗಿವೆ' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ನಾನು ಬಹಳಷ್ಟು ಸಲ ಆರೆಸ್ಸೆಸ್‍ನಲ್ಲಿರುವ ಹೊಸ ಹುಡುಗರಿಗೆ ಕೇಳಿದ್ದೇನೆ, ಆರೆಸ್ಸೆಸ್‍ನಲ್ಲಿ ನಿಮಗೆ ಏನು ಹೇಳಿಕೊಡುತ್ತಾರೆ, ಅಲ್ಲಿನ ಶಾಖೆಗಳಿಗೆ ಏಕೆ ಹೋಗುತ್ತೀರ? ಎಂದು ಆಗ ಅವರಲ್ಲಿ ಬಹಳಷ್ಟು ಜನರು ‘ಆರೆಸ್ಸೆಸ್‍ನಲ್ಲಿ ನಾವೆಲ್ಲಾ ಒಂದೇ, ಇಲ್ಲಿ ಯಾವುದೇ ಜಾತಿ ಇಲ್ಲ, ನಾವೆಲ್ಲಾ ಭಾರತೀಯರು ಎಂಬ ಭಾವನೆಯನ್ನು ಬೆಳೆಸುತ್ತಾರೆ ಮತ್ತು ದೇಶ ಪ್ರೇಮವನ್ನು ಹೇಳಿಕೊಡುತ್ತಾರೆ, ಅದಕ್ಕಾಗಿಯೇ ನಾವು ಹೋಗುತ್ತೇವೆ' ಎಂದು ಹೇಳಿದರು.

ಅದಕ್ಕೆ ನಾನು ಆರೆಸ್ಸೆಸ್‍ನಲ್ಲಿ ನಾವೆಲ್ಲಾ ಒಂದೇ, ಇಲ್ಲಿ ಯಾವುದೇ ಜಾತಿ ಇಲ್ಲ ಎಂದು ಹೇಳುತ್ತಾರೆ ಅಂತೀರ, ಮತ್ತೇಕೆ ಅವರು ‘ಪಠ್ಯ ಪುಸ್ತಕ ಸಮಿತಿಯಲ್ಲಿ 100ಕ್ಕೆ ಶೇ.95ರಷ್ಟು ಒಂದೇ ಜಾತಿಯ ಜನರನ್ನು ಆರಿಸಿ ಕೂರಿಸಿದ್ದಾರೆ? ಒಂದೇ ಜಾತಿಗೆ ಸೇರಿದ ಜನರ ಬರಹಗಳನ್ನು ಪಠ್ಯವಾಗಿಸಿದ್ದಾರೆ? ಮತ್ತು ಏಕೆ ಆರೆಸ್ಸೆಸ್‍ನ ಪದಾಧಿಕಾರಿಗಳೆಲ್ಲಾ ಬಹುತೇಕ ಒಂದೇ ಜಾತಿಗೆ ಸೇರಿದ್ದಾರೆ? ಎಂದು ಕೇಳಿದೆ. 

ಜೊತೆಗೆ ನಾವೆಲ್ಲಾ ಭಾರತೀಯರು ಎಂಬ ಭಾವನೆಯನ್ನು ಬೆಳೆಸುತ್ತಾರೆ ಮತ್ತು ದೇಶ ಪ್ರೇಮವನ್ನು ಹೇಳಿಕೊಡುತ್ತಾರೆ ಎಂದು ಹೇಳುತ್ತೀರ, ಸಂತೋಷವೇ, ಆದರೆ, ಏಕೆ ಆರೆಸ್ಸೆಸ್‍ನವರು ನಮಗೆ ರಾಷ್ಟ್ರಧ್ವಜ ಬೇಡ, ಭಗವಾದ್ವಜ ಬೇಕು ಎನ್ನುತ್ತಾರೆ? ದೇಶದ ತ್ರಿವರ್ಣ ಧ್ವಜ ಬೇಡ ಎನ್ನುವುದು ದೇಶಪ್ರೇಮವೇ? ಎಂಬ ನನ್ನ ಸರಳವಾದ ಪ್ರಶ್ನೆಗಳಿಗೆ ಅವರಿನ್ನೂ ಉತ್ತರಿಸಿಲ್ಲ. ಬಹುಶಃ ನನ್ನ ಈ ಪ್ರಶ್ನೆಗಳಿಗೆ ಆರೆಸ್ಸೆಸ್‍ನಲ್ಲಿ ನಾವೆಲ್ಲಾ ಒಂದೇ, ಇಲ್ಲಿ ಯಾವುದೇ ಜಾತಿ ಇಲ್ಲ, ಅಲ್ಲಿ ದೇಶಪ್ರೇಮ ಬೆಳೆಸುತ್ತಾರೆ' ಎಂಬ ಸುಳ್ಳನ್ನು ಹೇಳಿಕೊಡುತ್ತಿರುವ ಆರೆಸ್ಸೆಸ್ ಅಥವಾ ಬಿಜೆಪಿಗರು ಏನಾದರೂ ಉತ್ತರಿಸುತ್ತಾರೋ ಎಂದು ಕಾದಿದ್ದೇನೆ? ನೋಡೋಣ' ಎಂದು ಮಹದೇವಪ್ಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News