ಪತಿಗೆ ನಿಂದಿಸಿದ್ದಕ್ಕೆ ಮಹಿಳೆ ಆತ್ಮಹತ್ಯೆ: ಆರೋಪಿ ವಿರುದ್ಧದ ಪ್ರಕರಣ ವಜಾಗೊಳಿಸಲು ಹೈಕೋರ್ಟ್ ನಕಾರ
ಬೆಂಗಳೂರು, ಜೂ.7: ಪತಿಯನ್ನು ಪುಂಡ ಪೋಕರಿ ಎಂದು ನಿಂದಿಸಿ, ಪದೇ ಪದೇ ಕರೆ ಮಾಡಿ ಬೆದರಿಕೆ ಹಾಕುವ ಮೂಲಕ ಮಹಿಳೆಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ರಿಯಲ್ ಎಸ್ಟೇಟ್ ಉದ್ಯಮಿ ವಿರುದ್ಧ ದಾಖಲಿಸಿರುವ ಎಫ್‍ಐಆರ್ ಅನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಯಲಹಂಕ ಠಾಣೆ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‍ಐಆರ್ ರದ್ದುಪಡಿಸುವಂತೆ ಕೋರಿ ಉದ್ಯಮಿ ವಿ.ಶ್ರೀನಿವಾಸರಾಜು ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.
ಬೆಂಗಳೂರಿನ ನ್ಯಾಯಾಂಗ ಬಡಾವಣೆ ನಿವಾಸಿ ಎಚ್.ಎಂ.ವೆಂಕಟೇಶ್ ಎಂಬುವರು ಕೊಡಿಗೆಹಳ್ಳಿ ಸರ್ವೆ ನಂ 101/2 ಸರಕಾರಿ ಜಮೀನನ್ನು ವಿ. ಶ್ರೀನಿವಾಸುರಾಜು ಒತ್ತುವರಿ ಮಾಡಿದ್ದಾರೆ ಎಂದು ಅರೋಪಿಸಿ 2012ರಲ್ಲಿ ಲೋಕಾಯುಕ್ತ ಬಿಬಿಎಂಪಿ ಆಯುಕ್ತರು ಮತ್ತು ಬಿಡಿಎಗೆ ದೂರು ನೀಡಿದ್ದರು. ಈ ವಿಚಾರವಾಗಿ ಶ್ರೀನಿವಾಸರಾಜು ದೂರುದಾರ ವೆಂಕಟೇಶ್ ಪತ್ನಿ ಸುಮನಾ ಅವರಿಗೆ ಪದೇ ಪದೇ ಕರೆ ಮಾಡುತ್ತಿದ್ದರು. ಬಳಿಕ ಒತ್ತುವರಿ ವಿಚಾರವಾಗಿ ಸುದ್ದಿವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದ ಶ್ರೀನಿವಾಸರಾಜು, ವೆಂಕಟೇಶ್ ಅವರನ್ನು ಪುಂಡ ಪೋಕರಿ ಎಂದು ನಿಂದಿಸಿದ್ದರು. ಈ ಮಾತು ಟಿವಿಯಲ್ಲಿ ಪ್ರಸಾರವಾದ ಬಳಿಕ ಸಂಬಂಧಿಕರು ಸುಮನಾಗೆ ಕರೆ ಮಾಡಿ ವಿಚಾರಿಸಿದ್ದರು. ಇದರಿಂದ, ಮನನೊಂದ ಸುಮನಾ 2012ರ ಆ.16ರಂದು ಆತ್ಮಹತ್ಯೆಗೆ ಶರಣಾಗಿದ್ದರು.