ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ 6 ಅಭ್ಯರ್ಥಿಗಳ ಸ್ಪರ್ಧೆ; ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಾಲಿಗೆ ಪ್ರತಿಷ್ಠೆ
ಬೆಂಗಳೂರು, ಜೂ.3: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂ.10ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಆರು ಅಭ್ಯರ್ಥಿಗಳು ಸಲಿಸಿದ್ದ ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿತ್ತು. ಆದರೆ, ಯಾವೊಬ್ಬ ಅಭ್ಯರ್ಥಿಯು ನಾಮಪತ್ರವನ್ನು ಹಿಂಪಡೆಯದೆ ಇರುವುದರಿಂದ, ಚುನಾವಣೆ ಅನಿವಾರ್ಯವಾಗಿದೆ.
ಆಡಳಿತರೂಢ ಬಿಜೆಪಿಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಶಾಸಕರಾದ ಜಗ್ಗೇಶ್ ಹಾಗೂ ಲಹರ್ ಸಿಂಗ್ ಸಿರೋಯಾ, ಕಾಂಗ್ರೆಸ್ ಪಕ್ಷದಿಂದ ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಹಾಗೂ ಮನ್ಸೂರ್ ಅಲಿ ಖಾನ್ ಮತ್ತು ಜೆಡಿಎಸ್ ಪಕ್ಷದಿಂದ ಮಾಜಿ ಸಂಸದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಪಕ್ಷವು 119 ಸ್ಥಾನವನ್ನು ಹೊಂದಿದೆ. ಅದರ ಜೊತೆ ಸ್ಪೀಕರ್, ಬಿಎಸ್ಪಿ ಶಾಸಕ ಮಹೇಶ್ ಹಾಗೂ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ನಾಗೇಶ್ ಬೆಂಬಲದೊಂದಿಗೆ 122 ಸ್ಥಾನಗಳನ್ನು ಹೊಂದಿದೆ.
ವಿರೋಧ ಪಕ್ಷ ಕಾಂಗ್ರೆಸ್ 69 ಸ್ಥಾನಗಳ ಜೊತೆಗೆ ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಬೆಂಬಲದೊಂದಿಗೆ 70 ಸ್ಥಾನಗಳನ್ನು ಹೊಂದಿದೆ. ಜೆಡಿಎಸ್ ಪಕ್ಷ 32 ಸ್ಥಾನಗಳನ್ನು ಹೊಂದಿದೆ.
ರಾಜ್ಯಸಭೆಯ ಚುನಾವಣೆಯ ಗೆಲುವಿಗಾಗಿ ಅಭ್ಯರ್ಥಿಗೆ ಕನಿಷ್ಠ 45 ಮತಗಳ ಅಗತ್ಯವಿದೆ. ವಿಧಾನಸಭೆಯಲ್ಲಿರುವ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ ಪಕ್ಷ ಇಬ್ಬರು ಹಾಗೂ ಕಾಂಗ್ರೆಸ್ ಪಕ್ಷ ಓರ್ವ ಸದಸ್ಯನನ್ನು ಅನಾಯಾಸವಾಗಿ ಗೆಲ್ಲಿಸಿಕೊಳ್ಳಲಿದೆ. ಅಭ್ಯರ್ಥಿಯ ಗೆಲುವಿಗೆ ಅಗತ್ಯವಿರುವ ಸಂಖ್ಯಾಬಲವನ್ನು ಹೊಂದಿಲ್ಲದಿದ್ದರೂ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಕುತೂಹಲ ಕೆರಳಿಸಿದೆ.
ನಾಲ್ಕನೆ ಸ್ಥಾನಕ್ಕೆ ಪೈಪೋಟಿ: ಬಿಜೆಪಿ ಪಕ್ಷದಿಂದ ನಿರ್ಮಲಾ ಸೀತಾರಾಮನ್ ಹಾಗೂ ಜಗ್ಗೇಶ್, ಕಾಂಗ್ರೆಸ್ ಪಕ್ಷದಿಂದ ಜೈರಾಮ್ ರಮೇಶ್ ಗೆಲುವು ನಿಶ್ಚಿತವಾಗಿದ್ದು, ನಾಲ್ಕನೆ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಲಹರ್ ಸಿಂಗ್, ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಹಾಗೂ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ನಡುವೆ ಪೈಪೋಟಿ ಎದುರಾಗಿದೆ.
ಬಹಿರಂಗ ಮತದಾನ: ರಾಜ್ಯಸಭೆ ಚುನಾವಣೆಯ ಮತದಾನವು ಬ್ಯಾಲೆಟ್ ಪೇಪರ್‍ನಲ್ಲಿ ಹಾಕುವುದರಿಂದ, ಶಾಸಕರು ಯಾರ ಪರವಾಗಿ ಮತ ಚಲಾಯಿಸಿದ್ದಾರೆ ಎಂಬುದನ್ನು ಆಯಾ ಪಕ್ಷದ ಏಜೆಂಟರಿಗೆ ತೋರಿಸಿ ಮತ ಪೆಟ್ಟಿಗೆಯಲ್ಲಿ ಹಾಕಬೇಕು. ಇದರಿಂದ, ಯಾರಾದರೂ ಅಡ್ಡಮತದಾನ ಮಾಡಿದರೆ ಕೂಡಲೆ ಗೊತ್ತಾಗುತ್ತದೆ.
