ಮನುಷ್ಯ ಎಚ್ಚೆತ್ತುಕೊಳ್ಳದಿದ್ದರೆ ಪ್ರಕೃತಿ ಜೊತೆಗೆ ಮಾನವ ಸಂಕುಲ ನಾಶ ಖಚಿತ: ಸಿ.ಟಿ.ರವಿ

Update: 2022-06-05 12:29 GMT

ಚಿಕ್ಕಮಗಳೂರು, ಜೂ.5: ಜಗತ್ತು ಇಂದು ಪ್ರಾಕೃತಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಇದು ಕಟ್ಟ ಕಡೆಯ ಎಚ್ಚರಿಕೆಗಂಟೆ ಎಂಬುದನ್ನು ಅರಿತು ಮನುಷ್ಯ ಎಚ್ಚೆತ್ತುಕೊಳ್ಳದಿದ್ದರೆ ಪ್ರಕೃತಿ ವಿನಾಶದ ಜೊತೆಗೆ ಮಾನವ ಸಂಕುಲದ ನಾಶ ಕಟ್ಟಿಟ್ಟಬುತ್ತಿ ಎಂದು ಶಾಸಕ ಸಿ.ಟಿ.ರವಿ ಹೇಳಿದರು. 

ರವಿವಾರ ಹಸಿರು ಕರ್ನಾಟಕ ಕಾರ್ಯಕ್ರಮದ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ರಾಮನಹಳ್ಳಿ ಡಯಟ್ ಕಾಲೇಜು ಆವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಮತ್ತು ಬೀಜ ಬಿತ್ತನೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಹಜ ಜೀವ ವೈವಿಧ್ಯತೆಯ ಸರಪಳಿ ಇಂದು ತುಂಡಾಗಿದೆ. ರಾಸಾಯನಿಕ ಬಳಕೆಯಿಂದ ಜೇನು ಹುಳುಗಳ ಸಂತತಿ ನಶಿಸುತ್ತಿದೆ. ಇದರಿಂದ ಸಹಜವಾಗಿ ಪರಾಗಸ್ಪರ್ಶವು ಕುಂದುತ್ತಿರುವುದರಿಂದ ಬೆಳೆಗಳು ಪೂರಕವಾಗಿ ಬೆಳೆಯುತ್ತಿಲ್ಲ ಎಂದರು.

ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಪ್ರಾಕೃತಿಕ ಸಂಕಷ್ಟಕ್ಕೆ ಪರಿಹಾರವಿದ್ದು, ಅಥರ್ವ ವೇದದಲ್ಲಿ ಋಷಿಮುನಿಗಳು ಇದರ ಬಗ್ಗೆ ಭೂಮಿ ಸೂತ್ರದಲ್ಲಿ ವಿವರಿಸಿದ್ದಾರೆ. ಅದರೆ ಇದನ್ನು ಪೌರಾಣಿಕ ಮೂಢನಂಬಿಕೆ ಕಥೆಯೆಂದು ಬಿಂಬಿಸಿ ವೈಜ್ಞಾನಿಕ ದೃಷ್ಟಿ ಕೋನದಿಂದ ಪ್ರತ್ಯೇಕಿಸಲಾಗಿದೆ. 2 ಸಾವಿರ ವರ್ಷಗಳ ಹಿಂದೆ ಪರಿಸರ ಸಂರಕ್ಷಣೆ ಬಗ್ಗೆ ಇದ್ದ ಬಲವಾದ ಚಿಂತನೆಗಳು ತಾಂತ್ರಿಕತೆಗೆ ನಾವೆಲ್ಲರೂ ಒಗ್ಗೂಡಿದ ನಂತರ ಕುಸಿದಿದೆ ಎಂದ ಅವರು, ಜಗತ್ತು ಸೃಷ್ಟಿಯಾಗಿರುವುದು ಪಂಚಭೂತಗಳಿಂದ. ವೈಜ್ಞಾನಿಕ ದೃಷ್ಟಿಯಿಂದ ಹಾಗೂ ಪೂರ್ವಜರ ಆಲೋಚನೆಗೆ ಅನುಗುಣವಾಗಿ ಎಲ್ಲಾ ಜೀವರಾಶಿಗಳು ಒಂದಕ್ಕೊಂದು ಪೂರಕವಾಗಿವೆ. ಪಂಚಭೂತಗಳ ಮಿಶ್ರಣ ವ್ಯತ್ಯಾಸದಿಂದ ರೂಪ ಹಾಗೂ ಗುಣಗಳು ಬದಲಾಗುತ್ತವೆಯೇ ಹೊರತು ಅದರ ಮೂಲಧಾತುಗಳಲ್ಲ ಎಂದರು.

ಪ್ರಾಸ್ತವಿಕವಾಗಿ ಮಾತನಾಡಿದ ಚಿಕ್ಕಮಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದರಾಮಪ್ಪ ಮಾತನಾಡಿ, ರಾಜ್ಯದ 226 ಅರಣ್ಯ ವಲಯಗಳಲ್ಲಿ ಬೀಜ ಬಿತ್ತನೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ 25,100 ಕೆ.ಜಿ ಬೀಜವನ್ನು ಸಂಗ್ರಹಿಸಿ ವಿವಿಧ ಕಾಡುಗಳಲ್ಲಿ ಬಿತ್ತನೆ ಮಾಡಲಾಗುತ್ತಿದೆ. ಜಿಲ್ಲಾ ಪಂಚಾಯತ್ ಮತ್ತು ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ 2.5 ಲಕ್ಷ ದೊಡ್ಡ ಗಾತ್ರದ ಸಸಿಗಳನ್ನು ನೆಡಲಾಗುತ್ತಿದೆ ಎಂದರು.

ಕೃಷಿ ಅರಣ್ಯ ಪ್ರೋತ್ಸಾಹ ಹಾಗೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಾಂಕೇತಿಕವಾಗಿ ಸಸಿಗಳನ್ನು ವಿತರಿಸಲಾಯಿತು. ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆದಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿಲ್ಲಾಧಿಕಾರಿ ಕೆ.ಎನ್. ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಎಚ್., ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎನ್.ಇ.ಕ್ರಾಂತಿ, ಪ್ರಭಾಕರನ್, ಶರಣಬಸಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News