ಪಠ್ಯ ಮರುಪರಿಷ್ಕರಣೆ: ಸಾಹಿತಿ-ಚಿಂತಕರ ಹೋರಾಟಕ್ಕೆ ಬೆಂಬಲ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಂಗಳೂರು, ಜೂ. 5: ‘ಪಠ್ಯ ಪುಸ್ತಕ ಪರಿಷ್ಕರಣೆಯನ್ನು ವಿರೋಧಿಸಿ ಸಾಹಿತಿಗಳು, ಚಿಂತಕರು ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದು, ಆ ಹೋರಾಟಕ್ಕೆ ನಮ್ಮ ಬೆಂಬಲವಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದಿಲ್ಲಿ ಘೋಷಣೆ ಮಾಡಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಸಂವಿಧಾನದಲ್ಲಿ ಎಲ್ಲ ಧರ್ಮ, ಜಾತಿ, ಪದ್ಧತಿ, ಸಂಸ್ಕೃತಿಗೆ ಸಮಾನ ಹಕ್ಕು ನೀಡಿದೆ. ಅತ್ಯಂತ ಉತ್ಕೃಷ್ಟವಾದ ಸಂವಿಧಾನ ರಚನೆ ಮಾಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹೆಸರನ್ನು ಪಠ್ಯ ಮರುಪರಿಷ್ಕರಣೆ ವೇಳೆ ಕೈಬಿಡಲಾಗಿದೆ' ಎಂದು ದೂರಿದರು.
‘ಆರನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿದ್ದ ಚನ್ನಣ್ಣ ವಾಲೀಕಾರ ಅವರು ಬರೆದಿದ್ದ ‘ನೀ ಹೋದ ಮರುದಿನ' ಎಂಬ ಅಂಬೇಡ್ಕರರ ಬಗೆಗಿನ ಕವಿತೆ, ಏಳನೆ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಸಮಾಜ ಸುಧಾರಕರ ಬಗ್ಗೆ ಹೇಳಲಾಗಿದೆ. ಅಲ್ಲಿ ಅಂಬೇಡ್ಕರರ ಬಗ್ಗೆಯೂ ಮಾಹಿತಿ ಇದೆ. ಆದರೆ, ಈ ಹಿಂದಿನ ಪಠ್ಯ ಪುಸ್ತಕದಲ್ಲಿ ಅಂಬೇಡ್ಕರ್ ಅವರ ತಂದೆ, ತಾಯಿಯವರ ಹೆಸರುಗಳಿದ್ದವು. ಅಂಬೇಡ್ಕರ್ ಹುಟ್ಟಿದ ಸ್ಥಳ ಮತ್ತು ದಿನಾಂಕವೂ ಇತ್ತು. ಅದೇ ಭಾಗದಲ್ಲಿ ಅಂಬೇಡ್ಕರರ ಬೃಹತ್ ಹೋರಾಟಗಳಾಗಿದ್ದ ಮಹಾಡ್ ಸತ್ಯಾಗ್ರಹ ಹಾಗೂ ಕಾಲಾರಾಂ ದೇಗುಲ ಪ್ರವೇಶ ಹೋರಾಟಗಳ ಪ್ರಸ್ತಾಪವನ್ನೂ ತೆಗೆದು ಹಾಕಲಾಗಿದೆ.
‘9ನೆ ತರಗತಿಯ ಸಮಾಜ ವಿಜ್ಞಾನದ ನಮ್ಮ ಸಂವಿಧಾನ ಪಾಠದಲ್ಲಿ ಅಂಬೇಡ್ಕರ್ ಅವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ‘ಸಂವಿಧಾನ ಶಿಲ್ಪಿ' ಎಂದು ಕರೆಯಲಾಗಿದೆ ಎಂದಿತ್ತು. ಈ ವಾಕ್ಯವನ್ನೂ ಈಗ ತೆಗೆದು ಹಾಕಲಾಗಿದೆ. ಇದಲ್ಲದೇ ಅಂಬೇಡ್ಕರ್ ಅವರ ಬಗ್ಗೆ ಅನೇಕ ಅಂಶಗಳನ್ನು ತೆಗೆದು ಹಾಕಲಾಗಿದೆ. ರಾಜ್ಯ ಸರಕಾರ ಇಷ್ಟು ಬೇಜವಾಬ್ದಾರಿಯಾಗಿ ನಡೆದುಕೊಂಡಿರುವುದನ್ನು ಹಿಂದೆಂದೂ ನಾನು ನೋಡಿಲ್ಲ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
‘ಪಠ್ಯದಲ್ಲಿ ಆಗಿರುವ ಪ್ರಮಾದಗಳಿಗೆ ಬಿಜೆಪಿ ಸರಕಾರವೇ ಕಾರಣ. ಬಸವಣ್ಣ, ಕುವೆಂಪು, ಬುದ್ಧ, ನಾರಾಯಣ ಗುರುಗಳು, ಮಹಾವೀರ ಜೈನ್, ಭಗತ್ ಸಿಂಗ್ ಸೇರಿದಂತೆ ಹಲವು ಮಹಾನ್ ನಾಯಕರ ವಿಚಾರಗಳನ್ನು ಸರಕಾರ ಕೈಬಿಟ್ಟಿದೆ ಇಲ್ಲವೇ ತಿರುಚಿದೆ. ಇದರಿಂದ ಸರಕಾರದ ಮನಸ್ಥಿತಿ, ಮುಖವಾಡ ಬಯಲಾಗಿದೆ. ಈ ಮಹನೀಯರನ್ನು ನಾವು ಇಷ್ಟು ದಿನಗಳ ಕಾಲ ಗೌರವವಾಗಿ ಕಾಣುತ್ತಿದ್ದೆವು. ಆದರೆ ಈಗ ಪಠ್ಯ ಪುಸ್ತಕದಲ್ಲಿ ಅವರನ್ನು ಸಾಮಾನ್ಯರಂತೆ ಬಿಂಬಿಸಲಾಗಿದೆ' ಎಂದು ಡಿ.ಕೆ.ಶಿವಕುಮಾರ್ ದೂರಿದರು.
