ಒತ್ತಡದಿಂದ ನಿರ್ಧಾರ ಕೈಗೊಂಡಿಲ್ಲ, ಹೊಸ ಸಮಿತಿ ರಚಿಸುವ ಅವಶ್ಯಕತೆ ಇಲ್ಲ: ಸಿಎಂ ಬೊಮ್ಮಾಯಿ
ಚಿತ್ರದುರ್ಗ, ಜೂ.4: 'ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಕಾರ್ಯ ಪೂರ್ಣಗೊಂಡಿರುವುದರಿಂದ ಸಮಿತಿ ವಿಸರ್ಜನೆ ಮಾಡಲಾಗಿದೆ. ಯಾವುದೇ ಒತ್ತಡದಿಂದ ಈ ನಿರ್ಧಾರ ಕೈಗೊಂಡಿಲ್ಲ. ಹೊಸ ಸಮಿತಿ ರಚಿಸುವ ಅವಶ್ಯಕತೆ ಇಲ್ಲ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಹಿರಿಯೂರು ತಾಲೂಕಿನ ದೇವರಕೊಟ್ಟ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹೆಲಿಪ್ಯಾಡ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣ ಪಠ್ಯದಲ್ಲಿ ಸಮಗ್ರ ಬದಲಾವಣೆ ತರಲಾಗುವುದು ಎಂದು ನುಡಿದರು.
ನಮ್ಮದು ಬಸವ ಪಥದ ಸರಕಾರ, ಬಸವಣ್ಣನವರ ವಚನ ಸಾಹಿತ್ಯ ಉತ್ಕೃಷ್ಟವಾದದ್ದು. ನಾಡಿನ ಮಠಾಧೀಶರು, ಸ್ವಾಮೀಜಿಗಳ ಅಭಿಪ್ರಾಯ ಪಡೆದು ಬಸವಣ್ಣನ ನಿಜ ಇತಿಹಾಸವನ್ನು ಪಠ್ಯದಲ್ಲಿ ಸೇರಿಸಲಾಗುವುದು ಎಂದು ಹೇಳಿದರು.
ನಾಡಿನ ಬೇರೆ ಬೇರೆ ಮಠಾಧೀಶರು ಪತ್ರ ಬರೆದಿದ್ದಾರೆ. 2015ರಲ್ಲಿ ರಚಿಸಿದ ಪ್ರೊ.ಬರಗೂರು ರಾಮಚಂದ್ರಪ್ಪ ಪರಿಷ್ಕರಣೆ ಸಮಿತಿ ಹಾಗೂ ಈಗಿನ ಸಮಿತಿ ರಚಿಸಿರುವ ಬಸವಣ್ಣ ಪಠ್ಯದಲ್ಲಿ ಒಂದು ವಾಕ್ಯದ ವ್ಯತ್ಯಾಸವಿದೆ. ಸಾಣೇಹಳ್ಳಿ ಶ್ರೀಗಳು ಹೇಳಿದ ಲಿಂಗದೀಕ್ಷೆ ವಿಚಾರ ಎರಡು ಪಠ್ಯದಲ್ಲೂ ಹೇಳಲಾಗಿದೆ ಎಂದು ತಿಳಿಸಿದ ಸಿಎಂ, ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಪರಿಷ್ಕೃತ ಪಠ್ಯದ ಸಂಪುಟ ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ಸಚಿವರಾದ ಗೋವಿಂದ ಕಾರಜೋಳ, ಬಿ.ಎ.ಬಸವರಾಜ್, ಬಿ.ಸಿ.ಪಾಟೀಲ್, ಶಾಸಕರಾದ ಪೂರ್ಣಿಮಾ ಶ್ರೀನಿವಾಸ್, ಜಿ.ಎಚ್.ತಿಪ್ಪಾರೆಡ್ಡಿ, ರಾಜೇಶ್ ಗೌಡ, ಚಿದಾನಂದ ಗೌಡ, ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಎಸ್ಪಿ ಕೆ.ಪರುಶುರಾಮ್, ಸೇರಿದಂತೆ ಇತರ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.