×
Ad

ಮಲ್ಲೇಶ್ವರಂ ನೈಸರ್ಗಿಕ ಮಾವು ಮೇಳ ಜೂ.7ರವರೆಗೆ ವಿಸ್ತರಣೆ: ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

Update: 2022-06-05 21:21 IST
ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

ಬೆಂಗಳೂರು, ಜೂ.5: ಮಲ್ಲೇಶ್ವರಂ ನೈಸರ್ಗಿಕ(ಸಾವಯವ) ಮಾವು ಮೇಳವನ್ನು ಸಾರ್ವಜನಿಕರ ಒತ್ತಾಯದ ಮೇರೆಗೆ ಜೂ.7ರವರೆಗೆ ವಿಸ್ತರಿಸಲಾಗಿದೆ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. 

ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಷ್ಠಾನವು ಮಲ್ಲೇಶ್ವರಂ ಸರಕಾರಿ ಶಾಲಾ ಮೈದಾನದಲ್ಲಿ ಏರ್ಪಡಿಸಿರುವ ನೈಸರ್ಗಿಕ(ಸಾವಯವ) ಮಾವು ಮೇಳಕ್ಕೆ ರವಿವಾರ ಭೇಟಿ ನೀಡಿದ್ದ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಾತನಾಡಿ, ಮೂರು ದಿನಗಳಲ್ಲಿ ಈ ಮೇಳದಲ್ಲಿ ಸುಮಾರು 6 ಟನ್ ಸಾವಯವ ಮಾವು ಮಾರಾಟವಾಗಿದ್ದು, ಅಂದಾಜು 6 ಲಕ್ಷ ರೂಪಾಯಿಯ ವಹಿವಾಟು ನಡೆದಿದೆ. ಇದು ರೈತರು ಮತ್ತು ಸಾವಯವ ಕೃಷಿ ಪದ್ಧತಿಗೆ ಪ್ರತಿಷ್ಠಾನವು ಒದಗಿಸುತ್ತಿರುವ ಉತ್ತೇಜನಕ್ಕೆ ಒಂದು ಸಾಂಕೇತಿಕ ಕ್ರಮವಾಗಿದೆ' ಎಂದರು. 

ಈ ಸಂದರ್ಭದಲ್ಲಿ ಅವರು, ಮಳಿಗೆ ಹಾಕಿರುವ 20 ರೈತರಿಗೆ ನೆನಪಿನ ಕಾಣಿಕೆ ವಿತರಿಸಿದರು. 'ಸಾರ್ವಜನಿಕರು ರಾಸಾಯನಿಕಗಳ ಬಳಕೆ ಇಲ್ಲದ ನಿಸರ್ಗಸಹಜ ಆಹಾರ ಪದಾರ್ಥಗಳನ್ನು ಮತ್ತು ಹಣ್ಣು ಹಂಪಲುಗಳನ್ನು ಸೇವಿಸುವ ಅಭ್ಯಾಸವನ್ನು ರೂಢಿಸಿ ಕೊಳ್ಳಬೇಕು. ಇದರಿಂದ ಅನಗತ್ಯವಾಗಿ ಆಸ್ಪತ್ರೆಗಳಿಗೆ ಅಲೆದಾಡುವ ಮತ್ತು ಅನಾರೋಗ್ಯಕ್ಕೆ ಈಡಾಗುವ ಅಪಾಯವು ತಪ್ಪುತ್ತದೆ ಎಂದು ಅವರು ನುಡಿದರು.

'ಆಧುನಿಕ ಬದುಕಿನಲ್ಲಿ ಒತ್ತಡ ಮತ್ತು ಆತಂಕ ಹಾಗೂ ಜೀವನಶೈಲಿ ಯಿಂದಾಗಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಜತೆಗೆ ಅಸಹಜ ಆಹಾರ ಪದ್ಧತಿಯೂ ಇದಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಮೊದಲಿನಿಂದಲೇ ಸಾವಯವ ಆಹಾರಾಭ್ಯಾಸವನ್ನು ಒಂದು ಶಿಸ್ತಾಗಿ ಪಾಲಿಸಬೇಕು ಎಂದು ಸಚಿವರು ತಿಳಿಹೇಳಿದರು. ಜತೆಯಲ್ಲಿ ಬಿಜೆಪಿ ಮಲ್ಲೇಶ್ವರಂ ಮಂಡಲದ ಅಧ್ಯಕ್ಷೆ ಕಾವೇರಿ ಕೇದಾರನಾಥ ಮತ್ತಿತರರು ಇದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News