ಪರಿಷ್ಕೃತ ಪಠ್ಯದಿಂದ 'ಸಂವಿಧಾನ ಶಿಲ್ಪಿ' ಪದ ತೆಗೆದಿರುವುದು ಖಂಡನೀಯ: ಬಿಜೆಪಿ ಶಾಸಕ ಹರ್ಷವರ್ಧನ್ ಆಕ್ರೋಶ

Update: 2022-06-07 15:33 GMT

ಮೈಸೂರು,ಜೂ.8: ಪರಿಷ್ಕೃತ ಪಠ್ಯದಿಂದ ಸಂವಿಧಾನ ಶಿಲ್ಪಿ ಎಂಬ ಪದವನ್ನು ತೆಗೆದಿರುವುದು ಅತ್ಯಂತ ಖಂಡನೀಯ, ಆ ಪದವನ್ನು ತೆಗೆಯುವ ಅಗತ್ಯವೇನಿತ್ತು ತಿಳಿಯದು, ಇಂತಹ ವಿಚಾರಗಳನ್ನು ನಾವು ಸಹಿಸುವುದಿಲ್ಲ, ಹಾಗೂ  ರಾಜಿಯಾಗುವ ಪ್ರಶ್ನೆಯೂ ಇಲ್ಲ ಎಂದು ನಂಜನಗೂಡು ಕ್ಷೇತ್ರದ ಬಿಜೆಪಿ ಶಾಸಕ ಬಿ.ಹರ್ಷವಧನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅವರು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನಲೆ ನಾನು ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೂ.8 ರ ಬುಧವಾರ ಮೈಸೂರಿಗೆ ಆಗಮಿಸುತ್ತಿದ್ದು, ಅಂದು ರಾಜಕೀಯ ಹಿರಿಯ ಮುತ್ಸದ್ದಿ ಸಂಸದ್ ಸದಸ್ಯರಾದ ವಿ.ಶ್ರೀನಿವಾಸ ಪ್ರಸಾದ್ ಅವರೊಂದಿಗೆ ಭೇಟಿ ಮಾಡಿ ಹಳೆಯ ಪಠ್ಯವನ್ನು ಮುಂದುವರೆಸುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದ್ದಾರೆ.

ನೂತನ ಪಠ್ಯಪರಿಷ್ಕರಣೆ ಮಾಡಿ ಸಂವಿಧಾನ ಶಿಲ್ಪಿ ಎಂಬ ಪದ ತೆಗೆದಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಹಾಗೂ ಮುಂದಿನ ದಿನಗಳಲ್ಲಿ ಮುಜುಗರಕ್ಕೊಳಗಾಗುವ ಇಂತಹ ಪ್ರಕರಣಗಳು ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಸಲ್ಲಿಸಲಾಗುವುದು.ಸಂವಿಧಾನದಲ್ಲಿ ಕಂಡು ಬರುವ ಪ್ರಕಾರ ಸಾಮಾಜಿಕ ಪ್ರಜ್ಞೆ, ರಾಷ್ಟ್ರೀಯತೆಯ ಪರಿಕಲ್ಪನೆ, ನ್ಯಾಯ ಮತ್ತು ಸಮಾನತೆಯ ಆಶಯಗಳಿಗೂ ಅಂಬೇಡ್ಕರ್ ಅವರು ಬರೆದ ನೂರಾರು ಲೇಖನಗಳಿಗೂ  ಆಂತರಿಕ ಸಂಬಂಧವಿದೆ. ಹಾಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ, ಅವರು  ಎಂದೆಂದಿಗೂ ಸಂವಿಧಾನ ಶಿಲ್ಪಿಯೇ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News