ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ; ಮಾಫಿಯಾ ಜೊತೆ ಸರಕಾರದ ಶಾಮೀಲು: ಡಿ.ಕೆ.ಶಿವವಕುಮಾರ್ ಆರೋಪ
ಬೆಂಗಳೂರು, ಜೂ. 7: ‘ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಸರಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಸರಕಾರ ಬಿಟ್ಟಿದೆ. ಅಲ್ಲದೆ, ರೈತರಿಗೆ ಕಲಬೆರಿಕೆ ಗೊಬ್ಬರವನ್ನು ನೀಡಲಾಗುತ್ತಿದೆ. ಈ ವಿಚಾರವಾಗಿ ಹುಬ್ಬಳ್ಳಿ-ಧಾರವಾಡ ಹಾಗೂ ಇತರೆ ಜಿಲ್ಲೆಗಳಿಂದ ಅನೇಕರು ನನಗೆ ಕರೆ ಮಾಡಿ ಹೇಳುತ್ತಿದ್ದಾರೆ. ಸರಕಾರ ಮಾಫಿಯಾ ಜೊತೆ ಶಾಮಿಲಾಗಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿತ್ತನೆ ಬೀಜದಿಂದ ರಸಗೊಬ್ಬರದ ವರೆಗೂ ರೈತರಿಗೆ ಪ್ರತಿ ಹಂತದಲ್ಲಿ ಮೋಸ ಮಾಡಲಾಗುತ್ತಿದೆ. ಶೇ.40ರಷ್ಟು ಕಮಿಷನ್ ಜೊತೆಗೆ ಶೇ.50ರಷ್ಟು ಹೆಚ್ಚಿನ ಬೆಲೆಗೆ ಗೊಬ್ಬರಗಳನ್ನು ಮಾರಾಟ ಮಾಡಲಾಗುತ್ತಿದೆ. ಬೇರೆ ದೇಶಗಳಲ್ಲಿ ಯುದ್ಧ ನಡೆಯುತ್ತಿದೆ ಎಂಬ ನೆಪ ಹೇಳಿ, ಪೆಟ್ರೋಲ್ ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಮೂಲಕ ಜನರನ್ನು ದಿನನಿತ್ಯ ಮಾಡಲಾಗುತ್ತಿದೆಯೋ ಅದೇ ರೀತಿ ರಸಗೊಬ್ಬರದಲ್ಲಿ ರೈತರಿಂದ ಲೂಟಿ ಮಾಡಲಾಗುತ್ತಿದೆ' ಎಂದು ವಾಗ್ದಾಳಿ ನಡೆಸಿದರು.
‘ಖಾಸಗಿ ಸಂಸ್ಥೆಗಳು ಹಾಗೂ ಬೇರೆ ಸಂಸ್ಥೆಗಳ ಮೂಲಕ ಈ ಸರಕಾರ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆ. ಈ ವಿಚಾರವಾಗಿ ಇದುವರೆಗೂ ಸರಕಾರ ಯಾರೊಬ್ಬರನ್ನು ವಿಚಾರಣೆ ನಡೆಸಿ ಬಂಧಿಸಿಲ್ಲ. ನಾನು ಹಲವು ರೈತರ ಜೊತೆ ಮಾತನಾಡಿ, ನನ್ನದೇ ಆದ ತನಿಖೆ ಮಾಡಿದ ನಂತರ, ಇಲ್ಲಿಗೆ ಬಂದು ಈ ವಿಚಾರವಾಗಿ ಮಾತನಾಡುತ್ತಿದ್ದೇನೆ. ಐದು ಕೆ.ಜಿ. ರಸಗೊಬ್ಬರಕ್ಕೆ 1,100ರೂ. ಬೆಲೆ ಇದ್ದರೆ, ಅದನ್ನು 1,700ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಗಾರು ಪ್ರಾರಂಭವಾಗುತ್ತಿದ್ದು ಈ ಸಮಯದಲ್ಲಿ ಸರಕಾರದ ಈ ನಿರ್ಧಾರ ರೈತರಿಗೆ ಮಾರಕ. ಬಿಜೆಪಿ ಸರಕಾರಕ್ಕೆ ರೈತರ ಮೇಲೆ ಇಷ್ಟೊಂದು ದ್ವೇಷ ಏಕೆ?' ಎಂದು ಅವರು ಪ್ರಶ್ನಿಸಿದರು.
