ಓ ಮೆಣಸೇ...

Update: 2022-06-05 19:30 GMT

ನಾನು ಹಾಗೂ ನನ್ನ ಸರಕಾರ ಕಳೆದ 8 ವರ್ಷಗಳಲ್ಲಿ ಜನರು ನಾಚಿಕೆಯಿಂದ ತಲೆ ತಗ್ಗಿಸುವಂತಹ ಯಾವುದೇ ಕೆಲಸ ಮಾಡಿಲ್ಲ - ನರೇಂದ್ರ ಮೋದಿ, ಪ್ರಧಾನಿ
ನೀವು ಜನರಿಂದ ಅವರ ತಲೆಯನ್ನೇ ಕಿತ್ತುಕೊಂಡ ಮೇಲೆ ಪಾಪ, ತಗ್ಗಿಸಲು ಅವರ ಬಳಿ ಏನು ತಾನೇ ಉಳಿದಿರುತ್ತದೆ?

ಅನಗತ್ಯ ತಕರಾರು ಎತ್ತುವವರು ವಿಚಾರ ನಪುಂಸಕರು - ಪ್ರತಾಪ ಸಿಂಹ, ಸಂಸದ
ನೀವು ನಿಮ್ಮ ತಕರಾರುಗಳನ್ನೆಲ್ಲ ಲಿಂಗ ಶೋಧಕ್ಕೆ ಮೀಸಲಿಟ್ಟಿರುವುದು ನಿಮ್ಮ ವೈಚಾರಿಕ ಪೌರುಷ ಮೆರೆಯಲಿಕ್ಕಾಗಿಯೇ?

ಆರೆಸ್ಸೆಸ್ ನಾಯಕರನ್ನು ನಾನು ಪ್ರಶ್ನಿಸಿದರೆ ಬಿಜೆಪಿಯವರು ಯಾಕೆ ಎದೆ ಬಡಿದುಕೊಳ್ಳುತ್ತಿದ್ದಾರೆ - ಸಿದ್ದರಾಮಯ್ಯ, ಮಾಜಿ ಸಿಎಂ
ಹಾಗೆ ಎದೆ ಬಡಿದುಕೊಳ್ಳುವ ಹಲವರು ಸ್ವತಃ ನಿಮ್ಮ ಪಕ್ಷದಲ್ಲೂ ಇದ್ದಾರಲ್ಲಾ? ಅವರನ್ನೂ ಪ್ರಶ್ನಿಸಿ ನೋಡಿ.

ನಾನು ಗರ್ವದಿಂದ ಹೇಳುತ್ತೇನೆ. ಶಾಂತಿಯಿಂದ ಸ್ವಾತಂತ್ರ ಸಿಕ್ಕಿಲ್ಲ, ಕ್ರಾಂತಿಯಿಂದ ದೊರೆತಿದೆ - ಸುನೀಲ್ ಕುಮಾರ್ ಸಚಿವ
ಅಶಾಂತಿಯಿಂದಲೇ ಸ್ವಾತಂತ್ರಎಂದು ಸ್ಪಷ್ಟವಾಗಿ ಅಶಾಂತಿಯನ್ನು ವೈಭವೀಕರಿಸಿ - ಮುಚ್ಚುಮರೆ ಏಕೆ?

ಮನುಷ್ಯನಿಗೆ ಉಸಿರು ಹೇಗೆ ಮುಖ್ಯವೋ ಭಾರತ ದೇಶಕ್ಕೆ ಜಾತ್ಯತೀತ ಮೌಲ್ಯ ಅಷ್ಟೇ ಮುಖ್ಯ - ಯು.ಟಿ.ಖಾದರ್, ಶಾಸಕ
ಜಾತ್ಯತೀತತೆಯ ಶತ್ರುಗಳು ದೇಶವನ್ನು ಕೊಲ್ಲುವ ಮುನ್ನವೇ ನಿಮ್ಮ ಪಕ್ಷವನ್ನು ಕೊಲ್ಲಲು ಶ್ರಮಿಸುತ್ತಿರುವ ನಿಮ್ಮ ಪಕ್ಷೀಯರ ಬಗ್ಗೆ ಏನನ್ನುತ್ತೀರಿ?

