ಮಥುರಾ : ಸಿಬ್ಬಂದಿ, ಹೆಸರು ಬದಲಾಯಿಸಿದ ಮುಸ್ಲಿಮ್‌ ಹೋಟೆಲ್‌ ಮಾಲಕ

Update: 2022-06-03 05:36 GMT
(Pic - Anil Agarwal)

ಮಥುರಾ : ಶ್ರೀ ಕೃಷ್ಣನ ಜನ್ಮಭೂಮಿ ಎಂದು ತಿಳಿಯಲಾದ ಮಥುರಾ ದೇವಸ್ಥಾನ ಸಂಕೀರ್ಣದ ಪಕ್ಕದ ಶಾಹಿ ದರ್ಗಾ ಕಟ್ಟಡವನ್ನು ತೆರವುಗೊಳಿಸಬೇಕೆಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾದಂದಿನಿಂದ ಈ ದೇವಳ ನಗರಿಯಲ್ಲಿ ಮುಸ್ಲಿಂ ಸಮುದಾಯದವರ ಜೀವನ ಅಷ್ಟೊಂದು ಸುಲಭವಾಗಿಲ್ಲ ಎಂಬುದು ಹಲವು ಸಮುದಾಯ ಮಂದಿಯ ಭಾವನೆ.

ಪರಿಸ್ಥಿತಿ ಎಲ್ಲಯವರೆಗೆ ಹೋಗಿದೆಯೆಂದರೆ ನಗರದಲ್ಲಿ ಹಲವಾರು ವರ್ಷಗಳಿಂದ ಹೋಟೆಲ್ ಒಂದನ್ನು ನಡೆಸುತ್ತಿರುವ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ರೆಸ್ಟೋರೆಂಟ್ ಹೆಸರನ್ನೂ ಬದಲಿಸಿದ್ದಾರಲ್ಲದೆ ಅಲ್ಲಿನ ಸಿಬ್ಬಂದಿ ಹಾಗೂ ಆಹಾರದಲ್ಲೂ ಮಾರ್ಪಾಟು ತಂದು ಈಗಿನ ಸನ್ನಿವೇಶಕ್ಕೆ ಹೊಂದಿಕೊಳ್ಳುವ ಯತ್ನ ನಡೆಸಿದ್ದಾರೆ.

"ನಗರದಲ್ಲಿ ಮುಸ್ಲಿಂ ಆಗಿರುವುದು ಕಷ್ಟಕರವಾಗಿ ಬಿಟ್ಟಿದೆ. ನನ್ನನ್ನು ಸದಾ ಶಂಕೆಯಿಂದ ನೋಡಲಾಗುತ್ತದೆ'' ಎಂದು 56 ವರ್ಷದ ಮೊಹಮ್ಮದ್ ಝಮೀಲ್ ಹೇಳುತ್ತಾರೆ.

ಮಥುರಾದ ದರೇಸಿ ರಸ್ತೆಯಲ್ಲಿ ಅವರು 1974ರಿಂದ ನಡೆಸುತ್ತಿದ್ದ ತಾಜ್ ಹೋಟೆಲ್ ಅನ್ನು ಡಿಸೆಂಬರ್ 2021ರಲ್ಲಿ ಅವರು ರಾಯಲ್ ಫ್ಯಾಮಿಲಿ ರೆಸ್ಟೋರೆಂಟ್ ಎಂದು ಪರಿವರ್ತಿಸಿದ್ದಾರೆ.

"ನಾವು ಅನಿಶ್ಚಿತತೆಯ ಸಮಯದಲ್ಲಿ ಸದಾ ಭೀತಿಯಲ್ಲಿರುವಂತಾಗಿದೆ. ನಮ್ಮ  ಜೀವನೋಪಾಯಕ್ಕಾಗಿ ನಮ್ಮ ಗುರುತುಗಳನ್ನು ಅಡಗಿಸುವ ಅನಿವಾರ್ಯತೆ ಎದುರಾಗಿದೆ. ಈ ರೆಸ್ಟೋರೆಂಟ್ ದಶಕಗಳಿಂದ ನನ್ನ ಕುಟುಂಬದ ಆದಾಯ ಮೂಲವಾಗಿದೆ. ನನಗಿಂತ ಮುಂಚೆ ನನ್ನ ಹೆತ್ತವರು ಇದನ್ನು ನಡೆಸುತ್ತಿದ್ದರು. ಈ ಕುಟಂಬದ ಆಸ್ತಿಯ ಹೆಸರನ್ನು ಬದಲಾಯಿಸುವುದು ನನಗೆ ದುಃಖಕರವಾಗಿತ್ತು'' ಎಂದು ಅವರು ಹೇಳುತ್ತಾರೆ.