‘ಕೇವಲ ಬಾಯಿ ಮಾತಲ್ಲಿ ರೈತರನ್ನು ಅನ್ನದಾತ ಎಂದು ಕರೆದರೆ ಸಾಲದು. ಈ ಸರಕಾರ ರೈತ ಸಂಘಟನೆಗಳ ಬಾಯಿಮುಚ್ಚಿಸುವ ಪ್ರಯತ್ನ ಮಾಡುತ್ತಿದೆ. ರೈತ ಹೋರಾಟಗಾರ, ರೈತ ಮುಖಂಡರು ಬೆಂಗಳೂರಿಗೆ ಬಂದರೆ ನಿಮ್ಮ ಕಾರ್ಯಕರ್ತರ ಮೂಲಕ ಅವರ ಮೇಲೆ ಹಲ್ಲೆ ಮಾಡಿಸುತ್ತೀರಿ. ರಾಜ್ಯದ ಎಲ್ಲಾ ರೈತ ಮುಖಂಡರು ರೈತರ ಸಮಸ್ಯೆಗಳ ಬಗ್ಗೆ ಪಕ್ಷಾತೀತವಾಗಿ ಹೋರಾಟ ಮಾಡಲು ಸಜ್ಜಾಗಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ನಿಮ್ಮ ನೋವು ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಸದಾ ನಿಮ್ಮ ಜೊತೆ ಇರಲಿದೆ ಎಂದು ನಾನು ಈ ಸಂದರ್ಭದಲ್ಲಿ ಮಾತು ಕೊಡುತ್ತೇನೆ. ದಿಲ್ಲಿ ರೈತರ ಹೋರಾಟ ಬೆಂಬಲಿಸಿ ನಾವು ಬೆಂಗಳೂರಿನಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ್ದೆವು. ಅದಕ್ಕೆ ಬಿಜೆಪಿ ನಮ್ಮ ಮೇಲೆ ಪ್ರಕರಣಗಳನ್ನು ದಾಖಲಿಸಿದೆ. ಸರಕಾರ ಎಷ್ಟೇ ಪ್ರಕರಣ ದಾಖಲಿಸಿದ್ದರು, ನಮ್ಮನ್ನು ಜೈಲಿಗೆ ಹಾಕಿದ್ದರು ನಾವು ಅದನ್ನು ಎದುರಿಸಲು ಸಿದ್ಧವಿದ್ದೇವೆ. ಜನರಿಗಾಗಿ ಎಲ್ಲ ತ್ಯಾಗಕ್ಕೂ ನಾವು ತಯಾರಿದ್ದೇವೆ' ಎಂದು ಅವರು ಗುಡುಗಿದರು.
‘ಪಕ್ಷದ ರಾಜ್ಯಮಟ್ಟದ ಸಂಕಲ್ಪ ಶಿಬಿರವನ್ನು ಈಗಾಗಲೇ ಮಾಡಿದ್ದು ಜೂ.11ರಿಂದ 14ರ ವರೆಗೆ ಜಿಲ್ಲಾಮಟ್ಟದಲ್ಲಿ ಸಂಕಲ್ಪ ಶಿಬಿರವನ್ನು ನಡೆಸಲು ಸೂಚಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಒಂದು ವಾರಗಳ ನಂತರ ಈ ಸಭೆ ನಡೆಸಲು ತಿಳಿಸಲಾಗಿದೆ. ಆಯಾ ಜಿಲ್ಲೆಯ ನಾಯಕರು ಈ ಸಭೆಗೆ ಹೋಗಿ ಅಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿ ಅವರ ಸಲಹೆ ನೀಡಬೇಕೆಂದು ಸೂಚಿಸಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕೆಂದು ನಿರ್ದೇಶನ ನೀಡಲಾಗಿದೆ'
-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