ವಿಧಾನಸಭೆ ಚುನಾವಣೆಗೆ ಹೊಸದುರ್ಗ ಕ್ಷೇತ್ರದಿಂದ ಸ್ಪರ್ಧೆ ವಿಚಾರ: ಬಿ.ವೈ.ವಿಜಯೇಂದ್ರ ಹೇಳಿದ್ದೇನು?

Update: 2022-06-03 17:07 GMT

ಹೊಸದುರ್ಗ, ಜೂ.3: ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ  ಬಿ.ವೈ.ವಿಜಯೇಂದ್ರ  ಹೊಸದುರ್ಗ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಈ ಕುರಿತು ಬಿ.ವೈ.ವಿಜಯೇಂದ್ರ ಅವರು ಪ್ರತಿಕ್ರಿಯಿಸಿದ್ದಾರೆ. 

ಹೊಸದುರ್ಗ ಪಟ್ಟಣದ ಟಿ.ಬಿ.ವೃತ್ತದಲ್ಲಿ ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ ಅವರ ಜನಸಂಪರ್ಕ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿದ ಬಳಿಕ ಸುದ್ದಿ ಮಾಧ್ಯಮದವರ ಜೊತೆ ಮಾತನಾಡಿದರು.

''ನಾನು ಇನ್ನೂ ಎಲ್ಲಿ ಸ್ಪರ್ಧಿಸಬೇಕು ಎಂಬ ಬಗ್ಗೆ ತೀರ್ಮಾನಿಸಿಲ್ಲ. ಬಿಜೆಪಿ ವರಿಷ್ಠರು ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ'' ಎಂದು ವಿಜಯೇಂದ್ರ ತಿಳಿಸಿದರು.

ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬೈಕ್ ರ್‍ಯಾಲಿ ನಡೆಸಿ ಅದ್ದೂರಿಯಾಗಿ ನನ್ನನ್ನು ಸ್ವಾಗತ ಮಾಡಿಕೊಂಡಿರುವುದು ಸಂತಸ ತಂದಿದೆ. ಅವರ ಪ್ರೀತಿ, ವಿಶ್ವಾಸ ಉಳಿಸಿಕೊಂಡು ಹೋಗುತ್ತೇನೆ. ಕೊಟ್ಟ ಜವಾಬ್ದಾರಿ ನಿರ್ವಹಿಸುತ್ತೇನೆ. ಹೊಸದುರ್ಗ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯಕ್ಕೆ ವರಿಷ್ಠರು ಸದ್ಯದಲ್ಲೇ ಸುಖಾಂತ್ಯ ಮಾಡಲಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ವಿಷಯದಲ್ಲಿ ಆಗಿರುವ ತಪ್ಪನ್ನು ಮುಖ್ಯಮಂತ್ರಿ ಅವರು ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದರು. 

ಹೊಸದುರ್ಗಕ್ಕೆ ಶುಭ ಶುಕ್ರವಾರ ಆಗಮಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಯುವನಾಯಕ ಬಿ.ವೈ. ಅವರನ್ನು ಸಾವಿರಾರು ಅಭಿಮಾನಿಗಳು ಬೈಕ್ ರ್‍ಯಾಲಿ ನಡೆಸಿ ಹೂಮಳೆ ಸುರಿಸಿ ಸಿಹಿ ಹಂಚುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು. ಬಿ.ವೈ.ವಿಜಯೇಂದ್ರ ಅವರು ಬರುವಿಕೆಗಾಗಿ ತಾಲೂಕಿನ ಲಕ್ಕಿಹಳ್ಳಿ ಬಳಿ ಕಾದುನಿಂತ ನೂರಾರು ಅಭಿಮಾನಿಗಳು ಸುಮಾರು 25 ಕಿಲೋಮೀಟರ್ ದೂರದಿಂದ ಪಟ್ಟಣದ ವರೆಗೂ ಬೈಕ್ ರ್‍ಯಾಲಿ ನಡೆಸಿದರು. ಪಟ್ಟಣಕ್ಕೆ ವಿಜಯೇಂದ್ರ ಆಗಮಿಸುತ್ತಿದ್ದಂತೆ ಅವರತ್ತ ಅಭಿಮಾನಿಗಳು ಕೈಬೀಸಿ ಘೋಷಣೆ ಕೂಗಿದರು. ಹಬ್ಬದ ಸಂಭ್ರಮ ಸಡಗರದ ವಾತಾವರಣ ನಿರ್ಮಾಣವಾಯಿತು.

ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News