ಪಿರಿಯಾಪಟ್ಟಣ: ದಲಿತ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯಿಂದ ಮಗಳ ಹತ್ಯೆ
ಪಿರಿಯಾಪಟ್ಟಣ, ಜೂ.7: ತಂದೆಯೇ ಮಗಳನ್ನು ಹತ್ಯೆ ಮಾಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ವರದಿಯಾಗಿದೆ.
ಕಗ್ಗುಂಡಿ ಗ್ರಾಮದ ಸುರೇಶ್ ಮತ್ತು ಬೇಬಿ ದಂಪತಿಯ ಪುತ್ರಿ ಶಾಲಿನಿ (17) ಎಂಬಾಕೆಯೇ ಹತ್ಯೆಯಾದವರು.
ಪಿಯುಸಿ ಓದುತ್ತಿರುವ ಸಂದರ್ಭದಲ್ಲಿ ಪಕ್ಕದ ಗ್ರಾಮದ ದಲಿತ ಯುವಕ ಮಂಜು ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ದ್ವಿತಿಯ ಪಿಯುಸಿ ಪರೀಕ್ಷೆ ಬರೆಯಲು ಹೋದ ಸಂದರ್ಭದಲ್ಲಿ ಯುವತಿಯ ತಂದೆ ಸುರೇಶ್ ಮತ್ತು ಆಕೆಯ ಪ್ರಿಯಕರ ಮಂಜು ನಡುವೆ ಗಲಾಟೆ ನಡೆದಿದೆ. ಗಲಾಟೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಶಾಲಿನಿಯಿಂದ ದೂರು ಕೊಡಿಸಲು ಮುಂದಾದ ಸಂದರ್ಭದಲ್ಲಿ ಉಲ್ಟಾ ಹೊಡೆದ ಶಾಲಿನಿ, ತಂದೆ, ತಾಯಿ ನನಗೆ ತೊಂದರೆ ನೀಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಳು. ಈ ಬಗ್ಗೆ ಸಿಡಿಪಿಒ ಕಚೇರಿಯಲ್ಲಿ ಕೌನ್ಸೆಲಿಂಗ್ ನಡೆಸಿ ತಾನು ತಂದೆ, ತಾಯಿಯೊಂದಿಗೆ ಹೋಗುವುದಿಲ್ಲ ಎಂದು ತಿಳಿಸಿದ್ದಳು. ಇದರಿಂದ ಅಧಿಕಾರಿಗಳು ಬಾಲಕಿಯನ್ನು ಮೈಸೂರಿನ ಬಾಲ ಮಂದಿರಕ್ಕೆ ಸೇರಿಸಿದ್ದರು.
ಮೇ 18ರಂದು ತಂದೆ, ತಾಯಿ ಬಾಲಮಂದಿರಕ್ಕೆ ಹೋಗಿ ಮಗಳ ಮನ ವೊಲಿಸಿ ಮಗಳ ಭವಿಷ್ಯದ ದೃಷ್ಟಿಯಿಂದ ಒಪ್ಪಿಗೆ ಪತ್ರ ಬರೆದುಕೊಟ್ಟು ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ, ಶಾಲಿನಿ ಸಾಮಾಜಿಕ ಜಾಲತಾಣದ ಮೂಲಕ ಯುವಕನಿಗೆ ಮೆಸೆಜ್ ಮಾಡಿ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ. ಜೂ.6ರಂದು ರಾತ್ರಿ ಹೋಗುತ್ತಿದ್ದ ಸಂದರ್ಭದಲ್ಲಿ ತಂದೆ ಸುರೇಶ್ ಮಗಳ ಕತ್ತುಹಿಸುಕಿದ್ದ ಎನ್ನಲಾಗಿದೆ.
ಗಲಾಟೆಯಲ್ಲಿ ಮಗಳು ಸಾವನಪ್ಪಿದ್ದು, ನಂತರ ಯುವತಿಯ ಮೃತದೇಹವನ್ನು ಬೈಕ್ ಮೂಲಕ ಮಂಜು ಮನೆಯ ಬಳಿಗೆ ಸಾಗಿಸಲು ಸಾಧ್ಯವಾಗದೆ ಮನೆಯ ರಸ್ತೆಯಬದಿಯ ಜಮೀನಿನಲ್ಲಿ ತಂದೆ ಮಲಗಿಸಿ ಬಂದಿದ್ದಾಗಿ ಆರೋಪಿ, ತಂದೆ ಸುರೇಶ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಜೂ.7ರ ಬೆಳಗ್ಗೆ 6:30ರ ವೇಳೆಯಲ್ಲಿ ತಂದೆ ಸುರೇಶ್ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಸುರೇಶ್ ಶಾಲಿನಿ ಮಂಜು ಮನೆಗೆ ಮತ್ತು ಬೇಬಿಯನ್ನು ಬಂಧಿಸಿದ್ದಾರೆ. ದಂಪತಿಗೆ ಸಜ್ಜತ್ (15), ಮತ್ತು ನಿತಿನ್ ಗೌಡ (13) ಎಂಬ ಇಬ್ಬರು ಮಕ್ಕಳಿದ್ದು, ದಂಪತಿಯ ಕೃತ್ಯದಿಂದ ಮಕ್ಕಳು ಅನಾಥರಾಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಮೈಸೂರು ಜಿಲ್ಲಾ ಎಸ್ಪಿ ಆರ್.ಚೇತನ್, ಅಡಿಷನಲ್ ರವಿಪ್ರಸಾದ್, ಸರ್ಕಲ್ ಇನ್‌ಸ್ಪೆಕ್ಟರ್ ಜಗದೀಶ್ ಮತ್ತು ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.