ನಿಂದನೆ, ಹಲ್ಲೆಯಿಂದ ಮಹಿಳೆ ಸಾವು: ಆರೋಪಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್

Update: 2022-06-06 13:42 GMT

ಬೆಂಗಳೂರು, ಜೂ.6: ನೆರೆಮನೆ ವ್ಯಕ್ತಿಯ ಹಲ್ಲೆ ಹಾಗೂ ನಿಂದನೆಗೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ಮಹಿಳೆ ಸಾವಿಗೆ ಮುನ್ನ ನೀಡಿದ್ದ ಮರಣಪೂರ್ವ ಹೇಳಿಕೆಯನ್ನು ಪರಿಗಣಿಸಿರುವ ಹೈಕೋರ್ಟ್, ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣದಿಂದ ಖುಲಾಸೆಯಾಗಿದ್ದ ವ್ಯಕ್ತಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಮಹಿಳೆಯ ಸಾವಿಗೆ ಕಾರಣನಾದ ಆರೋಪಿ ಶಾಂತಾಶೆಟ್ಟಿ ಎನ್ನುವವರನ್ನು ಪ್ರಕರಣದಿಂದ ಖುಲಾಸೆ ಮಾಡಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಹಾಗೂ ಆರೋಪಿಗೆ ಶಿಕ್ಷೆ ವಿಧಿಸುವಂತೆ ಕೋರಿ ಚಾಮರಾಜನಗರ ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ತೀರ್ಪು ನೀಡಿದೆ. 

ನ್ಯಾಯಪೀಠ ತನ್ನ ತೀರ್ಪಿನಲ್ಲಿ ಮರಣಪೂರ್ವ ಹೇಳಿಕೆ ನೀಡಿರುವ ಮಹಿಳೆಯು ಮಾನಸಿಕವಾಗಿ ಸದೃಢರಾಗಿದ್ದರು ಎಂಬುದಕ್ಕೆ ವೈದ್ಯರು ಪ್ರಮಾಣಪತ್ರ ನೀಡಿಲ್ಲ ಎಂಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿದೆ. ಆದರೆ. ವೈದ್ಯರು ನೀಡುವ ಸಂತ್ರಸ್ತರ ಮಾನಸಿಕ ಸದೃಢತೆ ಪ್ರಮಾಣ ಪತ್ರ ಒಂದು ತಾಂತ್ರಿಕ ಅಂಶವೇ ಹೊರತು ಅದು ಸಾಕ್ಷ್ಯವಲ್ಲ. ಅದು ಕಡ್ಡಾಯವೂ ಅಲ್ಲ. ಮರಣಪೂರ್ವ ಹೇಳಿಕೆ ವಿಶ್ವಾಸಾರ್ಹವಾಗಿದ್ದರೆ ಅದನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಬಹುದು ಎಂದು ಅಭಿಪ್ರಾಯಪಟ್ಟಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News