×
Ad

40% ಸರ್ಕಾರದಲ್ಲಿ ರಸ್ತೆಗಳು ಶೇ.40ರಷ್ಟು ಕೂಡಾ ಸರಿಯಾಗಿರುತ್ತವೆ ಎಂದು ನಿರೀಕ್ಷಿಸಲಾಗದು: ಸಿದ್ದರಾಮಯ್ಯ

Update: 2022-06-08 18:43 IST

ಬೆಂಗಳೂರು: ರಾಜ್ಯ ರಾಜಧಾನಿಯ ರಸ್ತೆ ಗುಂಡಿಗಳಿಂದಾಗಿ ವಾಹನ ಸವಾರರು ನಿತ್ಯ ನರಕ ಅನುಭವಿಸುವಂತಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಿಬಿಎಂಪಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿದೆ. 

ಟ್ವಿಟರ್ ನಲ್ಲಿ ಶ್ರೀ  ರಾಮ್‌ ಬಿ.ಎನ್‌ ಎಂಬುವರು ಪೋಸ್ಟ್ ಮಾಡಿರುವ ಗುಂಡಿಗಳಿಂದ ತುಂಬಿರುವ ರಸ್ತೆಯ ವಿಡಿಯೊವನ್ನು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ  ಹಲವರು ಹಂಚಿಕೊಂಡಿದ್ದು, ಸರಕಾರ, ರಾಜಕಾರಣಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ರಸ್ತೆಯಲ್ಲಿ ಗುಂಡಿಗಳೇ? ಅಥವಾ ಗುಂಡಿಗಳ ಮಧ್ಯೆ ರಸ್ತೆಯೇ? ಭಾರತದ ಐಟಿ ರಾಜಧಾನಿಗೆ ಸುಸ್ವಾಗತ. ಬೆಂಗಳೂರು-ಮೈಸೂರು ರಸ್ತೆ ನೈಸ್ ರಸ್ತೆ ಜಂಕ್ಷನ್ ಬಳಿ ಇರುವ ರಸ್ತೆ ಗುಂಡಿಗಳಿಂದಾಗಿ ವಾಹನ ಸವಾರರು ಈ ರಸ್ತೆಯನ್ನು ಬಳಸಲು ಪರದಾಡುತ್ತಿದ್ದಾರೆ' ಎಂದು  ಶ್ರೀ  ರಾಮ್‌ ಬಿ.ಎನ್‌ ಟ್ವೀಟ್ ಮಾಡಿದ್ದರು. 

''ಈ 40% ಸರ್ಕಾರದಲ್ಲಿ ರಸ್ತೆಗಳು ಶೇ.40ರಷ್ಟು ಸರಿಯಾಗಿರುತ್ತವೆ ಎಂದು ನಾವು ನಿರೀಕ್ಷಿಸಲಾಗುವುದಿಲ್ಲ. ಬಿಜೆಪಿ ಬೆಂಗಳೂರಿನ ಬ್ರ್ಯಾಂಡ್ ಅನ್ನು ಹಾನಿ ಮಾಡಲು ನಿರ್ಧರಿಸಿದೆ ಮತ್ತು ಜನರು ಬಿಜೆಪಿಯನ್ನು ತಿರಸ್ಕರಿಸಬೇಕಾದ ಸಮಯ ಇದು. ಬ್ರ್ಯಾಂಡ್‌ ಬೆಂಗಳೂರು ಅಪಾಯದಲ್ಲಿದೆ''  ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ. 

ಇನ್ನು ಅದೇ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು 'ಇದು ಆಘಾತಕಾರಿ ಮತ್ತು ನಾಚಿಕೆಗೇಡು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

''ವಿವಿಧ ರೀತಿಯಲ್ಲಿ ದಂಡ ವಿಧಿಸಿ ಇಷ್ಟೆಲ್ಲಾ ಕಿತ್ತು ತಿಂದ ಮೇಲೆ ನಮಗೆ ಕನಿಷ್ಠ ಮೂಲಭೂತ ಸೌಲಭ್ಯ ಕೊಡದ ಆಳುವವರ ಮೇಲೆ ನಾವು ಯಾವ ದಂಡ ವಿಧಿಸಬೇಕು  ?? ''ವಾಹನದ ಮೇಲೆ ಡಿಸೈನ್ ಡಿಸೈನ್ ಟ್ಯಾಕ್ಸ್, ಪೆಟ್ರೋಲ್-ಡಿಸೇಲ್ ಮೇಲಂತೂ ಮೂರುಪಟ್ಟು ಟ್ಯಾಕ್ಸ್''  ಎಂದು ಗೀತ ರಚನೆಕಾರ ಕವಿರಾಜ್ ಮಂಗಳವಾರ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News