ಕೆಎಸ್ಸಾರ್ಟಿಸಿಯಿಂದ ಸಸಿ ನೆಡುವ ಕಾರ್ಯಕ್ಕೆ ಚಾಲನೆ

Update: 2022-06-05 15:58 GMT

ಬೆಂಗಳೂರು, ಜೂ. 5: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಯ ಶಾಂತಿ ನಗರದಲ್ಲಿನ ಕೇಂದ್ರ ಕಚೇರಿಯಲ್ಲಿ ‘ವಿಶ್ವ ಪರಿಸರ ದಿನಾಚರಣೆ' ಹಿನ್ನೆಲೆಯಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕ ಕೆ.ಆರ್.ವಿಶ್ವನಾಥ್ ಹಾಗೂ ಉಪ ಮುಖ್ಯಯಾಂತ್ರಿಕ ಅಭಿಯಂತರ ಅನಿಲ್ ಕುಮಾರ್ ಎಂ ಅವರು ಸಸಿ ನೆಡುವ ಮೂಲಕ ಪರಿಸರ ಜಾಗೃತಿಗೆ ಚಾಲನೆ ನೀಡಿದರು.

ಕೆಎಸ್ಸಾರ್ಟಿಸಿಯ ವ್ಯಾಪ್ತಿಯಲ್ಲಿರುವ ಎಲ್ಲ ವಿಭಾಗಗಳ ವ್ಯಾಪ್ತಿಯ ಬಸ್ ನಿಲ್ದಾಣಗಳು, ಘಟಕಗಳು, ಪ್ರಾದೇಶಿಕ ಕಾರ್ಯಾಗಾರಗಳು, ತರಬೇತಿ ಕೇಂದ್ರಗಳಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಅಧಿಕಾರಿ, ಮೇಲ್ವಿಚಾರಕ/ ತಾಂತ್ರಿಕ/ಚಾಲನಾ ಸಿಬ್ಬಂದಿಗಳು ಇತರೆ ಇಲಾಖೆ, ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸಸಿ ನೆಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.

2020-21ನೆ ಸಾಲಿನಲ್ಲಿ ಮುಂದಿನ ನಾಲ್ಕು ತಿಂಗಳುಗಳಲ್ಲಿ ಸಂಕಲ್ಪತರು ಫೌಂಡೇಶನ್ ಸಹಯೋಗದೊಂದಿಗೆ ಒಟ್ಟು 4,500 ಗಿಡಗಳನ್ನು ನೆಡಲು ವಿಭಾಗವಾರು ಯೋಜನೆಯನ್ನು ರೂಪಿಸಲಾಗಿದೆ. ಜತೆಗೆ ನಿಗಮದ 15 ವಿಭಾಗಗಳಲ್ಲಿ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳನ್ನು ಅಂತರ್ಜಾಲಗೊಳಿಸಲಾಗಿದೆ. ನಿಗಮದ ‘ಪ್ರಕೃತಿ' ಎಂಬ ವಾಹನದೊಂದಿಗೆ ತಾಂತ್ರಿಕ ಸಿಬ್ಬಂದಿಗಳ ತಂಡವನ್ನು ರಚಿಸಿದ್ದು, ಎಲ್ಲ ವಿಭಾಗಗಳ ಘಟಕಗಳಿಗೆ ಭೇಟಿ ನೀಡಿ, ಘಟಕಗಳ ಪರಿವೀಕ್ಷಣೆ ಹಾಗೂ ಅನಿರೀಕ್ಷಿತ ವಾಯು ಮಾಲಿನ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.

ಬಸ್ ನಿಲ್ದಾಣ/ ಘಟಕ/ ವಿಭಾಗೀಯ ಕಚೇರಿ/ ಕಾರ್ಯಾಗಾರಗಳಲ್ಲಿ ಸ್ವಚ್ಛತೆ ಕಾಪಾಡಲು ಬಯಲು ಮೂತ್ರ ವಿಸರ್ಜನೆ ನಿಷೇಧ ಜಾರಿಗೆ ತರಲಾಗಿದೆ. ಉಲ್ಲಂಘಿಸಿದ ಪ್ರತಿವ್ಯಕ್ತಿಗೆ 100 ರೂ.ನಂತೆ ದಂಡವನ್ನು 2021-22ರಲ್ಲಿ ಒಟ್ಟು 9,13,500 ರೂ.ದಂಡದ ವಸೂಲಿ ಮಾಡಲಾಗಿದೆ. ಅಲ್ಲದೆ, ಉಗುಳುವುದನ್ನು ನಿಷೇಧ ಮಾಡಲಾಗಿದೆ. ಉಲ್ಲಂಘಿಸಿದ ಪ್ರತಿ ವ್ಯಕ್ತಿಗೆ 100 ರೂ.ದಂಡ ವಿಧಿಸಿ, 4,22,800 ರೂ.ದಂಡದ ವಿಧಿಸಲಾಗಿದೆ.

ಕಾರ್ಯಕ್ರಮದಲ್ಲಿ ಕೆಎಸ್ಸಾರ್ಟಿಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ ಟಿ.ಎಸ್., ಉಪಮುಖ್ಯ ಗಣಕ ವ್ಯವಸ್ಥಾಪಕ ಎಚ್.ಗುರುರಾಜ್ ಹಾಗೂ ಸಂಕಲ್ಪತರು ಫೌಂಡೇಷನ್ ಅರ್ಜುನ್ ಸೇರಿದಂತೆ ಕೆಎಸ್ಸಾರ್ಟಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News