ಕಲಬುರಗಿಯ ಕಮಲಾಪುರ ಬಳಿ ಭೀಕರ ಅಪಘಾತ; ಹೊತ್ತಿ ಉರಿದ ಬಸ್, ನಾಲ್ಕಕ್ಕೂ ಹೆಚ್ಚು ಮಂದಿ ಸಜೀವ ದಹನ ಶಂಕೆ
ಕಲಬುರಗಿ: ಬಸ್ ಒಂದು ಟೆಂಪೊಗೆ ಢಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ನಾಲ್ಕಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಹೊರವಲಯದಲ್ಲಿ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ತೆಲಂಗಾಣದ ಹೈದರಬಾದ್‌ನಿಂದ ಗೋವಾಕ್ಕೆ ತೆರಳುತ್ತಿದ್ದ 29 ಜನ ಪ್ರಯಾಣಿಕರಿದ್ದ ಖಾಸಗಿ ಬಸ್ ಟೆಂಪೊ ಒಂದಕ್ಕೆ ಢಿಕ್ಕಿ ಹೊಡೆದು ಕಂದಕಕ್ಕೆ ಉರುಳಿ ಬಿದ್ದಿದೆ. ಢಿಕ್ಕಿಯಾದ ರಭಸಕ್ಕೆ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.
ಚಾಲಕ ಸೇರಿ ಬಸ್ನಲ್ಲಿ ಸುಮಾರು 35 ಜನರಿದ್ದರು ಎಂದು ಅಂದಾಜಿಸಲಾಗಿದೆ. 12 ಜನರನ್ನು ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗಿದೆ.
ಘಟನೆಗೆ ಸಂಬಧಿಸಿ ಪ್ರತಿಕ್ರಿಯಿಸಿರುವ ಕಲಬುರಗಿ ಎಸ್ ಪಿ ಇಶಾಪಂತ್, 'ಬೆಳಗ್ಗೆ 6:30ರ ಸುಮಾರಿಗೆ ಬಸ್ ದುರಂತ ಸಂಭವಿಸಿದೆ. ಬೆಳಗ್ಗೆ 6:50ರ ವೇಳೆ ನಮಗೆ ಮಾಹಿತಿ ಬಂತು. ಬಸ್ ನಲ್ಲಿರುವ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂದು ನಿಖರವಾಗಿ ಹೇಳಲು ಆಗಲ್ಲ' ಎಂದು ತಿಳಿಸಿದ್ದಾರೆ.