ಚಕ್ರತೀರ್ಥ ಬಂಧನಕ್ಕೆ ಆಗ್ರಹಿಸಿ ಶೀಘ್ರದಲ್ಲೇ ನಿರ್ಮಲಾನಂದ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್ ರ್‍ಯಾಲಿ

Update: 2022-06-03 17:38 GMT
ರೋಹಿತ್ ಚಕ್ರತೀರ್ಥ

ಬೆಂಗಳೂರು, ಜೂ. 3: ‘ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ರಾಷ್ಟ್ರಕವಿ ಕುವೆಂಪು ಅವರಿಗೆ ಮಾಡಿದ್ದರೆನ್ನಲಾದ ಅವಮಾನ, ಪಠ್ಯ ಪುಸ್ತಕಗಳ ಬ್ರಾಹ್ಮಣೀಕರಣಗೊಳಿಸುವುದರ ವಿರುದ್ಧ ಹಾಗೂ ಚಕ್ರತೀರ್ಥ ಬಂಧನಕ್ಕೆ ಆಗ್ರಹಿಸಿ ‘ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ-ಕರ್ನಾಟಕ' ನಿರ್ಮಲಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

ಶುಕ್ರವಾರ ವಿಜಯನಗರದಲ್ಲಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ, ಲೇಖಕ ಎಲ್.ಎನ್.ಮುಕುಂದರಾಜ್, ಮಾಜಿ ಸಚಿವೆ ಬಿ.ಟಿ.ಲಲಿತನಾಯಕ್, ಡಾ. ರವೀಂದ್ರ, ಡಾ.ಆಂಜಿನಪ್ಪ, ಜಾಣಗೆರೆ ವೆಂಕಟರಾಮಯ್ಯ, ಕರವೇ ಶಿವರಾಮೇಗೌಡ ಸೇರಿದಂತೆ ವಿವಿಧ ಸಂಘಟನೆಗಳ, ವಿವಿಧ ಧರ್ಮಗಳ ಮುಖಂಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಮಾಡಲಾಗಿದೆ.

‘ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ರದ್ದು ಮಾಡಬೇಕು. ಪಠ್ಯ ಪುಸ್ತಕಗಳ ಪರಿಷ್ಕರಣೆ ಸಮಿತಿ ಮಾಡಿರುವ ಪಠ್ಯವನ್ನು ಕೈಬಿಟ್ಟು, ಹಿಂದಿನ ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯ ಪುಸ್ತಕಗಳನ್ನೇ ಮುಂದುವರಿಸಬೇಕು. ರಾಷ್ಟ್ರಕವಿ ಕುವೆಂಪು ಹಾಗೂ ನಾಡಗೀತೆ, ಕನ್ನಡ ಬಾವುಟಕ್ಕೆ ಅವಮಾನ ಮಾಡಿ ಚಕ್ರತೀರ್ಥ ಅವರನ್ನು ಬಂಧಿಸಿ, ಗಡಿಪಾರು ಮಾಡಬೇಕು. ಪಿಯುಸಿ ಪಠ್ಯ ಪರಿಷ್ಕರಣೆಯನ್ನು ಕೈಬಿಡಬೇಕು' ಎಂದು ಸಮಿತಿ ನೇತೃತ್ವದಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಆಗ್ರಹಿಸಲು ನಿರ್ಧರಿಸಲಾಗಿದೆ ಎಂದು ಸಭೆಯ ವಿವರಗಳನ್ನು ಹಿರಿಯ ಕವಿ ಎಲ್.ಎನ್.ಮುಕುಂದರಾಜ್ ಪತ್ರಿಕೆಗೆ ತಿಳಿಸಿದ್ದಾರೆ. 

ಇದೇ ಸಂದರ್ಭದಲ್ಲಿ ಕುವೆಂಪು ಅವರು ರಚಿಸಿರುವ ನಾಡಗೀತೆಗೆ ಅವಹೇಳನ ಮಾಡಿದ ರೋಹಿತ್ ಚಕ್ರತೀರ್ಥನ ವಿರುದ್ಧ ಕೋರ್ಟ್‍ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಲಾಗಿದ್ದು, ಅದಕ್ಕೆ ಬೇಕಾದ ಹಣಕಾಸಿನ ನೆರವನ್ನು ನೀಡುವುದಾಗಿ ಖ್ಯಾತ ವಕೀಲ ಸಿ.ಎಚ್.ಹನುಮಂತರಾಯ ಅವರು ಸಭೆಗೆ ತಿಳಿಸಿದ್ದಲ್ಲದೆ, ಚಕ್ರತೀರ್ಥ ಅವರನ್ನು ಸಮರ್ಥನೆ ಮಾಡುತ್ತಿರುವ ಸಚಿವರು ಹಾಗೂ ಶಾಸಕರನ್ನು ತಮ್ಮ ಸ್ಥಾನಗಳಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿ ರ್ಯಾಲಿ ನಡೆಸಲಾಗುವುದು ಎಂದು ಸಮಿತಿ ಮುಖಂಡರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News