ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ: 10 ವಾರಗಳಲ್ಲಿ ನಿರ್ಧರಿಸಲು ಹೈಕೋರ್ಟ್ ಆದೇಶ
Update: 2022-06-08 20:10 IST
ಬೆಂಗಳೂರು, ಜೂ.8: ಹುಬ್ಬಳ್ಳಿ-ಅಂಕೋಲಾ ನಡುವೆ ಬ್ರಾಡ್‍ಗೇಜ್ ರೈಲು ಮಾರ್ಗ ಯೋಜನೆಯಿಂದ ಪರಿಸರ ಮತ್ತು ವನ್ಯಜೀವಿಗಳ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ರಚಿಸಲಾಗಿರುವ ತಜ್ಞರ ಸಮಿತಿ ನೀಡುವ ವರದಿ ಆಧರಿಸಿ 10 ವಾರಗಳಲ್ಲಿ ತೀರ್ಮಾನ ಕೈಗೊಳ್ಳುವಂತೆ ಎನ್‍ಬಿಡಬ್ಲ್ಯೂಗೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತಂತೆ ‘ಪ್ರಾಜೆಕ್ಟ್ ವೃಕ್ಷ ಫೌಂಡೇಷನ್’ ಮತ್ತು ಗಿರಿಧರ್ ಕುಲಕರ್ಣಿ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು(ಪಿಐಎಲ್) ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ನ್ಯಾಯಪೀಠವು 2021ರ ಡಿಸೆಂಬರ್‍ನಲ್ಲಿಯೇ ತಜ್ಞರ ಸಮಿತಿಗೆ ವರದಿ ಸಲ್ಲಿಸಲು ಸೂಚನೆ ನೀಡಲಾಗಿತ್ತು. ಆದರೂ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ, ತಜ್ಞರ ಸಮಿತಿ ವರದಿಯನ್ನು ಸಲ್ಲಿಸಲು, ವನ್ಯಜೀವಿ ಮಂಡಳಿ ಹತ್ತು ವಾರಗಳಲ್ಲಿ ತನ್ನ ನಿರ್ಧಾರವನ್ನು ಕೈಗೊಳ್ಳಬೇಕೆಂದು ಆದೇಶಿಸಿ ವಿಚಾರಣೆಯನ್ನು ಮುಂದೂಡಿತು.