ಬ್ರಾಹ್ಮಣ ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಿದೆ: ರೋಹಿತ್ ಚಕ್ರತೀರ್ಥ

Update: 2022-06-04 15:10 GMT

ಬೆಂಗಳೂರು, ಜೂ. 4: ‘ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಒಂದು ಜಾತಿಯನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಬ್ರಾಹ್ಮಣ ಸಮುದಾಯವನ್ನು ಗುರಿ ಮಾಡಲಾಗುತ್ತಿದೆ' ಎಂದು ರೋಹಿತ್ ಚಕ್ರತೀರ್ಥ ಆರೋಪಿಸಿದ್ದಾರೆ.

ಶನಿವಾರ ಖಾಸಗಿ ಸುದ್ದಿವಾಹಿನಿಗೆ ಪ್ರತಿಕ್ರಿಯೆ ನೀಡಿದ ಅವರು, ‘ನಾನು ಯಾವತ್ತೂ ಬ್ರಾಹ್ಮಣರ ಪರ, ಬ್ರಾಹ್ಮಣ ವಿರುದ್ಧವೂ ಮಾತನಾಡಿಲ್ಲ. ನಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು ಎಂದೂ ಎಲ್ಲೂ ಸಹಾನುಭೂತಿ ಗಿಟ್ಟಿಸಲು ಯತ್ನಿಸಿಲ್ಲ. ಆದರೂ ನನ್ನ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ' ಎಂದು ದೂರಿದರು.

‘ಒಂದರಿಂದ 10ನೆ ತರಗತಿಯ ವರೆಗಿನ ಶಾಲಾ ಮಕ್ಕಳ ಪಠ್ಯವನ್ನು ಮಾತ್ರ ಪರಿಷ್ಕರಣೆ ಮಾಡಿದ್ದೇವೆ. ಪ್ರಥಮ, ದ್ವಿತೀಯ, ತೃತೀಯ, ಭಾಷೆಗಳ ಪಠ್ಯದಲ್ಲಿ ಪರಿಷ್ಕರಿಸಿದ್ದೇವೆ. ಅದು ಬಿಟ್ಟರೇ ನಲಿ-ಕಲಿ ಪಠ್ಯ ಪರಿಷ್ಕರಣೆಯನ್ನು ನಮ್ಮ ಸಮಿತಿ ಮಾಡಿಲ್ಲ. ನಾನು ಇದನ್ನು ಪರಿಷ್ಕರಣೆ ಮಾಡಿಲ್ಲ. ಈ ವಿಚಾರಗಳಲ್ಲಿ ಸುಳ್ಳು ಸುದ್ದಿಗಳು ಹಬ್ಬಿಸುತ್ತಿದ್ದಾರೆ. ಪಠ್ಯ ಪರಿಷ್ಕರಣೆ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ' ಎಂದು ಅವರು ತಿಳಿಸಿದರು.

‘ಬಸವಣ್ಣ ವಿಚಾರವಾಗಿ ಪರಿಷ್ಕೃತ ಪಠ್ಯದಲ್ಲಿ ಬರಗೂರು ರಾಮಚಂದ್ರಪ್ಪ ಪುಸ್ತಕ ಬಂದಿತ್ತು. ಅದರಲ್ಲಿ ಇರುವ ಅಷ್ಟು ವಿಚಾರಗಳು ಹಾಗೆ ಉಳಿಸಿದ್ದೇವೆ. ಆದರೆ, ಇದೀಗ ನಮ್ಮ ವಿರುದ್ಧವೇ ಹೋರಾಟಕ್ಕೆ ಮುಂದಾಗಿದ್ದಾರೆ. ಬರಗೂರು ವಿರುದ್ದ ಯಾರೂ ಏನೂ ಮಾತನಾಡುತ್ತಿಲ್ಲ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ನಮ್ಮ ಸಮಿತಿ ಮತ್ತು ಬರಗೂರು ಸಮಿತಿ ಪರಿಷ್ಕರಣೆ ಮಾಡಿದ ಎರಡೂ ಪುಸ್ತಕಗಳನ್ನು ತುಲನೆ ಮಾಡಿ ನೋಡಲಿ' ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News