ರಾಜ್ಯದ್ರೋಹಿಗೆ ರಾಜ್ಯಸಭೆ ಟಿಕೆಟ್: ನಿರ್ಮಲಾ ಸೀತಾರಾಮನ್ ವಿರುದ್ಧ ಟಿ.ಜೆ.ಅಬ್ರಹಾಂ ವಾಗ್ದಾಳಿ

Update: 2022-06-03 12:45 GMT

ಬೆಂಗಳೂರು, ಜೂ.3: ನಮ್ಮ ರಾಜ್ಯಕ್ಕೆ ಅಡ್ಡಿ ಮಾಡಿದವರು ರಾಜ್ಯದ್ರೋಹಿ ಆಗಿದ್ದು, ರಾಜ್ಯಸಭೆ ಟಿಕೇಟ್ ನೀಡಬಾರದು. ಈ ನಿಟ್ಟಿನಲ್ಲಿ ನಿರ್ಮಲಾ ಸೀತಾರಾಮನ್ ಸಚಿವೆ ಆಗಿದ್ದಾಗ, ರಾಜ್ಯಕ್ಕೆ ಸಕಾಲದಲ್ಲಿ ನೆರವು ನೀಡದೆ ದ್ರೋಹವೆಸಗಿದ್ದಾರೆ. ಆದರೂ ಬಿಜೆಪಿ ಅವರನ್ನು ರಾಜ್ಯಸಭೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ. ಇದರ ವಿರುದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಹೋರಾಟ ಮಾಡದೆ ಮೌನವಾಗಿ ಇರುವುದು ವಿಪರ್ಯಾಸವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಕಿಡಿ ಕಾರಿದ್ದಾರೆ. 

ಶುಕ್ರವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಹಾರಕ್ಕಾಗಿ 30 ಸಾವಿರ ಕೋಟಿ ರೂ. ಕೇಳಿದರೆ, ಅವರು ಕೊಟ್ಟಿದ್ದು 3,412 ಕೋಟಿ ರೂ. ಮಾತ್ರ. ಎರಡು ವರ್ಷಗಳಿಂದ 14,881 ಕೋಟಿ ರೂ. ಜಿಎಸ್ಟಿ ಪರಿಹಾರ ನಿಧಿಯನ್ನು ಬಾಕಿಯಾಗಿ ಕೇಂದ್ರ ಸರಕಾರವು ಉಳಿಸಿಕೊಂಡಿದ್ದು, ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯ ಸಭೆಯ ಟಿಕೇಟ್ ದೊರೆತಾಗ ರಾಜ್ಯಕ್ಕೆ ಬರಬೇಕಿದ್ದ ಬಾಕಿಯಲ್ಲಿ 8,636 ಕೋಟಿ ರೂ. ಮಾತ್ರ ಬಂದಿದೆ. ಇಂತವರನ್ನು ರಾಜ್ಯದಿಂದ ಆರಿಸಿ ಕಳುಹಿಸಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಹಾಗಾಗಿ ರಾಜ್ಯಸಭೆಗೆ ಸ್ಪರ್ಧಿಸಲು ನಿರ್ಮಲಾ ಸೀತಾರಾಮನ್‍ಗೆ ಟಿಕೆಟ್ ಕೊಟ್ಟಿದ್ದು ಸರಿಯೇ, ರಾಜ್ಯಸಭೆಗೆ ಸ್ಪರ್ಧಿಸಲು ನಮ್ಮ ರಾಜ್ಯದಲ್ಲಿ ನಾಯಕರಿಲ್ಲವೇ ಎಂದು ಪ್ರಶ್ನಿಸಿದ ಅವರು, ನಿರ್ಮಲಾ ಸೀತಾರಾಮನ್ ಅವರಿಗೆ ಮತ ಹಾಕುವ ಚುನಾಯಿತ ಪ್ರತಿನಿಧಿಗಳು ರಾಜ್ಯದ್ರೋಹಿಗಳೇ ಆಗಿರುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News