×
Ad

ದಲಿತರನ್ನು ಇನ್ನೂ ಏಕೆ ಸರಸಂಘಚಾಲಕರನ್ನಾಗಿ ನೇಮಿಸಿಲ್ಲ: ವಿ.ಎಸ್.ಉಗ್ರಪ್ಪ ಪ್ರಶ್ನೆ

Update: 2022-06-08 19:25 IST

ಬೆಂಗಳೂರು, ಜೂ. 8: ‘ರಾಜ್ಯ ಹಾಗೂ ದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ದ 56 ಸಾವಿರ ಶಾಖೆಗಳು ಇವೆ. ಆರೆಸ್ಸೆಸ್ ಬೆಂಬಲಿತ 43 ಸಂಘಟನೆಗಳಿವೆ. ರಾಜ್ಯದಲ್ಲಿ 126 ಮಂದಿ ಆರೆಸ್ಸೆಸ್ ಪ್ರಮುಖರಿದ್ದಾರೆ. ಆದರೆ, ಇವರಲ್ಲಿ ಒಕ್ಕಲಿಗರು ಎಷ್ಟು, ಹಿಂದುಳಿದ ವರ್ಗದ ಪ್ರಮುಖರು ಎಷ್ಟು ಮಂದಿ ಇದ್ದಾರೆ? ದಲಿತರನ್ನ ಏಕೆ ಸರಸಂಘಚಾಲಕರನ್ನಾಗಿ ನೇಮಿಸಿಲ್ಲ?' ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಖಾರವಾಗಿ ಪ್ರಶ್ನಿಸಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನ ಕೇಶವ ಕೃಪ, ನಾಗಪುರದ ಆರೆಸ್ಸೆಸ್ ಕೇಂದ್ರ ಕಚೇರಿ ಇದೆ. ಆರೆಸ್ಸೆಸ್ ಶಾಖೆಗಳಲ್ಲಿ ಏಕೆ ‘ಒಂದೇ ಮಾತರಂ' ಗೀತೆ ಮಾತ್ರ ಹಾಡ್ತೀದ್ದೀರಿ? ಅಲ್ಲಿ ‘ಜನ ಗಣ ಮನ' ಎಂದಾದರೂ ಹಾಡಿದ್ದೀರಾ? ಆರೆಸ್ಸೆಸ್ ಕಚೇರಿಗಳಲ್ಲಿ ಕೇವಲ ಹೆಡಗೆವಾರ್, ಗೋಲ್ವಾಳ್ಕರ್ ಫೋಟೋ ಮಾತ್ರ ಏಕೆ?' ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಿನ್ನೆ ಪರಿಷತ್ ಸದಸ್ಯ ನಾರಾಯಣಸ್ವಾಮಿ ಬಚ್ಚಲು ಮನೆಯಲ್ಲಿದ್ದ ಚಡ್ಡಿಯನ್ನು ತಲೆಯ ಮೇಲೆ ಹೊತ್ತುಕೊಂಡು ಪ್ರತಿಭಟನೆಗೆ ಬಂದಿದ್ದಾರೆ. ಆರೆಸ್ಸೆಸ್‍ನವರು ಅವರ ತಲೆ ಮೇಲೆ ಚಡ್ಡಿ ಹೊರಿಸಿದ್ದಾರೆ. ಆರೆಸ್ಸೆಸ್ ಇನ್ನೂ ಶ್ರೇಣೀಕೃತ ವ್ಯವಸ್ಥೆಯಲ್ಲಿದೆ ಎಂಬುದರ ಸಂಕೇತ ಇದು. ಆದರೆ, ಅದೇ ಚಡ್ಡಿಯನ್ನ ಬಿಜೆಪಿಯ ಬಿ.ಎಲ್.ಸಂತೋಷ್ ಹೊರಲಿಲ್ಲ. ಆ ಮೂಲಕ ದಲಿತ ನಾಯಕನ ಅವಹೇಳನ ಮಾಡಿದ್ದಾರೆ' ಎಂದು ಉಗ್ರಪ್ಪ ವಾಗ್ದಾಳಿ ನಡೆಸಿದರು.

‘ಆರೆಸ್ಸೆಸ್ ಸಿದ್ಧಾಂತ ವಿರೋಧಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ‘ಚಡ್ಡಿ' ಸುಡಲು ಕರೆ ನೀಡಿದ್ದನ್ನು ಪ್ರತಿಭಟಿಸಿ ಬಿಜೆಪಿ ವಿಕೃತ ಭಾವನೆಯಿಂದ ‘ಚಡ್ಡಿ' ಕಳುಹಿಸಿದ್ದಾರೆ. ಅದು ದಲಿತ ನಾಯಕನ ತಲೆಯ ಮೇಲೆ ಹೊರಿಸಿ ಕಳಿಸಿದ್ದಾರೆ. ಹಾಗಾಗಿ ನಾವು ಪ್ರಧಾನಿ ಮೋದಿಯವರಿಗೆ ‘ಚಡ್ಡಿ' ಕಳುಹಿಸುತ್ತೇವೆ' ಎಂದು ಉಗ್ರಪ್ಪ ಎಚ್ಚರಿಕೆ ನೀಡಿದರು.

ನಮ್ಮ ಅಭ್ಯರ್ಥಿ ಬೆಂಬಲಿಸಲಿ: ‘ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂ.10ಕ್ಕೆ ಚುನಾವಣೆ ನಡೆಸಲಿದ್ದು, ನಮ್ಮ ಪಕ್ಷದ ಎರಡನೆ ಅಭ್ಯರ್ಥಿಗೆ ಜೆಡಿಎಸ್ ಬೆಂಬಲಿಸಲಿ. ಈ ಹಿಂದೆ ದೇವೇಗೌಡ ಅವರನ್ನು ನಮ್ಮ ಪಕ್ಷ ಬೆಂಬಲಿಸಿತ್ತು. ‘ಜಾತ್ಯತೀತ' ವಿಚಾರ ಪ್ರಸ್ತಾಪ ಮಾಡಲಾಗುತ್ತಿದ್ದು, ಕುಮಾರಸ್ವಾಮಿ ಇದೀಗ ದ್ವೀತಿಯ ಪ್ರಾಶಸ್ತ್ಯದ ಮತಗಳನ್ನು ಕಾಂಗ್ರೆಸ್‍ಗೆ ನೀಡುವುದಾಗಿ ಹೇಳಿದ್ದಾರೆ ಎಂದು ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಎಂ.ಚಂದ್ರಪ್ಪ ಮಾತನಾಡಿ, ‘ಪಠ್ಯ ಪರಿಷ್ಕರಣೆ ವೇಳೆ ಸಮಾಜ ಸುಧಾರಕ ಬಸವಣ್ಣನವರ ವಿಚಾರಗಳನ್ನು ಕೈಬಿಡಲಾಗಿದೆ. ಆದರೆ, ಮುಖ್ಯಮಂತ್ರಿ ಆ ಸಮುದಾಯದ ಅನುಯಾಯಿ. ಈ ಅವಮಾನ ಸಹಿಸಿಕೊಂಡಿರುವುದು ಸರಿಯಲ್ಲ. ಕೂಡಲೇ ಬಸವರಾಜ ಬೊಮ್ಮಾಯಿ ಅವರು ಮೌನ ಮುರಿದು ಮಾತನಾಡಬೇಕು' ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News