ಸುರತ್ಕಲ್; ಮರು ಎಣಿಕೆಯ ಬಳಿಕ ಎಸೆಸೆಲ್ಸಿಯಲ್ಲಿ 625ಕ್ಕೆ 625 ಅಂಕ ಪಡೆದ ಮುಹಮ್ಮದ್ ಆಬಿದ್ ಅಲಿ

Update: 2022-06-06 17:18 GMT

ಸುರತ್ಕಲ್, ಜೂ.6: ಮರು ಎಣಿಕೆಯ ಬಳಿಕ ಕಾಟಿಪಳ್ಳದ ಮುಹಮ್ಮದ್ ಆಬಿದ್ ಅಲಿ ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಮುಹಮ್ಮದ್ ಆಬಿದ್ ಅಲಿ ಎಲ್ಲಾ ವಿಷಯಗಳಲ್ಲಿ ಸಂಪೂರ್ಣ ಅಂಕಗಳನ್ನು ಪಡೆದಿದ್ದರು‌. ಆದರೆ ಕನ್ನಡದಲ್ಲಿ 96 ಅಂಕಗಳನ್ನು ಪಡೆದಿದ್ದರು. ಕನ್ನಡದಲ್ಲಿಯೂ 100 ಅಂಕ ಪಡೆಯುವ ವಿಶ್ವಾಸ ಇದ್ದ ಕಾರಣ ಅಧ್ಯಾಪಕರು ಹಾಗೂ ಪೋಷಕರೊಂದಿಗೆ ಚರ್ಚಿಸಿ ಕನ್ನಡ ಪತ್ರಿಕೆಯನ್ನು ಮರು ಎಣಿಕೆಗೆ ಮನವಿ ಸಲ್ಲಿಸಿದ್ದರು.

ಮರು ಎಣಿಕೆಯ ಬಳಿಕ ಕನ್ನಡದಲ್ಲೂ 100ಕ್ಕೆ 100 ಅಂಕ ಪಡೆಯುವ ಮೂಲಕ ಒಟ್ಟು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯದ ಟಾಪರ್ ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 

ಮುಹಮ್ಮದ್ ಆಬಿದ್ ಅಲಿ ಕಾಟಿಪಳ್ಳ 2ನೇ ಬ್ಲಾಕ್ ನಿವಾಸಿ ಅಬ್ದುಲ್ ಖಾದರ್ ಜಿಲಾನಿ ಮತ್ತು ಶಮೀಮಾ ದಂಪತಿ ಪುತ್ರರಾಗಿದ್ದು, ಕಾಟಿಪಳ್ಳದ ಇನ್‌ಫೆಂಟ್‌ ಶಾಲೆಯ ವಿದ್ಯಾರ್ಥಿ.

"ಮುಹಮ್ಮದ್ ಆಬಿದ್ ಅಲಿ ಕಲಿಕೆಯಲ್ಲಿ ಸದಾ ಪ್ರಥಮ ಸ್ಥಾನದಲ್ಲಿ ಇರುತ್ತಿದ್ದ, ಕಾಟಿಪಳ್ಳದ ಇನ್‌ಫೆಂಟ್‌ ಶಾಲೆಗೆ ಕೀರ್ತಿ ತರುತ್ತಾನೆ ಎಂಬ ವಿಶ್ವಾಸದಲ್ಲಿದ್ದೆವು. ಆದರೆ ಕನ್ನಡದಲ್ಲಿ 4 ಅಂಕ ಕಡಿಮೆ ಬಂದ ಕಾರಣ ಒಟ್ಟು 621 ಅಂಕ ಬಂದಿತ್ತು. ಮರು ಎಣಿಕೆಗೆ ಅರ್ಜಿ ಹಾಕಿದ್ದರಿಂದ ಕನ್ನಡದಲ್ಲಿಯೂ 100 ಅಂಕ ಸಿಕ್ಕಿದ್ದು, ಶಾಲೆಗೆ ಕೀರ್ತಿ ತಂದಿದ್ದಾನೆ".
- ಮಾರ್ಗರೆಟ್ ಪಾಯಸ್, 
ಪ್ರಾಂಶುಪಾಲೆ, ಇನ್‌ಫೆಂಟ್‌ ಶಾಲೆ ಕಾಟಿಪಳ್ಳ

ಮುಹಮ್ಮದ್ ಆಬಿದ್ ಅಲಿ ಪೋಷಕರು ತಮ್ಮ ಮಗನ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮರು ಎಣಿಕೆ ಮಾಡಿದ ಕಾರಣ 4 ಅಂಕ ಹೆಚ್ಚು ಸಿಕ್ಕಿತು. ಯಾವುದೇ ಬಲವಂತವಿಲ್ಲದೆ ತಾನಾಗಿಯೇ ಓದಿ ಉತ್ತಮ ಅಂಕ ಗಳಿಸಿದ್ದಾನೆ‌ ಎಂದು ಪೋಷಕರಾದ ಅಬ್ದುಲ್ ಖಾದರ್ ಜಿಲಾನಿ ಶಮೀಮಾ ದಂಪತಿ ಹರ್ಷ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News