×
Ad

ಪರಿಷ್ಕರಣೆ ನೆಪದಲ್ಲಿ ಬಿಜೆಪಿ ಸರಕಾರದಿಂದ ಸಾಂಸ್ಕøತಿಕ ಅತ್ಯಾಚಾರ: ಡಿ.ಕೆ.ಶಿವಕುಮಾರ್ ಆರೋಪ

Update: 2022-06-07 23:38 IST

ಬೆಂಗಳೂರು, ಜೂ. 7: ‘ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ರಾಜ್ಯ ಬಿಜೆಪಿ ಸರಕಾರವು ಸಾಂಸ್ಕೃತಿಕ ಅತ್ಯಾಚಾರ ನಡೆಸುತ್ತಿದ್ದು, ಪರಿಸ್ಕೃತ ಪುಸ್ತಕಗಳನ್ನು ಕಸದ ಬುಟ್ಟಿಗೆ ಎಸೆಯಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ಧ್ವನಿ ಎತ್ತಿರುವ ಮಠಾಧೀಶರು, ಸಾಹಿತಿಗಳು, ಚಿಂತಕರು, ವಿವಿಧ ಸಂಘಟನೆಗಳ ಹೋರಾಟವನ್ನು ಬೆಂಬಲಿಸಿ ಇದೇ ಜೂ.9ರ ಬೆಳಗ್ಗೆ 10 ಗಂಟೆಗೆ ವಿಧಾನಸೌಧ ಆವರಣದಲ್ಲಿ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಪಕ್ಷದಿಂದ ಧರಣಿ ನಡೆಸುವುದು' ಎಂದು ಪ್ರಕಟಿಸಿದರು.

‘ಜ್ಞಾನಪೀಠ ಪ್ರಶಸ್ತಿ ಪಡೆದ ರಾಷ್ಟ್ರಕವಿ ಕುವೆಂಪು ಅವರು ಪ್ರಪಂಚಕ್ಕೆ ವಿಶ್ವಮಾನವ ಸಂದೇಶವನ್ನು ಸಾರಿ, ಈ ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದಿದ್ದಾರೆ. ಆದರೆ, ಬಿಜೆಪಿ ಸರಕಾರ ಮಕ್ಕಳ ಪಠ್ಯಪುಸ್ತಕದಲ್ಲಿ ಕುವೆಂಪು ಅವರು ಸೇರಿದಂತೆ ಅನೇಕ ಮಹಾನುಭಾವರ ವಿಚಾರಗಳನ್ನು ತಿರುಚಿ ಸಾಂಸ್ಕೃತಿಕ ಅತ್ಯಾಚಾರ ನಡೆಸುತ್ತಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜಕೀಯ ನಾಯಕರನ್ನು ಹೊರತುಪಡಿಸಿ ಎಲ್ಲ ಮಠಗಳ ಪೀಠಾಧ್ಯಕ್ಷರು, ಸಾಹಿತಿಗಳು, ಸಂಘಟನೆಗಳು ಒಟ್ಟಾಗಿ ಪಠ್ಯ ಪರಿಷ್ಕರಣೆಯಲ್ಲಿ ಸರಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ' ಎಂದು ಟೀಕಿಸಿದರು.