‘ಇಷ್ಟು ದಿನ ನಮ್ಮ ಸರಕಾರಗಳು ಪರಿಶಿಷ್ಟ ಸಮುದಾಯದ ರಕ್ಷಣೆಗೆ ನಿಂತಿದ್ದವು. ವಾಲ್ಮೀಕಿ ಸಮುದಾಯ ನಮಗೆ ರಾಮಾಯಣ ಬರೆದು ಕೊಟ್ಟಿದೆ. ಇಂತಹ ಶ್ರೇಷ್ಟ ಸಮಾಜವನ್ನು ಕೀಳಾಗಿ ಕಾಣುತ್ತಿರುವುದರಿಂದ ನಮಗೆ ಬಹಳ ನೋವಾಗಿದೆ. ಇದನ್ನು ನಮ್ಮ ಪಕ್ಷ ಖಂಡಿಸುತ್ತದೆ. ತಮ್ಮ ಸಮಾಜದ ಗೌರವ, ಸ್ವಾಭಿಮಾನ ಕಾಪಾಡಿಕೊಳ್ಳಲು ಮುಂದಿನ ದಿನಗಳಲ್ಲಿ ಎಲ್ಲಾ ಧರ್ಮಗಳ ಸಂಘಟನೆಗಳು, ಎಲ್ಲ್ಲ ಹಿರಿಯ ಸ್ವಾಮೀಜಿಗಳು, ಮುಖಂಡರು ಧ್ವನಿ ಎತ್ತಬೇಕು' ಎಂದು ಶಿವಕುಮಾರ್ ಸಲಹೆ ನೀಡಿದರು.
‘ಮುಖ್ಯಮಂತ್ರಿ ಆದೇಶವೇ ಬಹಳ ಗೊಂದಲದಲ್ಲಿದೆ. ಬಸವಣ್ಣನವರನ್ನೆ ಬಹಳ ಅಗೌರವದಿಂದ ಕಂಡಿದ್ದು, ಈಗ ಅದನ್ನು ಮರುಪರಿಶೀಲಿಸುತ್ತೇವೆಂದು ಹೇಳಿದ್ದಾರೆ. ಮುರುಘಾಮಠ, ಸಿದ್ದಗಂಗಾ ಮಠ, ಪಂಚಮಸಾಲಿ, ಆದಿಚುಂಚನಗಿರಿ ಮಠದ ಶ್ರೀಗಳು ಸೇರಿದಂತೆ ಅನೇಕ ಸ್ವಾಮೀಜಿಗಳು ಇದರ ವಿರುದ್ಧ ಧ್ವನಿ ಎತ್ತಿದ್ದು, ತಮ್ಮ ಸಮಾಜಗಳಿಗೆ ನ್ಯಾಯ ಸಿಗಲಿ' ಎಂದು ಶಿವಕುಮಾರ್ ಹೇಳಿದರು.
‘ರಾಜ್ಯಸಭೆ ಚುನಾವಣೆ ಬಗ್ಗೆ ಬೇರೆಯವರು ಏನು ಪ್ರಯತ್ನ ಮಾಡುತ್ತಿದ್ದಾರೋ ಗೊತ್ತಿಲ್ಲ. ನಾವು ಆತ್ಮಸಾಕ್ಷಿ ಮತ ಹಾಗೂ ಜಾತ್ಯತೀತ ಭಾವನೆ ಹೊಂದಿರುವವರು ನಮಗೆ ಮತ ನೀಡಬೇಕೆಂದು ಕೇಳಿದ್ದೇವೆ. ಪಕ್ಷ ಎಲ್ಲ ಮುಖಂಡರು ಸೇರಿ ಒಗ್ಗಟ್ಟಿನಿಂದ ಎರಡನೇ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಿದೆವು. ಆದರೆ, ಕೆಲ ಮಾಧ್ಯಮಗಳು ಖರ್ಗೆಯವರು, ಜೆಡಿಎಸ್ ಜತೆ ಸಂಧಾನ ಮಾಡುತ್ತಿದ್ದಾರೆಂದು ವರದಿ ಮಾಡಿದ್ದು, ಇದು ಸತ್ಯಕ್ಕೆ ದೂರ. ಪಕ್ಷ ಏನು ಹೇಳಿದೆಯೋ ಅದನ್ನು ನಾವೆಲ್ಲರೂ ಒಟ್ಟಾಗಿ ಪಾಲಿಸುತ್ತಿದ್ದೇವೆ'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