ಅವರು ತಮ್ಮ ಎಂಟು ಮುಸ್ಲಿಂ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಅವರ ಸ್ಥಾನಕ್ಕೆ ಹಿಂದುಗಳನ್ನು ನೇಮಿಸಿದ್ದಾರೆ. "ಅವರು ಸಸ್ಯಾಹಾರಿ ಆಹಾರವನ್ನು ಚೆನ್ನಾಗಿ ತಯಾರಿಸುತ್ತಾರೆ. ರಾಜ್ಯ ಸರಕಾರ  ಕಳೆದ ವರ್ಷ ಇಲ್ಲಿ ಮಾಂಸ ಮತ್ತು ಮದ್ಯ ಮಾರಾಟ ನಿಷೇಧಿಸಿದ ನಂತರ ಸಸ್ಯಾಹಾರ ಮಾರಾಟ ಮಾಡಲಷ್ಟೇ ನಮಗೆ ಅನುಮತಿಯಿದೆ'' ಎಂದು ಅವರು ಹೇಳುತ್ತಾರೆ.

ಚಿಕನ್ ಕೂರ್ಮ, ಚಿಕನ್ ಚಂಗೇಝಿ ಹಾಗೂ ನಿಹಾರಿ ಬದಲು ಈಗ ಅವರ ಮೆನುವಿನಲ್ಲಿ ಪನೀರ್ ಚಂಗೇಝಿ, ಪನೀರ್ ಕೂರ್ಮ, ಕಡಾಯಿ ಪನೀರ್, ಶಾಹಿ ಪನೀರ್ ಮತ್ತು ದಾಲ್ ತಡ್ಕಾ ಇವೆ.

"ನಾನು ಕ್ಯಾಶ್ ಕೌಂಟರ್‌ ನಲ್ಲಿ ಕುಳಿತುಕೊಳ್ಳುವುದಿಲ್ಲ, ಇದರಿಂದ ಗ್ರಾಹಕರು ಇಲ್ಲಿಗೆ ಬರುವುದಿಲ್ಲವೋ ಎಂಬ ಆತಂಕ, ನನ್ನ ಸ್ಥಾನದಲ್ಲಿ ಕುಳಿತುಕೊಳ್ಳಲು ಹಿಂದು ಸಿಬ್ಬಂದಿಯನ್ನು ನೇಮಿಸಿದ್ದೇನೆ'' ಎಂದು ಝಮೀಲ್ ಹೇಳುತ್ತಾರೆ.

ಹೋಟೆಲಿನ ಹೊಸ ಹೆಸರು, ಮೆನು, ಸಿಬ್ಬಂದಿ ಎಲ್ಲದಕ್ಕೂ ಹೊಂದಿಕೊಳ್ಳಲು ಅವರಿಗೆ ಎರಡು ತಿಂಗಳೇ ಬೇಕಾಯಿತು.

"ನಾನು ಬಹಳಷ್ಟು ನಷ್ಟ ಅನುಭವಿಸಿದ್ದೇನೆ. ಕೆಲ ಸಮಾಜ ವಿರೋಧಿ ಶಕ್ತಿಗಳು ಈಗಲೂ ಶಾಂತಿಯುತವಾಗಿ  ನನ್ನ ಉದ್ಯಮ ನಡೆಸಿಕೊಂಡು ಹೋಗಲು ಬಿಡುತ್ತಿಲ್ಲ, ಹಿಂದೆ ದಿನಕ್ಕೆ ರೂ 14,000 ದಿಂದ ರೂ 15,000 ಆದಾಯ ದೊರೆಯುತ್ತಿದ್ದರೆ ಈಗ ರೂ 3,000 ದಿಂದ ರೂ 4,000 ಗೆ ಅದು ಇಳಿದಿದೆ. ಹಿಂದೆ ಇದೊಂದು ಶಾಂತಿಯುತ ಪಟ್ಟಣವಾಗಿತ್ತು ಎಲ್ಲರೂ ಸೌಹಾರ್ದತೆಯಿಂದ ಇದ್ದರು ಈಗ ಹಾಗಿಲ್ಲ, ಮನೆಯಲ್ಲೂ ಮಾಂಸಾಹಾರ ಸೇವಿಸಲು ಭಯ ಪಡುವ ವಾತಾವರಣ ಇದೆ. ಮಾಂಸ ನಿಷೇಧ ಕುರಿತು ಹೈಕೋರ್ಟಿಗೆ ಅಪೀಲು ಸಲ್ಲಿಸಿದ್ದೇವೆ ಆದರೆ ಇನ್ನೂ ಪ್ರಕರಣ ಇತ್ಯರ್ಥವಾಗಿಲ್ಲ. ಅಷ್ಟು ಹೊತ್ತು ಕಾಯುತ್ತಾ ನಷ್ಟ ಅನುಭವಿಸುವ ಬದಲು ನನ್ನ ಜೀವನೋಪಾಯಕ್ಕಾಗಿ ರೆಸ್ಟೋರೆಂಟ್ ನಲ್ಲೇ ಮಾರ್ಪಾಟು ತಂದಿದ್ದೇನೆ'' ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News