‘ಸರಕಾರದ ನಿಲುವಿನ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಿದ್ದಾರೆ. ಸಮಾಜವನ್ನು ಶಾಂತಿಯ ತೋಟವಾಗಿ ಕಾಪಾಡಲು ಪ್ರತಿಭಟನೆ ಮಾಡುತ್ತಿರುವ ಸಿದ್ದಗಂಗಾ ಶ್ರೀಗಳು, ಮುರುಘಾ ಶ್ರೀಗಳು, ಆದಿಚುಂಚನಗಿರಿ ಶ್ರೀಗಳು, ಪಂಚಮಸಾಲಿ ಪೀಠದ ಶ್ರೀಗಳು ಹಾಗೂ ಸಾಣೆಹಳ್ಳಿ ಶ್ರೀಗಳು ಸೇರಿದಂತೆ ಎಲ್ಲರ ಪಾದಗಳಿಗೆ ನಮಸ್ಕರಿಸುತ್ತಾ ಕಾಂಗ್ರೆಸ್ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಸಮಾಜದ ಹಿರಿಯರು, ಸಾಹಿತಿಗಳಿಗೆ ಯಾವುದೇ ರಾಜಕೀಯ ಅಗತ್ಯವಿಲ್ಲ. ಸರಕಾರ ಚಿಕ್ಕ ಮಕ್ಕಳ ತಲೆಗೆ ಇತಿಹಾಸ ಬದಲಾವಣೆ ಮಾಡಿ ತಮ್ಮ ಅಜೆಂಡಾ ತುಂಬುವ ಪ್ರಯತ್ನ ಮಾಡುತ್ತಿದೆ' ಎಂದು ಶಿವಕುಮಾರ್ ದೂರಿದರು.

‘ಅಂಬೇಡ್ಕರ್ ಅವರು ‘ಸಂವಿಧಾನ ಶಿಲ್ಪಿ' ಎಂಬುದು, ಅವರ ತಂದೆ, ಹುಟ್ಟಿದ ಸ್ಥಳ ಸೇರಿದಂತೆ ಅವರ ಅನೇಕ ವಿಚಾರಗಳನ್ನು ಪಠ್ಯಕ್ರಮದಿಂದ ತೆಗೆದುಹಾಕಲಾಗಿದೆ. ಇಂತಹ ಮಹಾನ್ ಚೇತನಕ್ಕೆ ಇದಕ್ಕಿಂತ ದೊಡ್ಡ ಅಪಮಾನ ಬೇರೆ ಇದೆಯೇ? ನಾವೆಲ್ಲರೂ ಅವರು ಕೊಟ್ಟಿರುವ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ರಾಜ್ಯ ಹಾಗೂ ದೇಶವನ್ನು ನಡೆಸುತ್ತಿದ್ದೇವೆ. ಇದು ಕೇವಲ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಅಲ್ಲ. ದೇಶಕ್ಕೆ ಮಾಡಿರುವ ದೊಡ್ಡ ಅಪಮಾನ. ಅಂಬೇಡ್ಕರ್ ಕೇವಲ ಒಂದು ಸಮುದಾಯದ ಆಸ್ತಿಯಲ್ಲ, ಅವರು ಇಡೀ ದೇಶದ ಆಸ್ತಿ. ಅವರು ಕೊಟ್ಟ ಸಂವಿಧಾನವನ್ನು ವಿಶ್ವದ ಅನೇಕ ರಾಷ್ಟ್ರಗಳು ಒಪ್ಪಿ ಗೌರವಿಸಿವೆ' ಎಂದು ಅವರು ತಿಳಿಸಿದರು.

