ಕುವೆಂಪು ಕೃತಿ ಭಾಷಾಂತರ ಕನ್ನಡ ಸಾಹಿತ್ಯಕ್ಕೆ ಕೊಡುಗೆ: ಟಿ.ಎಸ್. ನಾಗಾಭರಣ

Update: 2022-06-04 12:58 GMT

ಬೆಂಗಳೂರು, ಜೂ.4: ಬೇರೆ ಭಾಷೆಯಲ್ಲಿಯೂ ಕುವೆಂಪು ಕೃತಿಯ ಛಾಪು ಮೂಡುತ್ತಿರುವುದು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ತಿಳಿಸಿದರು.

ಶನಿವಾರ ನಗರದ ಗಾಂಧಿ ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು ಆಯೋಜಿಸಿದ್ದ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಇಂಗ್ಲಿಷ್ ಅನುವಾದಿತ ಕೃತಿ ‘ದಿ ಬ್ರೈಡ್ ಇನ್ ದಿ ರೈನಿ ಮೌಂಟೇನ್ಸ್’ ಹಾಗೂ ಕಡಿದಾಳ್ ಪ್ರಕಾಶ್ ಅವರ ‘ಕಟ್ಟುವ ಹಾದಿಯಲ್ಲಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ ಕಾಲಘಟ್ಟದವರಿಗೆ ಕುವೆಂಪು ಅವರ ಕೃತಿಯನ್ನು ಅನುವಾದಿಸಿ ಮಾಧ್ಯಮಗಳಿಗೆ ತರಬೇಕು ಎನ್ನುವ ಹಂಬಲವಿತ್ತು. ಆದರೆ ಇದೀಗ ಅವರ ಕೃತಿಗಳನ್ನು ಭಾಷಾಂತರ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಒಂದು ಸಂಸ್ಥೆ ಕಟ್ಟುವಾಗ ಸಾಕಷ್ಟು ಅಡೆತಡೆಗಳು ಬರುತ್ತವೆ. ಅವನ್ನೆಲ್ಲಾ ಮೆಟ್ಟಿ, ವಿಶ್ವವೇ ತಲೆ ಎತ್ತಿ ನೋಡುವಂತೆ ಬದುಕಬೇಕು. ಅದರೊಂದಿಗೆ ಪೂರ್ಣಚಂದ್ರ ತೇಜಸ್ವಿ ಹೇಳುವಂತೆ ಜೀವನದ ತಿರುವುಗಳನ್ನು ಬರೆದರೆ ಅವೇ ಅದ್ಭುತ ಕಾದಂಬರಿ, ಕೃತಿಗಳಾಗಿ ಹೊರಬರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದರು. 

ಹಿರಿಯ ವಿಮರ್ಶಕ ರಾಜೇಂದ್ರ ಚೆನ್ನಿ ಅವರು ಮಾತನಾಡಿ, ಬಹುಭಾಷಿಕತ್ವ ಅನ್ನುವುದು ಭಾರತದಲ್ಲಿ ಕಡಿಮೆಯಾಗುತ್ತಿರುವುದರಿಂದ ನಮ್ಮಲ್ಲಿ ಓದುಗರ ಸಂಖ್ಯೆಯು ಕಡಿಮೆಯಾಗುತ್ತಿದೆ. ಅನೇಕ ಭಾಷೆಯಲ್ಲಿ ಪ್ರಭುತ್ವವನ್ನು ಪಡೆದಿರುವ ತಲೆಮಾರುಗಳನ್ನು ನಾವು ಕಂಡಿದ್ದೇವೆ ಎಂದರು. 

ಕವಿ ಮತ್ತು ನಾಟಕಕಾರ ಹೆಚ್.ಎಸ್.ಶಿವಪ್ರಕಾಶ್ ಮಾತನಾಡಿ, ಇದೊಂದು ವಿಶ್ವ ಸಾಹಿತ್ಯ ಮಹತ್ವದ ಘಟನೆಯಾಗಿದೆ. 2000 ವರ್ಷಗಳ ಕಾಲ ಕನ್ನಡ ಭಾಷೆ  ತಪ್ಪಸ್ಸನ್ನು ಮಾಡಿತ್ತು. ಇಂದು ಆ ತಪ್ಪಸ್ಸು ಫಲವನ್ನು ಪಡೆದು ಕನ್ನಡ ಸಾಹಿತ್ಯವೂ ಬೇರೆ ಭಾಷೆಯಲ್ಲಿಯೂ ರೂಪುಗೊಳ್ಳುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್, ಲೇಖಕ ಡಾ.ಕೆ.ಪುಟ್ಟಸ್ವಾಮಿ, ಕನ್ನಡ ಸಂಸ್ಕøತಿ ಇಲಾಖೆಯ ವಿಶ್ರಾಂತ ಪ್ರಾಂಶುಪಾಲರಾದ ಮಾಕರ್ಂಡಪುರ ಶ್ರೀನಿವಾಸ, ಗಮಕಿ ಸತ್ಯನಾರಾಯಣ, ಪ್ರಕಾಶ್ ಮೂರ್ತಿ, ಕಮಲಾ ಹಂಪನಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕುವೆಂಪು ಬೆಂಗಾಲಿಯಲ್ಲಿ ಬರೆದಿದ್ದರೆ..

ಪ್ರಧಾನವಾಗಿ ಕನ್ನಡವು ಗೌರವಿಸುವ ಒಬ್ಬ ಶ್ರೇಷ್ಠ ಕವಿ ಎಂದರೆ ಅದು ಕುವೆಂಪು. ಕುವೆಂಪು ಅಂತಹ ಕವಿ ಬೆಂಗಾಲಿ ಭಾμÉಯಲ್ಲಿ ಇಂತಹ ಸೃಜನಶೀಲ ಬರವಣಿಗೆಗಳನ್ನು ಬರೆದಿದ್ದರೆ, ಅವರಂತಹ ಮಹತ್ವವನ್ನು ಪಡೆಯುತ್ತಿದ್ದ ವ್ಯಕ್ತಿಗಳು ಮತ್ಯಾರೂ ಇರುತ್ತಿರಲಿಲ್ಲ. ಕಾರಣ ಆ ಭಾಷೆಯು ವಿಶಾಲವಾದ ಸ್ವಾಮ್ಯವನ್ನು ಪಡೆದುಕೊಂಡಿದೆ.

-ಬಸವರಾಜ ಕಲ್ಗುಡಿ, ವಿಶ್ರಾಂತ ಪ್ರಾಧ್ಯಾಪಕ ಮತ್ತು ವಿಮರ್ಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News