ಡ್ರಾಪ್ ಕೊಡುವುದಾಗಿ ಹೇಳಿ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನ; ಗ್ರಾಪಂ ನೌಕರ ಬಂಧನ
ಚಿಕ್ಕಮಗಳೂರು, ಜೂ.7: ಮನೆಗೆ ಡ್ರಾಪ್ ಕೊಡುವುದಾಗಿ ಹೇಳಿ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಬೈಕ್‍ನಲ್ಲಿ ಕೂರಿಸಿಕೊಂಡು ದಾರಿ ಮಧ್ಯೆ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇರೆಗೆ ಗ್ರಾಪಂ ನೌಕರನೊಬ್ಬನನ್ನು ಜಿಲ್ಲೆಯ ಗೋಣಿಬೀಡು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹಂತೂರು ಗ್ರಾಮ ಪಂಚಾಯತ್ ಕಚೇರಿಯ ಅಟೆಂಡರ್ ಹಾಗೂ ಅಂಗಡಿ ಗ್ರಾಮದ ನಿವಾಸಿ ದೇವರಾಜ್ ಬಂಧಿತ ಆರೋಪಿಯಾಗಿದ್ದು, ಈತ ಕಳೆದ ಸೋಮವಾರ ಮೂಡಿಗೆರೆ ಪಟ್ಟಣದಲ್ಲಿರುವ ಕಾಲೇಜೊಂದರ ವಿದ್ಯಾರ್ಥಿನಿಯನ್ನು ಮನೆಗೆ ಡ್ರಾಪ್ ನೀಡುವುದಾಗಿ ಹೇಳಿ ತನ್ನ ಬೈಕ್‍ನಲ್ಲಿ ಕೂರಿಸಿಕೊಂಡು ಅಂಗಡಿ ಗ್ರಾಮದತ್ತ ತೆರಳಿದ್ದ. ಈ ವೇಳೆ ದಾರಿ ಮಧ್ಯೆ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲೇ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ವಿದ್ಯಾರ್ಥಿನಿಯ ಪೋಷಕರು ಗೋಣಿಬೀಡು ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಆರೋಪಿ ದೇವರಾಜ್ ತಲೆ ಮರೆಸಿಕೊಂಡಿದ್ದ. ಆದರೆ ಪೊಲೀಸರು ಶೀಘ್ರ ಕಾರ್ಯಚರಣೆ ನಡೆಸಿ ಆರೋಪಿ ದೇವರಾಜ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ದೇವರಾಜ್ ಈ ಹಿಂದೆ ಗ್ರಾಮ ಪಂಚಾಯತ್‍ಗೆ ಕೆಲಸದ ನಿಮಿತ್ತ ಆಗಮಿಸಿದ್ದ ಯುವತಿಯೊಬ್ಬಳ ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ಆರೋಪಿ 2 ವರ್ಷಗಳ ಕಾಲ ಸೆರೆಮನೆಯಲ್ಲಿದ್ದ ಎನ್ನಲಾಗಿದೆ. ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿನಿಂದ ಬಂದಿದ್ದ ಆರೋಪಿ ಮತ್ತೆ ಹಂತೂರು ಗ್ರಾಪಂ ಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಎಂದು ತಿಳಿದು ಬಂದಿದೆ.
ಈ ಪ್ರಕರಣಗಳಲ್ಲದೇ ಆರೋಪಿ ಇನ್ನೂ ಹಲವು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈತನಿಗೆ ಕಠಿಣ ಸಜೆ ಕೊಡಿಸಬೇಕೆಂದು ಗೋಣಿಬೀಡು ನಾಗರಿಕರು ಗೋಣಿಬೀಡು ಠಾಣಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.