ಗಾಂಧೀಜಿಗೆ ರಾಷ್ಟ್ರಪಿತ ಎಂಬ ಗೌರವವನ್ನು ಹೇಗೆ ತಪ್ಪಿಸಲು ಸಾಧ್ಯವಿಲ್ಲವೋ ಅದೇ ರೀತಿ ಅಂಬೇಡ್ಕರ್ ಅವರಿಗೆ ಸಂವಿಧಾನ ಶಿಲ್ಪಿ ಎಂಬ ಗೌರವವನ್ನು ತಪ್ಪಿಸಲು ಸಾಧ್ಯವಿಲ್ಲ. ಬಸವಣ್ಣನವರ ವಚನಗಳನ್ನು ನಾವು ತಿರುಚಲು ಸಾಧ್ಯವೇ? 9ನೆ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಬಸವಣ್ಣನವರ ಜನಿವಾರ ವಿಚಾರವನ್ನು ಪ್ರಸ್ತಾಪಿಸಿದೆ. ಅದು ಪವಿತ್ರವಾಗಿದ್ದು ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತಲು ಪ್ರಯತ್ನಿಸುತ್ತಿರುವುದು ಖಂಡನೀಯ. ಬಸವಣ್ಣನವರು ಕಾಯಕವೇ ಕೈಲಾಸ, ನುಡಿದಂತೆ ನಡೆಯಬೇಕೆಂಬ ಸಂದೇಶವನ್ನು ತಮ್ಮ ವಚನಗಳಲ್ಲಿ ಸಾರಿದ್ದು, ನಾವೆಲ್ಲರೂ ಅದನ್ನು ಗೌರವಿಸುತ್ತಾ ಪಾಲಿಸಿಕೊಂಡು ಬಂದಿದ್ದೇವೆ. ಸಿಎಂ ಕಷ್ಟಪಟ್ಟು ಬಸವಣ್ಣನವರ ವಿಚಾರವನ್ನು ಮಾತ್ರ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ. ಅವರು ಕೇವಲ ಒಂದು ಪಕ್ಷದ ಮುಖ್ಯಮಂತ್ರಿಯಾಗಿಲ್ಲ. ಇಡೀ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ' ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.

‘ಶಿಕ್ಷಣ ನೀತಿ ಎಂಬುದು ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಆರೆಸ್ಸೆಸ್ ಚಿಂತನೆಗಳನ್ನು ನೀವೇ ಇಟ್ಟುಕೊಳ್ಳಿ, ನಾವು ಬೇಡ ಎನ್ನುವುದಿಲ್ಲ. ಆದರೆ ಅದು ರಾಷ್ಟ್ರೀಯ ಶಿಕ್ಷಣ ನೀತಿ ಆಗಲು ಸಾಧ್ಯವಿಲ್ಲ. ಈ ಸರಕಾರ ಲಿಂಗಾಯತ ಧರ್ಮದ ವಿಚಾರವನ್ನೇ ತಿರುಚಲು ಮುಂದಾಗಿದೆ. ಕುವೆಂಪು ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮೊದಲ ಕವಿ. ಅವರ ಬಗ್ಗೆ ಲಘುವಾಗಿ ಮಾತನಾಡುವುದು, ಪಠ್ಯದಲ್ಲಿ ಅವರನ್ನು ಲಘುವಾಗಿ ಕಾಣುವುದು, ಅವರ ಭಾವಚಿತ್ರವನ್ನು ಪಠ್ಯಪುಸ್ತಕದಿಂದ ತೆಗೆದು ಅವರಿಗೆ ಈ ಸರಕಾರ ಅಪಮಾನ ಮಾಡಿದೆ. ಬಿಜೆಪಿಯವರ ಕೆಟ್ಟ ಮನಸ್ಥಿತಿ ಸರಿಯಲ್ಲ' ಎಂದು ವಾಗ್ದಾಳಿ ನಡೆಸಿದರು.

