ಮಡಿಕೇರಿ: ಕಳ್ಳತನ ಪ್ರಕರಣದ ಆರೋಪಿಯ ಬಂಧನ

Update: 2022-06-05 15:56 GMT

ಮಡಿಕೇರಿ ಜೂ.5 : ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ, ಪೆರಾಡು ಗ್ರಾಮದ ತೋಟದ ಮಧ್ಯೆ ಇರುವ ಒಂಟಿ ಮನೆಗೆ ನುಗ್ಗಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶ್ರೀಮಂಗಲ ಪೊಲೀಸರು ಕೇರಳದ ಕಣ್ಣೂರಿನಲ್ಲಿ ಬಂಧಿಸಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ಪೊಡಮಕಲ್ ಗ್ರಾಮದ ಸಜೇಶ್ ಕೃಷ್ಣ ಎಂಬಾತನೇ ಬಂಧಿತ ಆರೋಪಿ.

ಈತ ಮೇ 29ರಂದು ಬಿರುನಾಣಿ ಪೊರಾಡು ಗ್ರಾಮದ ಅಣ್ಣೀರ ಎಂ. ಲೋಕೇಶ್ ಹಾಗೂ ಅವರ ಕುಟುಂಬದವರು ತಮ್ಮ ಸಂಬಂಧಿಕರ ಮನೆಗೆ ಹೋಗಿರುವುದನ್ನು ಗಮನಿಸಿ ರಾತ್ರಿ ಮನೆಯ ಹಿಂಬಾಗಿಲು ಹಾಗೂ ಛಾವಣಿಯನ್ನು ಮುರಿದು ಒಳ ನುಗ್ಗಿದ್ದಾನೆ. ನಂತರ 14 ಗ್ರಾಂ ಚಿನ್ನ, ರೂ.48 ಸಾವಿರ ನಗದು ಮತ್ತು ಪೀಚೆಕತ್ತಿಯ ಬೆಳ್ಳಿಯ ಸರವನ್ನು ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಕೇರಳದ ಕಣ್ಣೂರಿಗೆ ತೆರಳಿ ಆಭರಣ ಮಾರಾಟ ಮಾಡಿ ರೂ.16 ಸಾವಿರದ ಮೊಬೈಲ್ ಹಾಗೂ ರೂ.50 ಸಾವಿರದ ಬೈಕ್ ಖರೀದಿಸಿದ್ದ. ಆರೋಪಿ ಬೆಳೆಗಾರ ಅಣ್ಣೀರ ಲೋಕೇಶ್ ಅವರ ಮನೆಯಲ್ಲಿ ಕಾರ್ಮಿಕನಾಗಿದ್ದು, ಸಮೀಪದ ಲೈನ್ ಮನೆಯಲ್ಲೇ ವಾಸವಾಗಿದ್ದ. ಕಳವು ಮಾಡಿ ನಾಪತ್ತೆಯಾಗಿದ್ದ ಕಾರ್ಮಿಕ ಸಜೇಶ್ ಕೃಷ್ಣ ಅವರ ಬಗ್ಗೆ ಸಂಶಯ ವ್ಯಕ್ತಪಡಿಸಿ ಬೆಳೆಗಾರ ಲೋಕೇಶ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯಯನ್ನು ಸೆರೆ ಹಿಡಿದ ಪೊಲೀಸರು, ಹಣ ಹಾಗೂ ಆಭರಣ ಬಳಿಸಿ ಖರೀದಿಸಿದ್ದ ಬೈಕ್, ಖರ್ಚಾಗದೇ ಉಳಿದಿದ್ದ ಹಣ ಮತ್ತು ಮೊಬೈಲ್‍ನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣ ನಡೆದು ಕೇವಲ 5 ದಿನಗಳಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅವರ ನಿರ್ದೇಶನದಂತೆ ಡಿವೈಎಸ್ಪಿ ನಿರಂಜನ್ ರಾವ್ ಅರಸ್ ಹಾಗೂ ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ ಅವರ ಮಾರ್ಗದರ್ಶನದಲ್ಲಿ ಶ್ರೀಮಂಗಲ ಉಪನಿರೀಕ್ಷಕ ಕೆ.ಆರ್. ರವಿಶಂಕರ್, ಸಿಬ್ಬಂದಿಗಳಾದ ಬಿ.ಟಿ. ಮಂಜುನಾಥ್, ಖಾಲಿದ್, ಶಿವು, ರಘು ಸುಬ್ರಮಣಿ, ಚಂದ್ರಶೇಖರ್ ಹಾಗೂ ಚಾಲಕ ರಾಮಲಿಂಗ ಕಾರ್ಯಾಚರಣೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News