ಕಲಬುರಗಿಯಲ್ಲಿ ಬಸ್ ಅಪಘಾತ ಪ್ರಕರಣ | ಮೃತರಿಗೆ ಪರಿಹಾರದ ಬಗ್ಗೆ ಸಿಎಂ ಜತೆ ಚರ್ಚಿಸಿ ತೀರ್ಮಾನ: ಸಚಿವ ಶ್ರೀರಾಮುಲು

Update: 2022-06-03 12:13 GMT

ಬೆಂಗಳೂರು, ಜೂ. 3: ‘ಗೋವಾದಿಂದ ಹೈದರಾಬಾದ್ ತೆರಳುತ್ತಿದ್ದ ಖಾಸಗಿ ಬಸ್ ಕಲಬುರಗಿಯಲ್ಲಿ ಬೆಂಕಿಗಾಹುತಿಯಾದ ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದು ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಸಮಾಲೋಚನೆ ನಡೆಸಿ ತೀರ್ಮಾನ ಮಾಡಲಾಗುವುದು' ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರುತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬೆಳಗ್ಗೆ 6.30ರ ಸುಮಾರಿಗೆ ಗೋವಾದಿಂದ ಹೈದರಾಬಾದ್ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು, ಬೆಂಕಿಗೆ ಆಹುತಿಯಾಗಿದೆ. ಕಲಬುರ್ಗಿಯಲ್ಲಿ ನಡೆದ ಘಟನೆಯಲ್ಲಿ ಏಳು ಜನ ಮೃತಪಟ್ಟಿದ್ದಾರೆ. ಆ ಪೈಕಿ ಇಬ್ಬರು ಮಕ್ಕಳು ಇದ್ದಾರೆಂದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ' ಎಂದರು.

‘ಒಂದೇ ಕುಟುಂಬದ ಒಟ್ಟು 35 ಜನ ಪ್ರಯಾಣ ಮಾಡುತ್ತಿದ್ದರು. ಟೆಂಪೋ ಟ್ರಾವೆಲರ್ ಮುಂದೆ ಬಂದಾಗ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ಘಟನೆ ಆಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಧಿಕಾರಿಗಳನ್ನು ಕಳಿಸಿಕೊಟ್ಟಿದ್ದೇನೆ, ತನಿಖೆ ನಡೆಯುತ್ತಿದೆ. ಸದ್ಯ ಪ್ರಾಥಮಿಕ ವರದಿ ಬಂದಿದೆ, ತನಿಖೆ ಪೂರ್ಣ ಆದ ಬಳಿಕ ಮಾಹಿತಿ ಸಿಗುತ್ತದೆ' ಎಂದು ಶ್ರೀರಾಮುಲು ತಿಳಿಸಿದರು.

‘ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾವಗಡ ಅಪಘಾತ ಸಂದರ್ಭದಲ್ಲಿ ರಸ್ತೆ ಸುರಕ್ಷತಾ ಅನುದಾನ ಬಳಕೆ ಮಾಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಆ ಕೆಲಸಗಳು ನಡೆಯುತ್ತಿವೆ. ಖಾಸಗಿ ವಾಹನಗಳು ನಿಯಮ ಮೀರಿ ನಡೆದುಕೊಂಡರೆ ಕ್ರಮ ಕೈಗೊಳ್ಳುತ್ತೇವೆ' ಎಂದು ಶ್ರೀರಾಮುಲು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News