×
Ad

ರೋಹಿತ್ ಚಕ್ರತೀರ್ಥ ವಜಾಕ್ಕೆ ಆಗ್ರಹಿಸಿ ಮೈಸೂರು ವಿವಿ ಸಂಶೋಧಕರ ಸಂಘದಿಂದ ಪ್ರತಿಭಟನೆ

Update: 2022-06-02 21:49 IST

ಮೈಸೂರು,ಜೂ.2:  ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವನ್ನು ಕೂಡಲೇ ಸಮಿತಿಯಿಂದ ವಜಾಗೊಳಿಸಿ ಬಂಧಿಸುವಂತೆ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಆಗ್ರಹಿಸಿತು.

ಮೈಸೂರಿನ ಗಂಗೋತ್ರಿಯ ಅಂಬೇಡ್ಕರ್ ಪ್ರತಿಮೆ ಎದುರು ಗುರುವಾರ  ಬೃಹತ್ ಪ್ರತಿಭಟನೆ ನಡೆಸಿದ ಸಂಘದ ವಿದ್ಯಾರ್ಥಿಗಳು ಶಾಲಾ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯನ್ನು ಸಾಂವಿಧಾನಿಕ ವ್ಯಾಪ್ತಿಗೆ ಒಳಪಡಿಸಿ ಶೈಕ್ಷಣಿಕ ಅನುಭವವಿರುವ ಶಿಕ್ಷಣ ತಜ್ಞರನ್ನ ಸಮಿತಿಗೆ ಆಯ್ಕೆ ಮಾಡುವಂತೆ ಕಾನೂನು ರೂಪಿಸುವಂತೆ ಒತ್ತಾಯಿಸಿದರು.

''ನಾಡಿನ ಹಾಗೂ ರಾಷ್ಟ್ರದ ಯಾವುದೇ ವ್ಯಕ್ತಿಗಳ ಬಗ್ಗೆ ಅಪಚಾರವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳ ಸಾಮಾಜಿಕ ವೈಜ್ಞಾನಿಕ ಹಾಗೂ ಶೈಕ್ಷಣಿಕ ರಾಜ್ಯ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯು ಇತ್ತೀಚಿನ ದಿನಗಳಲ್ಲಿ ತನ್ನ ಒಳ್ಳೆಯ ಕೆಲಸಗಳಿಗಿಂತ ತನ್ನ ಕೆಟ್ಟ ನಿರ್ಣಯದಿಂದ ವಿವಾದದ ಕೇಂದ್ರಬಿಂದುವಾಗಿ ಮಾರ್ಪಟ್ಟಿರುವುದು ಆಘಾತಕಾರಿಯಾಗಿದೆ. ಯಾವುದೇ ಸಾಂವಿಧಾನಿಕ ಮಾನ್ಯತೆ ಇಲ್ಲದ ಹಾಗೂ ಶೈಕ್ಷಣಿಕ ವ್ಯವಸ್ಥೆಯ ಅನುಭವ ಇಲ್ಲದ ಇಂದಿನ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ, 6 ರಿಂದ 10ನೇ ತರಗತಿಗಳ ಪಠ್ಯಪುಸ್ತಕಗಳನ್ನು ತಮ್ಮಿಷ್ಟದಂತೆ ಪುನರ್ ಪರಿಷ್ಕರಣೆ ಮಾಡಿರುವುದಲ್ಲದೆ, ಈ ನಾಡಿನ ನೆಲ- ಜಲ-ಭಾಷೆ-ಸಂಸ್ಕೃತಿಯ ಜೀವಂತ ಸಾಕ್ಷಿಗಳಂತಿರುವ ಗುರುಗಳ ಗುರು ಬಸವಣ್ಣ, ರಾಷ್ಟ್ರಕವಿ ಕುವೆಂಪು ಹಾಗೂ ಇನ್ನಿತರ ಮಹಾನ್ ವ್ಯಕ್ತಿಗಳ ಬಗೆಗಿನ ವಿಚಾರಗಳನ್ನು ಬೇಕಂತಲೇ ತಪ್ಪಾಗಿ ತಿರುಚಿರುವುದು ಈ ನಾಡಿಗೆ ಬಗೆದ ದ್ರೋಹವಾಗಿದೆ'' ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಸಂಘದ ಅಧ್ಯಕ್ಷ ನಟರಾಜ ಶಿವಣ್ಣ, ಕಾರ್ಯಾಧ್ಯಕ್ಷ ಬಸವರಾಜು, ಕಲ್ಲಹಳ್ಳಿ ಕುಮಾರ್, ಮಹೇಶ್ ಸೋಸಲೆ,  ಉಪಾಧ್ಯಕ್ಷರಾದ ರಾಜೇಶ್, ಸಿದ್ದಪ್ಪಾಜಿ, ಕೆ.ಮಹದೇವಸ್ವಾಮಿ, ಚಂದ್ರು, ಎಂ.ಡಿ.ಬಸವರಾಜು, ಮಣಿಯಪ್ಪ, ಕಾರ್ತಿಕ್, ಸುರೇಶ್ ಮನಗಳ್ಳಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News