ಶರಾವತಿ ಮುಳುಗಡೆ ಸಂತ್ರಸ್ತರ ಸಭೆ; ಲಿಂಗನಮಕ್ಕಿ ಅಣೆಕಟ್ಟೆ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಸಭೆಗೆ ನಿರ್ಧಾರ
ಶಿವಮೊಗ್ಗ, ಜೂ.08: ಮುಂದಿನ ವಿಧಾನಸಭೆ ಮುಂದಿನ ಚುನಾವಣೆಯೊಳಗೆ ಶರಾವತಿ ಸಂತ್ರಸ್ತರು ಮತ್ತು ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವ ಕಾರ್‍ಯವನ್ನು ಪೂರ್ಣಗೊಳಿಸದಿದ್ದರೆ ಲಿಂಗನಮಕ್ಕಿ ಅಣೆಕಟ್ಟೆ ಮುಂಭಾಗದಲ್ಲಿ ಶರಾವತಿ ಸಂತ್ರಸ್ತರ ಬೃಹತ್ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದು ಶ್ರೀಕ್ಷೇತ್ರ ಸಿಗಂದೂರು ಧರ್ಮದರ್ಶಿ ಡಾ.ರಾಮಪ್ಪನವರು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಅವರು ಸೊರಬ ತಾಲೂಕು ಹೊಳೆಕೊಪ್ಪ ಶ್ರೀ ಧನಾಂಜನೇಯ ದೇವಸ್ಥಾನದ ಸಭಾ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಶರಾವತಿ ಸಂತ್ರಸ್ತರ ಸಭೆಯಲ್ಲಿ ