'ಶ್ರೀರಂಗಪಟ್ಟಣ ಚಲೋ'ಗೆ ಪೊಲೀಸರಿಂದ ತಡೆ: ಮೆರವಣಿಗೆ ಕೈಬಿಟ್ಟು ವಾಪಸ್ಸಾದ ಸಂಘಪರಿವಾರ
ಮಂಡ್ಯ, ಜೂ.4: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿ ಹನುಮನ ಪೂಜೆಗೆ ಅವಕಾಶ ನೀಡಲು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಶನಿವಾರ ಹಮ್ಮಿಕೊಂಡಿದ್ದ 'ಶ್ರೀರಂಗಪಟ್ಟಣ ಚಲೋ'ಗೆ ಪೊಲೀಸರು ತಡೆಯೊಡ್ಡಿದರು.
ಪಟ್ಟಣದ 5 ಕಿ.ಮೀ. ಸುತ್ತಳತೆಯಲ್ಲಿ ಸಿಆರ್‌ಪಿಸಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಾಮಿಯಾ ಮಸೀದಿ ಸೇರಿದಂತೆ ಆಯಕಟ್ಟಿನ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರಿಂದ ಸಂಘ ಪರಿವಾರದ ಮೆರವಣಿಗೆ ಪ್ರಯತ್ನ ವಿಫಲವಾಯಿತು.
ಕಟ್ಟೆಚ್ಚರ ನೀಡಿದ್ದರೂ ಸಂಘಪರಿವಾರದ ಸುಮಾರು 500 ಮಂದಿ ಕಾರ್ಯಕರ್ತರು ಶ್ರೀರಂಗಪಟ್ಟಣದ ಹೊರವಲಯದ ಕಿರಂಗೂರು ಬನ್ನಿಮಂಟದ ಬಳಿ ‘ಹನುಮ'ನ ಮೂರ್ತಿಯಿಟ್ಟು ಸ್ವಲ್ಪ ಹೊತ್ತು ಭಜನೆ ಮಾಡಿದರು.
ನಂತರ, ಶ್ರೀರಂಗಪಟ್ಟಣ ಪ್ರವೇಶಿಸಿಲು ಜಯಕಾರ ಕೂಗುತ್ತಾ ಹೊರಟ ಜಾಥಾವನ್ನು ಕಾವೇರಿ ನದಿ ಸೇತೆವೆಯ ಬಳಿ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಇಟ್ಟು ಕಾವಲಿದ್ದ ನೂರಾರು ಪೊಲೀಸರು ತಡೆಯೊಡ್ಡಿದರು. ಬಳಿಕ ಅಲ್ಲಿಯೇ ಮೆರವಣಿಗೆಯನ್ನು ಮೊಟಕುಗೊಳಿಸಲಾಯಿತು.
ಸಂಘ ಪರಿವಾರದ ಮುಖಂಡರು ಮಾತನಾಡಿ, ಜಾಮಿಯಾ ಮಸೀದಿ ಹಿಂದೆ ಹನುಮನ ದೇವಾಲಯವಾಗಿತ್ತು. ಈಗ ಅಲ್ಲಿ ನಡೆಯುತ್ತಿರುವ ಮದ್ರಸ, ನಮಾಝ್ ನಿಲ್ಲಿಸಿ, ಹನುಮ ಭಕ್ತರಿಗೆ ಆರಾಧನೆ ಮಾಡಲು ಅವಕಾಶ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಈ ಸಂಬಂಧ ಜಿಲ್ಲಾಡಳಿತ, ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಭಾರತೀಯ ಪುರಾತತ್ವ ಇಲಾಖೆಗೂ ಮನವಿ ಸಲ್ಲಿಸಿದ್ದೇವೆ. ನಾವು ನಿಷೇದಾಜ್ಞೆಗೆ ಹೆದರಿಲ್ಲ, ಮುಂದಿನ ದಿನಗಳಲ್ಲಿ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ಸಮಾಜದ ಶಾಂತಿ, ಸೌಹಾರ್ದ ಮತ್ತು ಸಾಮರಸ್ಯಕ್ಕೆ ಭಂಗ ತರಲು ಯತ್ನಿಸಿದ್ದ ಸಂಘಪರಿವಾರದ ಮೆರವಣಿಗೆಯನ್ನು ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಮುಖ್ಯವಾಗಿ ಪೊಲೀಸರು ಭಂಗಗೊಳಿಸಿ ಕರ್ತವ್ಯಪ್ರಜ್ಞೆ ಮೆರೆದಿರುವುದಕ್ಕೆ ನಾಗರಿಕರು ಶ್ಲಾಘನೆ ಮಾಡಿದ್ದಾರೆ.