ರೋಹಿತ್ ಚಕ್ರತೀರ್ಥ ಬಂಧನಕ್ಕೆ ಆಗ್ರಹಿಸಿ ಜನಸಾಮಾನ್ಯ ಒಕ್ಕಲಿಗರ ವೇದಿಕೆಯಿಂದ ಪ್ರತಿಭಟನೆ
ಬೆಂಗಳೂರು, ಜೂ.3: ಕುವೆಂಪು ರಚಿಸಿದ ನಾಡಗೀತೆಯನ್ನು ಅಶ್ಲೀಲವಾಗಿ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ರೋಹಿತ್ ಚಕ್ರತೀರ್ಥರನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಉಚ್ಛಾಟಿಸಬೇಕು ಹಾಗೂ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಜನಸಾಮಾನ್ಯ ಒಕ್ಕಲಿಗರ ವೇದಿಕೆ ಪ್ರತಿಭಟನೆ ನಡೆಸಿತು.
ಶುಕ್ರವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಎಎಪಿ ಮುಖಂಡ, ಜನಸಾಮಾನ್ಯ ಒಕ್ಕಲಿಗರ ವೇದಿಕೆ ರಾಜ್ಯಾಧ್ಯಕ್ಷ ಬಿ.ಟಿ.ನಾಗಣ್ಣ ಅವರು, ಕುವೆಂಪುರವರು ನಾಡು ಕಂಡ ಅತ್ಯಂತ ಶೇಷ್ಠ ಸಾಹಿತಿಗಳಲ್ಲಿ ಒಬ್ಬರು. ಅವರು ರಚಿಸಿದ ನಾಡಗೀತೆಯನ್ನು ಅಶ್ಲೀಲವಾಗಿ ತಿರುಚಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ರೋಹಿತ್ ಚಕ್ರತೀರ್ಥ, ಇಡೀ ನಾಡಿಗೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.
ನಾಡಗೀತೆ ತಿರುಚಿದ್ದು ಮಾತ್ರವಲ್ಲದೇ, ಕುವೆಂಪುರವರನ್ನು ವಿಶ್ವಮಾನವ ಎಂದು ಕರೆಯುವುದನ್ನೂ ವ್ಯಂಗ್ಯವಾಡಿದ್ದಾರೆ. ಕನ್ನಡ ಧ್ವಜವನ್ನು ತನ್ನ ಒಳಉಡುಪಿಗೆ ಹೋಲಿಸಿ ವ್ಯಂಗ್ಯವಾಡಿದ್ದಾನೆ. ಕುವೆಂಪುರವರ ಆಯ್ದ ಸಾಲುಗಳನ್ನು ಮುಂದಿಟ್ಟುಕೊಂಡು ಅವರ ವಿರುದ್ಧಅವಹೇಳನಕಾರಿಯಾಗಿ ಪತ್ರಿಕೆಯೊಂದಕ್ಕೆ ಲೇಖನವನ್ನೂ ಈತ ಬರೆದಿದ್ದ. ಇಂತಹವನಿಗೆ ಪಠ್ಯಪುಸ್ತಕ ಪರಿಶೀಲನಾ ಸಮಿತಿಯಂತಹ ಜವಾಬ್ದಾರಿಯುತ ಸ್ಥಾನ ನೀಡುವ ಮೂಲಕ ರಾಜ್ಯ ಸರಕಾರ ದೊಡ್ಡ ತಪ್ಪು ಮಾಡಿದೆ ಎಂದು ಹೇಳಿದರು.
ರಾಜ್ಯ ಸರಕಾರವು ಪಠ್ಯಪುಸ್ತಕ ಪರಿಶೀಲನಾ ಸಮಿತಿಯಿಂದ ರೋಹಿತ್ ಚಕ್ರತೀರ್ಥನನ್ನು ವಜಾ ಮಾಡಬೇಕು ಹಾಗೂ ಆತನ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡು ಶೀಘ್ರವೇ ಬಂಧಿಸಬೇಕು. ಇದು ನಾಡಿನ ಸಮಸ್ತ ಒಕ್ಕಲಿಗರ ಸ್ವಾಭಿಮಾನದ ಪ್ರಶ್ನೆ. ರಾಷ್ಟ್ರಕವಿ ಕುವೆಂಪುರವರಿಗೆ ಮಾಡಿದ ಈ ಅವಮಾನವನ್ನು ನೋಡಿಕೊಂಡು ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಬಿ.ಟಿ.ನಾಗಣ್ಣ ಹೇಳಿದರು.
ಹಿರಿಯ ವಕೀಲ ನಂಜಪ್ಪ ಕಾಳೇಗೌಡ ಮಾತನಾಡಿ, ಈಗಾಗಲೇ ಅನೇಕ ಸ್ವಾಮೀಜಿಗಳು, ಸಾಹಿತಿಗಳು, ಸಂಘಟನೆಗಳು, ಗಣ್ಯ ವ್ಯಕ್ತಿಗಳು ರೋಹಿತ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ ಎಂದರು. ಪ್ರತಿಭಟನೆಯಲ್ಲಿ ಚನ್ನಪ್ಪ ಕಾಳೇಗೌಡ, ಮಲ್ಲೇಶ್ ಗೌಡ, ಮಂಜುನಾಥ್, ಚನ್ನಕೇಶವ, ನರಸಿಂಹಮೂರ್ತಿ, ರವಿಗೌಡ, ಸಚಿನ್ ಮತ್ತಿತರರು ಉಪಸ್ಥಿತರಿದ್ದರು.
ಕೋರ್ಟ್ ಮೆಟ್ಟಿಲೇರಲಿದ್ದೇವೆ
ನಾಡಗೀತೆಗೆ ಅಪಮಾನ ಮಾಡಿದ ರೋಹಿತ್ ಚಕ್ರತೀರ್ಥ ವಿರುದ್ಧ ಕೋರ್ಟ್ ಮೆಟ್ಟಿಲೇರಲಿದ್ದೇವೆ ಹಾಗೂ ಚಕ್ರತೀರ್ಥ ವಿರುದ್ಧದ ಹೋರಾಟಕ್ಕೆ ಚಳುವಳಿ ರೂಪಿಸುವ ಕುರಿತಂತೆ ಸದ್ಯದಲ್ಲಿಯೇ ಸಭೆ ನಡೆಸಲಿದ್ದೇವೆ ಎಂದು ಜನಸಾಮಾನ್ಯ ಒಕ್ಕಲಿಗರ ವೇದಿಕೆ ರಾಜ್ಯಾಧ್ಯಕ್ಷ ಬಿ.ಟಿ.ನಾಗಣ್ಣ ತಿಳಿಸಿದರು.