ಸಿದ್ದರಾಮಯ್ಯರಿಗೆ ತಾಕತ್ತಿದ್ದರೆ ನಮ್ಮ ಮುಂದೆ ಬೀಫ್ ತಿನ್ನಲಿ - ಪ್ರಭು ಚವ್ಹಾಣ್, ಸಚಿವ
ಈವರೆಗೆ ಬೀಫ್ ರಫ್ತುಮಾಡುವ ದಂಧೆಯಲ್ಲಿ ನಿರತರಾಗಿದ್ದ ನಿಮ್ಮ ಬಳಗ ಇದೀಗ ದೇಶದೊಳಗೆ ಬೀಫ್ ಮಾರುಕಟ್ಟೆ ಬಲಪಡಿಸುವ ಅಭಿಯಾನ ಆರಂಭಿಸಿದೆಯೇ?

ನಪುಂಸಕರಿಗೆ ಮಾತ್ರ ನಪುಂಸಕ ಎಂದರೆ ಏನು ಎಂಬುದು ಗೊತ್ತಿರುತ್ತದೆ - ಈಶ್ವರಪ್ಪ, ಮಾಜಿ ಸಚಿವ
ಇಂತಹ ನಿಮ್ಮ ಖಾಸಗಿ ಅನುಭವಗಳನ್ನು ಸಾರ್ವಜನಿಕರ ಜೊತೆ ಹಂಚಿಕೊಳ್ಳುವ ಅಗತ್ಯ ಇದೆಯೇ?

ಹುಲಿ ಕಾಡಿನಲ್ಲಿದ್ದರೂ ಹುಲಿಯೇ, ಬೋನಿನಲ್ಲಿದ್ದರೂ ಹುಲಿಯೇ - ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ಇಲಿಯೂ ಅಷ್ಟೇ. ಬಿಲದಲ್ಲೂ ಇಲಿ, ಗೂಡಿನಲ್ಲೂ ಇಲಿ.

ಇರುವೆಗಳು ಕಟ್ಟಿದ ಗೂಡಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾವಿನಂತೆ ಹೊಕ್ಕಿಕೊಂಡಿದ್ದಾರೆ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಹುಳಗಳ ಗೂಡಿಗಿಂತ ಇದು ವಾಸಿ ಅಂತಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮುಖ ರಾಮನದ್ದು, ಚಿಂತನೆ ಮತ್ತು ಬುದ್ಧಿ ರಾವಣನದ್ದು - ನಳಿಲ್ ಕುಮಾರ್ ಕಟೀಲು, ಸಂಸದ
ಅವರು ಶೀಲಾಪಹರಣ ಮಾಡುವವರಲ್ಲ ಎಂದು ಪರೋಕ್ಷವಾಗಿ ಹೊಗಳುತ್ತಿದ್ದೀರಾ?

ಕಾಂಗ್ರೆಸ್‌ನಲ್ಲಿ ದಲಿತರು ಮುಖ್ಯಮಂತ್ರಿ ಯಾಗಲು ಅವಕಾಶವಿದೆ ಎಂಬ ನಂಬಿಕೆ ನನಗಿದೆ - ಡಾ.ಜಿ.ಪರಮೇಶ್ವರ್, ಶಾಸಕ
ದಿವಾಳಿತನದ ಹಂತದಲ್ಲಿ ಆಶಾವಾದವೊಂದೇ ಆಶ್ರಯ.

ರಾಜ್ಯ ಸಭೆ ಚುನಾವಣೆಗೆ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ನನಗೇ ಅಚ್ಚರಿ ಮೂಡಿಸಿದೆ -ಜಗ್ಗೇಶ್, ನಟ
ಜನರಿಗೂ ಅಷ್ಟೇ, ತಬ್ಬಿಬ್ಬಾಗಿದ್ದಾರೆ.

ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಶಾಲಾ - ಕಾಲೇಜುಗಳಲ್ಲಿ ಯೋಗ ಶಿಕ್ಷಣ ಮತ್ತು ಯೋಗಾಭ್ಯಾಸ ಪ್ರಾರಂಭಿಸಲಾಗುವುದು - ಬಸವರಾಜ ಬೊಮ್ಮಾಯಿ, ಸಿಎಂ
ಪ್ರಮೋದ್ ಮುತಾಲಿಕ್‌ರನ್ನು ಮುಖ್ಯಮಂತ್ರಿಯಾಗಿಸಿದರೆ ಇದನ್ನೆಲ್ಲಾ ಲೀಲಾಜಾಲವಾಗಿ ಮಾಡುತ್ತಾರೆ.

