‘ಆಕ್ಮೆ ಕ್ಲೀನ್ ಟೆಕ್ ಸೊಲ್ಯೂಷನ್ ಕಂಪೆನಿ'ಯಿಂದ ಮಂಗಳೂರಿನಲ್ಲಿ 52 ಸಾವಿರ ಕೋಟಿ ರೂ.ಹೂಡಿಕೆ

Update: 2022-06-06 13:24 GMT

ಬೆಂಗಳೂರು, ಜೂ. 6: ‘ಗುರುಗ್ರಾಮ ಮೂಲದ ಆಕ್ಮೆ ಕ್ಲೀನ್ ಟೆಕ್ ಸಲ್ಯುಷನ್ಸ್ ಕಂಪೆನಿ ಮಂಗಳೂರಿನಲ್ಲಿ ಹೈಡ್ರೋಜನ್ ಮತ್ತು ಅಮೋನಿಯಾ ಘಟಕ ಹಾಗೂ ಪೂರಕವಾಗಿ ಸೋಲಾರ್ ಘಟಕ ಸ್ಥಾಪನೆಗೆ 52 ಸಾವಿರ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ ಮಾಡುವ ಸಂಬಂಧ ರಾಜ್ಯ ಸರಕಾರದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಹತ್ವದ ಒಪ್ಪಂದ ಮಾಡಿಕೊಂಡಿದೆ. 

ಸೋಮವಾರ ನಗರದ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ಹಾಗೂ ಆಕ್ಮೆ ಗ್ರೂಪ್ ಕಂಪೆನಿಯ ಸಿಓಓ ಸಂದೀಪ್ ಕಶ್ಯಪ್ ಅವರು ಒಪ್ಪಂದಕ್ಕೆ ಸಹಿ ಮಾಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ‘ಕರ್ನಾಟಕ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯ ಸರಕಾರವು ಗ್ರೀನ್ ಹೈಡ್ರೋಜನ್ ನೀತಿಯನ್ನು ರೂಪಿಸುತ್ತಿದ್ದು, ಇದರ ಲಾಭ ಪಡೆದುಕೊಳ್ಳಬೇಕು. ಕರ್ನಾಟಕ ರಾಜ್ಯವು ಸದಾ ಹೊಸ ತಂತ್ರಜ್ಞಾನ, ಭವಿಷ್ಯದ ಯೋಜನೆಗಳಿಗೆ ಉತ್ತೇಜನ ನೀಡುತ್ತ ಬಂದಿದೆ. ಈ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರಕಾರ ತ್ವರಿತವಾಗಿ ಎಲ್ಲ ಅಗತ್ಯ ಬೆಂಬಲ ನೀಡಲಿದೆ. ನೀವು ಸಕಾಲದಲ್ಲಿ ಯೋಜನೆ ಜಾರಿಗೊಳಿಸಿ ಎಂದು ಸಲಹೆ ನೀಡಿದರು. 

ಆಕ್ಮೆ ಗ್ರೂಪ್ ಜಾಗತಿಕ ಮಟ್ಟದಲ್ಲಿ ಹೈಡ್ರೋಜನ್ ಅಮೋನಿಯ ಘಟಕಗಳ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದೆ. ರಾಜಸ್ಥಾನದ ಬಿಕಾನೇರ್‍ನಲ್ಲಿ ವಿಶ್ವದ ಮೊದಲ ಹೈಡ್ರೋಜನ್ ಅಮೋನಿಯ, ಸೋಲಾರ್ ಘಟಕವನ್ನು ಸ್ಥಾಪಿಸಿದ್ದು, ಕಾರ್ಯಾರಂಭ ಮಾಡಿದೆ ಎಂದು ಆಕ್ಮೆ ಗ್ರೂಪ್‍ನ ಉಪಾಧ್ಯಕ್ಷ ಶಶಿ ಶೇಖರ್ ಇದೇ ವೇಳೆ ಮಾಹಿತಿ ನೀಡಿದರು.

ಇತ್ತೀಚೆಗೆ ಸ್ವಿಟ್ಸಲೆರ್ಂಡಿನ ದಾವೊಸ್‍ನಲ್ಲಿ ರೆನ್ಯೂ ಪವರ್ ಕಂಪೆನಿಯವರು ನವೀಕರಿಸಬಹುದಾದ ಇಂಧನ ವಲಯದಲ್ಲಿ 50ಸಾವಿರ ಕೋಟಿ ರೂ.ಹೂಡಿಕೆ ಒಪ್ಪಂದ ಮಾಡಿಕೊಂಡಿತ್ತು. ಅದನ್ನು ಇಲ್ಲಿ ಸ್ಮರಿಸಬಹುದು. ಈ ವೇಳೆ ಇಂಧನ ಸಚಿವ ವಿ.ಸುನಿಲ್ ಕುಮಾರ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಆಕ್ಮೆ ಗ್ರೂಪ್‍ನ ಎಂ.ವಿ.ವಿ.ಎಸ್ ರೆಡ್ಡಿ, ಅರುಣ್ ಚೋಪ್ರಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

‘ಬಂಡವಾಳ ಹೂಡಿಕೆಗೆ ಕರ್ನಾಟಕ ಪ್ರಶಸ್ತ ತಾಣ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ದೇಶದಲ್ಲಿಯೇ ಕರ್ನಾಟಕ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಿದೆ. ಮೂರು ತ್ರೈಮಾಸಿಕ ಅವಧಿಯಲ್ಲಿ ಕರ್ನಾಟಕಕ್ಕೆ ಹರಿದುಬಂದಿರುವ ಎಫ್‍ಡಿಐ ಮೊತ್ತವೇ ಇದಕ್ಕೆ ಸಾಕ್ಷಿಯಾಗಿದೆ'

-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News