‘ಧರ್ಮ ಯಾವುದಾದರೂ ತತ್ವ ಒಂದೇ ನಾಮ. ನೂರಾದರು ದೈವ ಒಂದೇ ಎಂಬ ತತ್ವವನ್ನು ಪಾಲಿಸುತ್ತಿವೆ. ಈ ಎಲ್ಲ ಮಹನೀಯರ ವಿಚಾರಗಳು ಪಠ್ಯದಲ್ಲಿ ಇರುವುದರಿಂದ ಈ ಸರಕಾರಕ್ಕೆ ಏನು ತೊಂದರೆ ಆಗುತ್ತಿದೆ? ಧಾರ್ಮಿಕ ಚಳುವಳಿ ಮಾಡಿದ ನಾರಾಯಣ ಗುರುಗಳು, ಕಾರಂತರು ಹಾಗೂ ಪೆರಿಯಾರ್ ಅವರ ವಿಚಾರಗಳಿಗೆ ಈ ಸರಕಾರ ಕತ್ತರಿ ಹಾಕಿದೆ. ಸಾವಿತ್ರಿಬಾಯಿ ಫುಲೆ, ಭಕ್ತಿ ಪಂಥ ಹಾಗೂ ಸೂಫಿ ಪಂಥಗಳ ಪಠ್ಯ ಕೈಬಿಟ್ಟಿದ್ದು, ಗೌತಮ ಬುದ್ಧ ಹಾಗೂ ಮಹಾವೀರ ಜೈನರ ಬಗ್ಗೆ ಏಕವಚನದಲ್ಲಿ ಪ್ರಸ್ತಾಪ ಮಾಡಲಾಗಿದೆ. ಹೀಗೆ ಅನೇಕ ವಿಚಾರವಾಗಿ ಈ ಸರಕಾರ ಎಲ್ಲ ವರ್ಗದವರಿಗೆ ಅಪಮಾನ ಮಾಡಿದೆ. ಸರಕಾರದ ಈ ನಿಲುವಿನ ವಿರುದ್ಧ ಯಾರೆಲ್ಲಾ ಧ್ವನಿ ಎತ್ತುತ್ತಿದ್ದಾರೆ ಅವರಿಗೆ ಬೆಂಬಲ ಸೂಚಿಸುವುದು ನಮ್ಮ ಕರ್ತವ್ಯ' ಎಂದು ಅವರು ತಿಳಿಸಿದರು.

‘ನಾವು ಬಿಜೆಪಿಯ ನಿಜವಾದ ಮುಖ ಹಾಗೂ ಮನಸ್ಥಿತಿ ವಿರುದ್ಧ ಹೊರಾಡುತ್ತೇವೆ. ಸಚಿವರು ರಾಜೀನಾಮೆ ನೀಡುತ್ತಾರೋ, ಬಿಡುತ್ತಾರೋ ನಮಗೆ ಬೇಡ. ಅವರು ಪರಿಷ್ಕರಣೆ ಮಾಡಿರುವ ಪಠ್ಯಪುಸ್ತಕವನ್ನು ಕಸದ ಬುಟ್ಟಿಗೆ ಎಸೆದು ಹಳೆ ಪಠ್ಯವನ್ನು ಮಕ್ಕಳಿಗೆ ನೀಡಿ ಬೋಧಿಸಬೇಕು. ರೋಹಿತ್ ಚಕ್ರತೀರ್ಥಗೆ ಪೊಲೀಸ್ ಭದ್ರತೆಯನ್ನಾದರೂ ನೀಡಲಿ, ಪ್ಯಾರಾ ಮಿಲಿಟರಿ ಭದ್ರತೆಯನ್ನಾದರೂ ನೀಡಲಿ. ನಾವು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಹೋರಾಟ ಸರಕಾರದ ಮನಸ್ಥಿತಿಯ ವಿರುದ್ಧ. ಡಬಲ್ ಇಂಜಿನ್ ಸರಕಾರ ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು ಕೇವಲ ಭಾವನಾತ್ಮಕ ವಿಚಾರ ತೆಗೆದು ಜನರ ಗಮನ ಬೇರೆಡೆ ಸೆಳೆಯಲಾಗುತ್ತಿದೆ' 

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

‘ರಾಜ್ಯಸಭೆ ಚುನಾವಣೆಯಲ್ಲಿ ಎಲ್ಲ್ಲ ಪಕ್ಷದ ನಾಯಕರುಗಳು ಆತ್ಮಸಾಕ್ಷಿ ಮತವನ್ನು ಕಾಂಗ್ರೆಸ್ ಪಕ್ಷದ ಎರಡನೆ ಅಭ್ಯರ್ಥಿಗೆ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಅವರಿಗೆ ಬೇರೆ ಸಂದರ್ಭಗಳಲ್ಲಿ ಸಾಕಷ್ಟು ಸಹಾಯ ಮಾಡಿದ್ದೇವೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ನಿಮ್ಮ ಮತವನ್ನು ನೀಡಬೇಕು. ಯಾರೆಲ್ಲ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿದ್ದೀರಾ ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News