ಸಿನೆಮಾ ನಟರಿಗೆ ಇರುವ ಯಾವ ರಕ್ಷಣೆಯೂ ಯಕ್ಷಗಾನ ಕಲಾವಿದರಿಗಿಲ್ಲ - ಆರಗ ಜ್ಞಾನೇಂದ್ರ, 

ಸಚಿವ ಯಕ್ಷಗಾನ ಕಲಾವಿದರಿಗೆ ಕನಿಷ್ಠ ಸಿನೆಮಾ ನಟರಿಗಿರುವಷ್ಟು ವಿವೇಕ ಇಲ್ಲದಿದ್ದರೆ? ಸಂಘಪರಿವಾರವನ್ನು ಟೀಕಿಸುವವರು ದೇಶದ್ರೋಹಿಗಳು - ರೇಣುಕಾಚಾರ್ಯ, ಶಾಸಕ
ದೇಶಪ್ರೇಮಿಗಳನ್ನು ಟೀಕಿಸುವವರು ಸಂಘಪರಿವಾರದವರು.

ಆರ್ಯರು ಹೊರಗಿನಿಂದ ಬಂದವರಲ್ಲ ಎಂಬುದಕ್ಕೆ ವೈಜ್ಞಾನಿಕ ಪುರಾವೆಯಿದೆ - ನಾರಾಯಣ ಸ್ವಾಮಿ, ಕೇಂದ್ರ ಸಚಿವ
ಆದರೆ ಆ ಪುರಾವೆಗಳೆಲ್ಲ, ಅವರು ಹೊರಗಿನಿಂದ ಬಂದವರೆನ್ನುವುದಕ್ಕಿರುವ ಪುರಾವೆಗಳ ಮುಂದೆ ಮಣ್ಣುಮುಕ್ಕಿವೆ.

ಮಾಜಿ ಸಿಎಂ ಸಿದ್ದರಾಮಯ್ಯ ಆರೆಸ್ಸೆಸ್ ಬಗ್ಗೆ ಅಧ್ಯಯನ ಮಾಡಿಲ್ಲ - ಎಸ್.ಟಿ.ಸೋಮಶೇಖರ್, ಸಚಿವ
ಮಾಡಿದ್ದರೆ ಅವರ ಆಕ್ರೋಶದ ಮಟ್ಟವೇ ಬೇರೆ ಇರುತ್ತಿತ್ತು.

ಲವ್ ಜಿಹಾದ್ ಹೆಣ್ಣು ಮಕ್ಕಳನ್ನು ನರಕದ ಕೂಪಕ್ಕೆ ತಳ್ಳುವ ಪ್ರಕ್ರಿಯೆಯಾಗಿದೆ - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಹಾಗಾದರೆ ಹಿಂದೆ ಅಗ್ನಿಪರೀಕ್ಷೆಯ ಹೆಸರಲ್ಲಿ ಹೆಣ್ಣು ಮಕ್ಕಳನ್ನು ಅಗ್ನಿಕುಂಡಕ್ಕೆ ತಳ್ಳುತ್ತಿದ್ದವರೆಲ್ಲ ಲವ್ ಜಿಹಾದ್ ಮಾಡುವವರಾಗಿದ್ದರೇ?

ಪಠ್ಯಪುಸ್ತಕದ ವಿಷಯದಲ್ಲಿ ಎಡ, ಬಲ ಎರಡೂ ಬೇಡ - ಯದುವೀರ್ ಒಡೆಯರ್, ಮೈಸೂರು ರಾಜ ವಂಶಸ್ಥ
ಹಸ್ತ ಕ್ಷೇಪ ಎಡಗೈಯಲ್ಲಿ ಮಾಡಿದರೂ, ಬಲಗೈಯಲ್ಲಿ ಮಾಡಿದರೂ ವ್ಯತ್ಯಾಸ ಏನೂ ಇಲ್ಲ.

