ಹತ್ತು ದಿನಗಳೊಳಗೆ ಪಠ್ಯ ಬದಲಾವಣೆಗೆ ಪಟ್ಟು ಹಿಡಿದ ಲಿಂಗಾಯತ ಮಠಾಧೀಶರು: ಸರ್ಕಾರಕ್ಕೆ ತೀವ್ರ ಪ್ರತಿಭಟನೆಯ ಎಚ್ಚರಿಕೆ

Update: 2022-06-08 07:39 GMT
Photo: facebook.com

ಧಾರವಾಡ: ಇಲ್ಲಿನ ಕಲ್ಯಾಣ ನಗರದಲ್ಲಿರುವ ಶ್ರೀಸಿದ್ದರಾಮೇಶ್ವರ ಮಾರ್ಗದರ್ಶಿಯಲ್ಲಿ ಮಂಗಳವಾರ ಸಭೆ ನಡೆಸಿದ ಲಿಂಗಾಯತ ಮಠದ ಸ್ವಾಮಿಜಿಗಳು ಬಸವಣ್ಣನವರ ಬಗ್ಗೆ ಪಠ್ಯ ಪುಸ್ತಕದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಐದು ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ 21 ಲಿಂಗಾಯತ ಮಠಾಧೀಶರು ಭಾಗಿಯಾಗಿದ್ದು, ಪ್ರತಿಭಟನೆಯ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಿದ್ದಾರೆ.

ಪಠ್ಯಪುಸ್ತಕ ಮರು-ಪರಿಷ್ಕರಣೆ ವಿವಾದ ಸರ್ಕಾರಕ್ಕೆ ಈಗ ನುಂಗಲಾರದ ತುಪ್ಪವಾಗುತ್ತಿದೆ. ಆರೆಸ್ಸೆಸ್ ಸಂಸ್ಥಾಪಕ ಹೆಡ್ಗೆವಾರ್‌ ಭಾಷಣವನ್ನು ಪಠ್ಯದಲ್ಲಿ ಸೇರಿಸಿದ ನಂತರ ಈ ವಿವಾದವು ಆರಂಭಗೊಂಡಿದ್ದು, ಇದೀಗ ಒಂದೊಂದು ಪಠ್ಯ ಪುಸ್ತಕದಲ್ಲೂ ವಿವಾದಾತ್ಮಕ ಅಂಶಗಳಿರುವುದು ಬೆಳಕಿಗೆ ಬರುತ್ತಿವೆ. ಪಠ್ಯದಲ್ಲಿ ಅಂಬೇಡ್ಕರ್‌, ಬಸವಣ್ಣ, ಕುವೆಂಪು ಮೊದಲಾದವರ ವಿಷಯಗಳಲ್ಲಿ ಲೋಪದೋಷಗಳು ನಡೆದಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ. ಬಸವಣ್ಣ ಮತ್ತು ಕುವೆಂಪು ವಿಚಾರಕ್ಕೆ ಸಂಬಂಧಿಸಿದಂತೆ ಒಕ್ಕಲಿಗ ಮತ್ತು ಲಿಂಗಾಯತ ಸ್ವಾಮಿಗಳು ಅಸಮಾಧಾನ ಹೊರ ಹಾಕಿದ್ದರು. ಅದರಲ್ಲೂ, ನಿರ್ಮಲಾನಂದನಾಥ ಸ್ವಾಮೀಜಿಗಳ ಅಸಮಾಧಾನ ಹೋಗಲಾಡಿಸಲು ಸರ್ಕಾರ ಸಚಿವರನ್ನೇ ಮಠಕ್ಕೆ ಕಳಿಸಿತ್ತು. ಇದೀಗ, ಲಿಂಗಾಯತ ಸ್ವಾಮೀಜಿಗಳೂ ಹೋರಾಟದ ಕಣಕ್ಕಿಳಿದಿರುವುದು ಪಠ್ಯ ಮರು-ಪರಿಷ್ಕರಣೆ ವಿರೋಧಿ ಹೋರಾಟಕ್ಕೆ ಹೆಚ್ಚಿನ ಬಲ ಬಂದಂತಾಗಿದೆ.

ಸಭೆಯ ಬಳಿಕ ಮಾತನಾಡಿದ ಸಾಣೆಹಳ್ಳಿ ತರಳುಬಾಳು ಮಹಾಸಂಸ್ಥಾನದ ಡಾ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, “ಸಮಾಜ ವಿಜ್ಞಾನ ಭಾಗ-1ರ 9ನೇ ತರಗತಿ ಪಠ್ಯಪುಸ್ತಕವನ್ನು ಹತ್ತು ದಿನಗಳ ಒಳಗೆ ಬದಲಿಸಲು ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ” ಸರ್ಕಾರಕ್ಕೆ ಎಚ್ಚರಿಸಿದ್ದಾರೆ. 

