ಶ್ರೀಶೈಲದಲ್ಲಿ ಕನ್ನಡಿಗರ ಮೇಲೆ ಮತ್ತೆ ದೌರ್ಜನ್ಯ: ಕೆಎಸ್ಸಾರ್ಟಿಸಿ ಬಸ್ ಚಾಲಕ-ನಿರ್ವಾಹಕನಿಗೆ ಹಲ್ಲೆ
ವಿಜಯಪುರ, ಜೂ.4: ಆಂಧ್ರ ಪ್ರದೇಶದ ಶ್ರೀಶೈಲ ಕ್ಷೇತ್ರದಲ್ಲಿ ಮತ್ತೆ ಕನ್ನಡಿಗರ ಮೇಲೆ ಹಲ್ಲೆ ನಡೆದಿದೆ. ಕರ್ನಾಟಕದ ಕೆಎಸ್ಸಾರ್ಟಿಸಿ ಬಸ್ ಚಾಲಕ ಬಸವರಾಜ್ ಬಿರಾದಾರ್ ಹಾಗೂ ನಿರ್ವಾಹಕನ ಮೇಲೆ ದುಷ್ಕರ್ಮಿಗಳ ತಂಡವೊಂದು ಜೂ.3ರ ಮಧ್ಯರಾತ್ರಿ ದಾಳಿ ನಡೆಸಿದೆ.
ಜೂನ್ 3ರ ಮಧ್ಯರಾತ್ರಿ ವಿಜಯಪುರ ಡಿಪೋಗೆ ಸೇರಿದ ಬಸ್ಸಿನ ಚಾಲಕ ಬಸವರಾಜ್ ಬಿರಾದಾರ್ ಶ್ರೀಶೈಲ ಬಸ್ ನಿಲ್ದಾಣದ ಬಳಿ ಬಸ್ಸನ್ನು ನಿಲ್ಲಿಸಿದ್ದಾರೆ. ಬಳಿಕ ಅಲ್ಲೇ ಊಟ ಮಾಡಿ ಕಟ್ಟೆಯೊಂದರ ಮೇಲೆ ಮಲಗಿದ್ದರೆನ್ನಲಾಗಿದೆ. ಈ ವೇಳೆ 10-12 ಮಂದಿಯಿದ್ದ ತಂಡ ಏಕಾಏಕಿ ದಾಳಿ ನಡೆಸಿದೆ. ಬಸ್ಸಿನ ಕಿಟಕಿ ಗಾಜು ಒಡೆದಿರುವ ದುಷ್ಕರ್ಮಿಗಳು ಕನ್ನಡಿಗರ ಬಗ್ಗೆ ಅಶ್ಲೀಲ ಪದ ಬಳಸಿ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬೊಬ್ಬೆ ಕೇಳಿ ಇತರ ಚಾಲಕರು ಹಾಗೂ ನಿರ್ವಾಹಕರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಹಲ್ಲೆಯಿಂದ ಬಸ್ ಚಾಲಕನ ಮುಖ ಹಾಗೂ ಕಾಲಿನ ಭಾಗಕ್ಕೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ದುಷ್ಕರ್ಮಿಗಳ ವಿರುದ್ಧ ಶ್ರೀಶೈಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರ್ಚ್ 31ರಂದು ಯುಗಾದಿ ಸಂದರ್ಭದಲ್ಲೂ ಶ್ರೀಶೈಲ ಕ್ಷೇತ್ರದಲ್ಲಿ ನೀರಿಗಾಗಿ ಕನ್ನಡಿಗರ ಮೇಲೆ ಹಲ್ಲೆ ನಡೆದಿತ್ತು.