ಸಮೀಕ್ಷೆ ರಾಜ್ಯದ ಇನ್ಕ್ಯುಬೇಟರ್ ಗಳಿಗೆ ಅಗ್ರಸ್ಥಾನ: ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ

Update: 2022-06-04 18:15 GMT

ಬೆಂಗಳೂರು: ರಾಜ್ಯ ಸರಕಾರದ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬೆಂಬಲ ಪಡೆದಿರುವ ಬೆಂಗಳೂರು ಬಯೋ ಇನ್ನೋವೇಶನ್ ಸೆಂಟರ್ (ಬಿಬಿಸಿ) ಮತ್ತು ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮಾಲಿಕ್ಯುಲರ್ ಪ್ಲಾಟ್ ಫಾರಂಸ್ (ಸಿ-ಕ್ಯಾಂಪ್), ಬಯೋ ಸ್ಪೆಕ್ಟ್ರಮ್ ವಾರ್ಷಿಕ ಸಮೀಕ್ಷೆಯಲ್ಲಿ ಸಾರ್ವಜನಿಕ ವಲಯ ವಿಭಾಗದಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿವೆ.

ಐಟಿ- ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಶನಿವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು, ಸರಕಾರದ ಕರ್ನಾಟಕ ಇನ್ನೋವೇಟೀವ್ ಟೆಕ್ನೊಲಾಜಿಕಲ್ ಸೊಸೈಟಿಯ (ಕಿಟ್ಸ್) ಬೆಂಬಲ ಹೊಂದಿರುವ 'ಮಣಿಪಾಲ್ ಬಯೋ ಇನ್ಕ್ಯುಬೇಟರ್' ಸಂಸ್ಥೆಯು ಖಾಸಗಿ ವಲಯದಡಿಯಲ್ಲಿ ಐದನೇ ಸ್ಥಾನ ಗಳಿಸಿದೆ' ಎಂದು ತಿಳಿಸಿದ್ದಾರೆ.

ಬಿಬಿಸಿ ಮತ್ತು ಸಿ-ಕ್ಯಾಂಪ್ ಎರಡೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಉಪಕ್ರಮಗಳಾಗಿದ್ದು, ಇವುಗಳಿಗೆ ಕಿಟ್ಸ್ ಮೂಲಕ ಬೆಂಬಲ ಒದಗಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ವರ್ಷದ ರಾಷ್ಟ್ರೀಯ ಬಯೋಸ್ಪೆಕ್ಟ್ರಂ ಸಮೀಕ್ಷೆಯಲ್ಲಿ 40 ಇನ್ಕ್ಯುಬೇಟರುಗಳನ್ನು ಅಂತಿಮ ಸುತ್ತಿನಲ್ಲಿ ಪರಿಗಣಿಸಲಾಗಿತ್ತು. ರಾಜ್ಯದಲ್ಲಿ ನವೋದ್ಯಮಗಳಿಗೆ ಅಗತ್ಯವಾದ ಕಾರ್ಯ ಪರಿಸರವನ್ನು ಸೃಷ್ಟಿಸಲಾಗಿದೆ. ಈ ವಿಚಾರದಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಇದರಲ್ಲಿ ವಿಶೇಷವಾಗಿ, ಜೈವಿಕ ವಿಜ್ಞಾನ ಮತ್ತು ಆರೋಗ್ಯ ವಿಜ್ಞಾನ ಕ್ಷೇತ್ರಗಳಿಗೆ ಆದ್ಯ ಗಮನ ಹರಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News