"ಒಂಭತ್ತನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರ ಪಠ್ಯದಲ್ಲಿ ಹಲವು ಲೋಪದೋಷಗಳನ್ನು ಗುರುತಿಸಿದ್ದೇವೆ. ವೈದಿಕ ಪರಂಪರೆಯನ್ನು ಪ್ರತಿಪಾದಿಸುವ ಕೆಲಸವನ್ನು ವ್ಯವಸ್ಥಿತವಾಗಿ ಈ ಪಠ್ಯದಲ್ಲಿ ನಡೆಸಲಾಗಿದೆ. ವೈದಿಕ ಪರಂಪರೆಯನ್ನು ಧಿಕ್ಕರಿಸಿದ್ದ ಬಸವಣ್ಣನವರಿಗೆ ಯಾವುದೇ ಶೈವ ಗುರುಗಳು ದೀಕ್ಷೆ ಕೊಟ್ಟಿಲ್ಲ. ಆದರೆ ಪುಸ್ತಕದಲ್ಲಿ ಮಾತ್ರ ಶೈವ ಗುರುಗಳು ದೀಕ್ಷೆ ಕೊಟ್ಟರು ಎಂದು ಉಲ್ಲೇಖಿಸಲಾಗಿದೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗೆ ಮನವಿ ಕೊಟ್ಟಿದ್ದು, ಬಸವೇಶ್ವರರ ಪಠ್ಯದಲ್ಲಿರುವ ದೋಷಗಳನ್ನು ಸರಿಪಡಿಸುವುದಾಗಿ ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇವತ್ತು ಸಮಗ್ರವಾಗಿ ಚರ್ಚೆ ಮಾಡಿದ್ದು, ಮುಂದೆ ಪಠ್ಯದಲ್ಲಿ ಎಲ್ಲಿಯೂ ಕೂಡ ಬಸವ ತತ್ವಕ್ಕೆ ವಿರುದ್ಧವಾದದ್ದು ಆಗಬಾರದು. ಬಸವ ತತ್ವವನ್ನು ಸರಳವಾಗಿ ಬಿಂಬಿಸಬೇಕು” ಎಂದು ಪಠ್ಯಪುಸ್ತಕ ಮರು-ಪರಿಷ್ಕರಣೆ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

"ಬಸವಣ್ಣ ಮಾತ್ರವಲ್ಲ, ಕುವೆಂಪು, ಡಾ ಬಿ.ಆರ್.ಅಂಬೇಡ್ಕರ್, ನಾರಾಯಣಗುರು ಸೇರಿದಂತೆ ಎಲ್ಲ ಮಹನೀಯರ ಕುರಿತು ಪಠ್ಯಪುಸ್ತಕದಲ್ಲಿ ಆಗಿರುವ ಲೋಪದೋಷಗಳನ್ನು ಸರ್ಕಾರ ಸರಿ ಮಾಡಬೇಕು ಎಂದು ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. “ಕೆಲವು ಸಾಹಿತಿಗಳು ಈಗಾಗಲೇ ತಮ್ಮ ಪಠ್ಯಗಳನ್ನು ಹಿಂಪಡೆದುಕೊಳ್ಳುತ್ತಿದ್ದಾರೆ. ಆದರೆ ಲೋಪದೋಷ ಸರಿಪಡಿಸಿದರೆ ಅವರು ಮರಳಿ ಕೊಡುವ ವಿಶ್ವಾಸವಿದೆ" ಎಂದು ಅವರು ಹೇಳಿದ್ದಾರೆ. 

ಆನಂದಪುರಂ ಮುರುಘಾಮಠದ ಡಾ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿ, ಹುಬ್ಬಳ್ಳಿಯ ಮೂರು ಸಾವಿರ ಮಠದ ಡಾ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ಬಾಲ್ಕಿ ಹಿರೇಮಠದ ಡಾ ಬಸವಲಿಂಗ ಪಟಾಧ್ಯಕ್ಷರು, ಕೂಡಲಸಂಗಮ ಬಸವಧರ್ಮ ಪೀಠದ ಗಂಗಾ ಮಾತಾಜಿ, ನಿಡಸೋಸಿ ಮಠದ ಡಾ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಶಿರೂರು ಬಸವಲಿಂಗ ಮಹಾಸ್ವಾಮಿ ವಿಜಯಮಹಾಂತತೀರ್ಥ, ಮುಂಡರಗಿಯ ನಿಜಗುಣಪ್ರಭು ಸ್ವಾಮೀಜಿ, ಅಥಣಿಯ ಪ್ರಭುಚೆನ್ನಬಸವ ಸ್ವಾಮೀಜಿ, ಗೋಕಾಕ್‌ನ ಮುರುಘರಾಜೇಂದ್ರ ಸ್ವಾಮೀಜಿ, ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ, ಚೆನ್ನಮ್ಮನ ಕಿತ್ತೂರಿನ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ ಅಲ್ಲಮಪ್ರಭು ಸ್ವಾಮೀಜಿ, ಬೆಂಗಳೂರು ಬಸವಧರ್ಮ ಪೀಠದ ಅಕ್ಕ ನಾಗಲಾಂಬಿಕಾ ಮಾತಾಜಿ, ಕಿತ್ತೂರಿನ ಓಂ ಗುರೂಜಿ, ಹಂದಿಗುಂದಿಯ ಶಿವಾನಂದ ಮಹಾಸ್ವಾಮೀಜಿ, ಇಳಕಲ್‌ನ ಗುರುಮಹಾಂತ ಸ್ವಾಮೀಜಿ, ಲಿಂಗಸುಗೂರಿನ ಸಿದ್ದಲಿಂಗ ಸ್ವಾಮೀಜಿ, ಬಟಕುರ್ಕಿಯ ಬಸವಲಿಂಗ ಸ್ವಾಮೀಜಿ ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News