ನನ್ನ ಮೇಲಿನ ಆರೋಪ ಸಾಬೀತುಪಡಿಸಿದರೆ ಅಂದಿನಿಂದ ಹಸಿರು ವಸ್ತ್ರ ಧರಿಸುವುದಿಲ್ಲ - ಕೋಡಿಹಳ್ಳಿ ಚಂದ್ರಶೇಖರ್, ರೈತ ಸಂಘದ ಮಾಜಿ ಅಧ್ಯಕ್ಷ
ಇದೇನು, ಕೇಸರಿ ಧಾರಣೆಗೆ ಮುನ್ನುಡಿಯೇ?

ದೇಶದ ಆರ್ಥಿಕ ಸ್ಥಿತಿಯಲ್ಲಿ ಸರಕಾರಿ ಹುದ್ದೆಗಳನ್ನು ತುಂಬುವುದು ಬಹಳ ಕಷ್ಟ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಎಲ್ಲವನ್ನೂ ಖಾಲಿ ಮಾಡಿ ಆಯ್ತಲ್ಲ? ಅದನ್ನೂ ಮಾಡಿಬಿಡಿ.

ಕುವೆಂಪು ಅವರ ಎರಡು ಗೀತೆಗಳನ್ನು ನಾಡಗೀತೆಯನ್ನಾಗಿ ಮಾಡಿದ್ದೇ ಬಿಜೆಪಿ ಸರಕಾರ - ಡಿ.ವಿ.ಸದಾನಂದಗೌಡ, ಸಂಸದ
ಅದಕ್ಕಾಗಿ ಕುವೆಂಪು ಅವರಿಗೆ ಈ ಪರಿಯ ಶಿಕ್ಷೆಯೇ ?

ಬೆಳಗಾವಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಶಾವಿಗೆ, ಸಂಡಿಗೆ ಹಾಗೂ ಹಪ್ಪಳ ಒಣಗಿಸುತ್ತಿದ್ದ ಮಹಿಳಾ ಸಿಬ್ಬಂದಿಯ ವಜಾ -ಸುದ್ದಿ
ಏಕೆಂದರೆ ಮಹಾಪರಾಧಗಳಿಗೆ ಮೀಸಲಿರುವ ವಠಾರದಲ್ಲಿ ಪುಟ್ಟ ಪ್ರಮಾದಗಳು ಅಕ್ಷಮ್ಯವಾಗಿರುತ್ತವೆ.

ವಂಚಿತ ಸಮುದಾಯದ ಅಭಿವೃದ್ಧಿ ಸಾಧಿಸುವ ಉದ್ದೇಶದಿಂದ ಜಾತಿ ಗಣತಿಯನ್ನು ನಡೆಸಲು ನಿರ್ಧರಿಸಲಾಗಿದೆ -ನಿತೀಶ್ ಕುಮಾರ್, ಬಿಹಾರ ಸಿಎಂ
ಇದನ್ನಾದರೂ ವಂಚಿತರನ್ನು ಮತ್ತೆ ವಂಚಿಸುವ ಅಸ್ತ್ರವಾಗಿ ಬಳಸದೆ ಪ್ರಾಮಾಣಿಕವಾಗಿ ಮಾಡುವಿರಾ?

ಕ್ರಿಮಿನಲ್‌ಗಳು ಯಾರೂ ತಾವು ಕ್ರಿಮಿನಲ್‌ಗಳೆಂದು ಒಪ್ಪಿಕೊಳ್ಳುವುದಿಲ್ಲ - ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ಇದು ಜನರಿಗೆ ಗೊತ್ತಿದೆ. ಆದ್ದರಿಂದಲೇ ಅವರು ನಿಮ್ಮಿಂದ ತಪ್ಪೊಪ್ಪಿಗೆಯನ್ನು ನಿರೀಕ್ಷಿಸುವುದಿಲ್ಲ.

ಸತ್ಯ ಹೇಳಲು ಹೊರಟಾಗ ವಿರೋಧಗಳು ಸಹಜ - ಎಸ್.ಎಲ್. ಭೈರಪ್ಪ, ಸಾಹಿತಿ
ಹಾಗೆಂದು, ಸತ್ಯ ಹೇಳುವುದನ್ನೇ ಬಿಟ್ಟು ಬಿಟ್ಟಿರಲ್ಲಾ!

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...