×
Ad

ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ: ಆರೋಪಿ ವೈಜನಾಥ ಜಾಮೀನು ಅರ್ಜಿ ವಜಾ

Update: 2022-06-02 21:03 IST

ಕಲಬುರಗಿ, ಜೂ.2: ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನದಲ್ಲಿರುವ ಕೆಎಸ್‍ಆರ್‍ಪಿ ಸಹಾಯಕ ಕಮಾಂಡೆಂಟ್ ಆಗಿದ್ದ ವೈಜನಾಥ ಕಲ್ಯಾಣಿ ರೇವೂರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕಲಬುರಗಿ 3ನೆ ಜೆಎಂಎಫ್‍ಸಿ ಕೋರ್ಟ್ ಗುರುವಾರ ತಿರಸ್ಕರಿಸಿದೆ.

ಆರೋಪಿಯು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವ ಹಿನ್ನೆಲೆ ಜಾಮೀನು ನೀಡಬಾರದು ಎಂಬ ಸಿಐಡಿ ಪರ ವಕೀಲ ಶಿವಶರಣಪ್ಪ ಹೋತಪೇಟ ಅವರ ವಾದ ಪುರಸ್ಕರಿಸಿದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿತು.

ಅಭ್ಯರ್ಥಿಗಳಿಗೆ ಅಕ್ರಮವಾಗಿ ಪರೀಕ್ಷೆಯಲ್ಲಿ ಪಾಸ್ ಮಾಡಿಸಲು ನೆರವಾದ ಆರೋಪದ ಮೇರೆಗೆ ವೈಜನಾಥರನ್ನು ಮೇ 6ರಂದು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.

ಆರ್.ಡಿ.ಪಾಟೀಲ ಜೈಲಿಗೆ: ಪ್ರಕರಣದ ಪ್ರಮುಖ ಆರೋಪಿ ಅಫಜಲಪುರ ತಾಲೂಕು ಸೊನ್ನ ಗ್ರಾಮದ ಆರ್.ಡಿ.ಪಾಟೀಲ ಸಿಐಡಿ ಕಸ್ಟಡಿ ಅಂತ್ಯಗೊಂಡಿದ್ದರಿಂದ ಗುರುವಾರ ಕಾರಾಗೃಹಕ್ಕೆ ಕಳಿಸಲಾಯಿತು.

ಕಲಬುರಗಿಯ ಎಂ.ಎಸ್. ಇರಾನಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿ ಪ್ರಭು ಶರಣಪ್ಪ ಎಂಬುವವರಿಗೆ ಬ್ಲೂಟೂತ್ ಮೂಲಕ ಉತ್ತರ ತಲುಪಿಸಿದ ಆರೋಪದ ಮೇರೆಗೆ ಪಾಟೀಲ ವಿರುದ್ಧ ನಗರದ ಸ್ಟೇಷನ್ ಬಜಾರ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಹೀಗಾಗಿ, ಮತ್ತೊಮ್ಮೆ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಇದಕ್ಕೂ ಮೊದಲು ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಹಲವು ಅಭ್ಯರ್ಥಿಗಳಿಗೆ ಅಕ್ರಮ ಮಾರ್ಗದ ಮೂಲಕ ಉತ್ತರ ತಲುಪಿಸಿದ ಆರೋಪದ ಮೇರೆಗೆ ಆರ್.ಡಿ. ಪಾಟೀಲ ಬಂಧನವಾಗಿತ್ತು.

ಬುಧವಾರ ಬಂಧಿತರಾಗಿದ್ದ ಅಫಜಲಪುರದ ಅಸ್ಲಂ ಸೈಫುನ್ ಮುಲ್ಕ್ ಮುಜಾವರ ಹಾಗೂ ಮುನಾಫ್ ಜಮಾದಾರಗೆ 7 ದಿನ ಹಾಗೂ ಅರ್.ಡಿ.ಪಾಟೀಲ ಸೋದರಳಿಯ ಪ್ರಕಾಶ ಉಡಗಿಗೆ 9 ದಿನಗಳವರೆಗೆ ಸಿಐಡಿ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News