ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜನೆಗೆ ಸಾಹಿತಿಗಳ ವಿರೋಧ ಕಾರಣವೆಂಬುದು ಸುಳ್ಳು: ಸಚಿವ ಡಾ.ಅಶ್ವತ್ಥನಾರಾಯಣ

Update: 2022-06-04 08:07 GMT

ಬೆಳಗಾವಿ, ಜೂ.4: ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅವಧಿ ಮುಗಿದಿದೆ. ಪೂರ್ಣ ಪ್ರಮಾಣದ ವರದಿ ಕೂಡ ನೀಡಲಾಗಿದೆ. ಹೀಗಾಗಿ ಸಮಿತಿ ವಿಸರ್ಜಿಸಲಾಗಿದೆ. ಇದಕ್ಕೆ ಸಾಹಿತಿಗಳ ವಿರೋಧ ಅಥವಾ ಒತ್ತಡ ಕಾರಣ ಎಂಬುದು ಸುಳ್ಳು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ಬರಖಾಸ್ತು ಮಾಡಿಲ್ಲ, ವಿಸರ್ಜನೆ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟವಾದ ಹೇಳಿಕೆ ನೀಡಿದ್ದಾರೆ. ಇದಕ್ಕೆ ಬೇರೆ ಅರ್ಥ ಕೊಡಬೇಕಿಲ್ಲ ಎಂದರು.

ಹೊಸ ಪಠ್ಯಕ್ರಮದಲ್ಲಿ ಏನಾದರೂ ಸಮಸ್ಯೆಗಳಿದ್ದರೆ, ಅಭ್ಯಂತರಗಳಿದ್ದರೆ ಖಂಡಿತ ಪರಿಶೀಲಿಸಲಾಗುವುದು. ಮುಖ್ಯವಾಗಿ, ಯಾವುದೇ ಸಮುದಾಯ ಅಥವಾ ವ್ಯಕ್ತಿಗತ ಭಾವನೆಗಳಿಗೆ ಧಕ್ಕೆ ಆಗುವ ವಿಚಾರಗಳಿದ್ದರೆ ಅದನ್ನು ಪರಿಶೀಲಿಸಲಾಗುವುದು. ಎಲ್ಲರ ಸಲಹೆ, ಸೂಚನೆ ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಯಾವುದೇ ಒಬ್ಬ ವ್ಯಕ್ತಿಯನ್ನು ಹೊಣೆ ಮಾಡುವಂತಿಲ್ಲ. ಅದಕ್ಕಾಗಿ ಒಂದು ಸಮಿತಿ ರಚಿಸಿದ್ದರಿಂದ ಎಲ್ಲ ವಿಚಾರಗಳು ಸಮಿತಿಗೆ ಸಂಬಂಧಿಸಿದವು. ವ್ಯಕ್ತಿಗತ ಚರ್ಚೆಗಿಂತ ವಿಚಾರ ಆಧರಿತ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸಲಾಗಿದೆ ಎಂದ ಅಶ್ವತ್ಥನಾರಾಯಣ, ಕೆಲವು ಕೋಮುವಾದಿಗಳು ವಿನಾಕಾರಣ ಸಮುದಾಯದಲ್ಲಿ ಗೊಂದಲ ಮೂಡಿಸಿ ಸರಕಾರಕ್ಕೆ ಕೆಟ್ಟ ಹೆಸರು ತರಲು ಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News