ಮಂಡ್ಯ | ಹಣ ದುರುಪಯೋಗ ಆರೋಪ: ಜಕ್ಕನಹಳ್ಳಿ ಪಿಡಿಒ, ಎಸ್‍ಡಿಎಎ ಅಮಾನತು

Update: 2022-06-03 16:13 GMT
ಸಾಂದರ್ಭಿಕ ಚಿತ್ರ

ಮಂಡ್ಯ, ಜೂ.3: ಹಣ ದುರುಪಯೋಗ ಆರೋಪ ಹಿನ್ನೆಲೆಯಲ್ಲಿ ಪಾಂಡವಪುರ ತಾಲೂಕು ಜಕ್ಕನಹಳ್ಳಿ ಗ್ರಾಮ ಪಂಚಾಯತ್ ಪಿಡಿಒ ಪಿ.ಶಿವಣ್ಣ ಹಾಗೂ ಎಸ್.ಡಿ.ಎ.ಎ. ಲೀಲಾವತಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಸಿಇಎ ಜಿ.ಆರ್.ಜೆ. ದಿವ್ಯಾಪ್ರಭು ಆದೇಶಿಸಿದ್ದಾರೆ.

ಅಧಿಕಾರ ದುರುಪಯೋಗ, ನಿಯಮಾವಳಿಗಳ ಉಲ್ಲಂಘನೆ, ನಿರ್ಲಕ್ಷ್ಯತೆ ಹಾಗೂ ಸರಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಆರೋಪಿತ ನೌಕರರನ್ನು ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ. 

ಆರೋಪಿತ ನೌಕರರು ಅಮಾನತು ಅವಧಿಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ 1958ರ ನಿಯಮನ್ವಯ ಜೀವನಾಧಾರ ಭತ್ತೆ ಪಡೆಯಲು ಅರ್ಹರು ಹಾಗೂ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಕೇಂದ್ರಸ್ಥಾನ ಬಿಡಬಾರದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

15ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯತ್ ಅಧ್ಯಕ್ಷರ ಡಾಂಗಲ್ ಕೀ ಅನ್ನು ದುರುಪಯೋಗಪಡಿಸಿಕೊಂಡು ಹಣ ಸೆಳೆದಿದ್ದಾರೆ ಎನ್ನುವ ದೂರು ಸ್ವೀಕೃತವಾಗಿತ್ತು. ಈ ಹಿನ್ನೆಲೆಯಲ್ಲಿ ಪಾಂಡವಪುರ ತಾಲೂಕು ಪಂಚಾಯತ್  ಕಾರ್ಯನಿರ್ವಾಹಕ ಅಧಿಕಾರಿ ಸಹಾಯಕ ಲೆಕ್ಕಾಧಿಕಾರಿ, ವ್ಯವಸ್ಥಾಪಕರು ಹಾಗೂ ಪ್ರಥಮ ದರ್ಜೆ ಸಹಾಯಕರನ್ನು ಒಳಗೊಂಡ ತಂಡ ರಚಿಸಿ ತನಿಖೆ ನಡೆಸಿದ್ದರು. ಅಲ್ಲದೇ, ಉಪ ಕಾರ್ಯದರ್ಶಿ (ಆಡಳಿತ) ಅವರ ನೇತೃತ್ವದ ತಂಡವು ಪ್ರತ್ಯೇಕವಾಗಿ ತನಿಖೆ ಕೈಗೊಂಡಿತ್ತು.

ಸದರಿ ತಂಡಗಳು ಗ್ರಾಮ ನೈರ್ಮಲ್ಯ ಮತ್ತು ಇತರೆ ಸಾಮಾಗ್ರಿಗಳ ಖರೀದಿಯಲ್ಲಿ ಯಾವುದೇದಾಖಲಾತಿಗಳನ್ನು ನಿರ್ವಹಿಸದಿರುವುದು ಮತ್ತು ನೇರವಾಗಿ ಹಣ ಪಾವತಿ ಮಾಡಿರುವುದನ್ನು ಪತ್ತೆ ಹಚ್ಚಿತ್ತು. ಸುಮಾರು 19,91,642 ರೂ. ದುರುಪಯೋಗ ಆಗಿರುವ ಬಗ್ಗೆ ವರದಿ ಸಲ್ಲಿಸಿತ್ತು.

ಈ ಹಿನ್ನೆಲೆಯಲ್ಲಿ ಹಣ ದುರುಪಯೋಗಕ್ಕೆ ಕಾರಣದ ಪಿಡಿಒ ಮತ್ತು ಎಸ್.ಡಿ.ಎ.ಎ. ವಿರುದ್ಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪಾಂಡವಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿರವರು ದೂರು ದಾಖಲಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿರವರಿಗೆ ವರದಿ ಸಲ್ಲಿಸಿದ್ದರು.

ಆರೋಪಿತ ನೌಕರರ ವಿರುದ್ಧ ಕಲಂ-406,408, 409 ಹಾಗೂ 34 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News