ಕಾಂಗ್ರೆಸ್ ಶಾಸಕರಿಗೆ ವಿಪ್: ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಕಾಂಗ್ರೆಸ್ ಪಕ್ಷ ತನ್ನ ಶಾಸಕರಿಗೆ ವಿಪ್ ಜಾರಿಗೊಳಿಸಿದೆ. ಅಲ್ಲದೆ, ಚುನಾವಣೆ ಕುರಿತು ಚರ್ಚಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಜೂ.9ರಂದು ಸಂಜೆ 6 ಗಂಟೆಗೆ ನಗರದ ಖಾಸಗಿ ಹೊಟೇಲ್‍ನಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದಾರೆ.
ಮತ ಎಣಿಕೆಗೆ ಸೂತ್ರವಿದೆ: ವಿಧಾನಸೌಧದಲ್ಲಿ ಶುಕ್ರವಾರ ಸಂಜೆ ಈ ಕುರಿತು ಮಾಹಿತಿ ನೀಡಿದ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಇಂದು ಯಾವ ಅಭ್ಯರ್ಥಿಯೂ ನಾಮಪತ್ರ ಹಿಂಪಡೆದಿಲ್ಲ. ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಆರು ಮಂದಿ ಸ್ಪರ್ಧಿಸುತ್ತಿದ್ದಾರೆ ಎಂದರು.
ಜೂ.10 ರಂದು ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅಂದು ಸಂಜೆ 5 ಗಂಟೆಗೆ ಮತಗಳ ಎಣಿಕೆ ನಡೆದು, ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ರಾಜ್ಯಸಭಾ ಚುನಾವಣೆಯ ಮತಗಳ ಎಣಿಕೆಗೆ ಪ್ರತ್ಯೇಕ ಸೂತ್ರವಿದೆ. ಪ್ರತಿಯೊಂದು ಸ್ಥಾನದ ಗೆಲುವಿಗೂ ಕನಿಷ್ಠ 45 ಮತಗಳ ಅಗತ್ಯವಿದೆ. ಮೊದಲ ಸುತ್ತಿನಲ್ಲಿ ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಾಗಲಿದ್ದು, ಅದರಲ್ಲಿ ಸಿಂಧುತ್ವಗೊಂಡಿರುವ ಮತಗಳ ಆಧಾರದ ಮೇಲೆ ಅಭ್ಯರ್ಥಿಯ ಗೆಲುವಿಗೆ ಕೋಟಾ ನಿಗದಿಯಾಗಲಿದೆ ಎಂದು ವಿಶಾಲಾಕ್ಷಿ ತಿಳಿಸಿದರು.
ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳಿಗೆ ಚಲಾವಣೆಯಾಗಿರುವ ಮತಗಳ ಎಣಿಕೆ ಕಾರ್ಯ ಮುಕ್ತಾಯದ ನಂತರ, ನಾಲ್ಕನೆ ಸ್ಥಾನಕ್ಕೆ ಸಲ್ಲಿಕೆಯಾಗಿರುವ ಮೊದಲ ಹಾಗೂ ದ್ವಿತೀಯ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆಯಲಿದೆ. ಸದ್ಯಕ್ಕೆ ಯಾವುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಮತಗಳ ಎಣಿಕೆ ಕಾರ್ಯ ಪ್ರಾರಂಭವಾದಾಗ ಸ್ಪಷ್ಟವಾಗಿ ತಿಳಿಯಲಿದೆ ಎಂದು ಅವರು ಹೇಳಿದರು.
ವಿಧಾನಸಭೆಯಲ್ಲಿ ಒಟ್ಟು 225 ಸ್ಥಾನಗಳ ಪೈಕಿ ಬಿಜೆಪಿ-119, ಕಾಂಗ್ರೆಸ್-69, ಜೆಡಿಎಸ್-32, ಬಿಎಸ್ಪಿ-1, ಪಕ್ಷೇತರ-2, ಸ್ಪೀಕರ್-1 ಹಾಗೂ ನಾಮನಿರ್ದೇಶಿತ ಸದಸ್ಯ-1 ಸ್ಥಾನವಿದೆ. ಈ ಪೈಕಿ ನಾಮ ನಿರ್ದೇಶಿತ ಸದಸ್ಯರಿಗೆ ರಾಜ್ಯಸಭಾ ಚುನಾವಣೆಯಲ್ಲಿ ಮತದಾನದ ಹಕ್ಕು ಇಲ್ಲ.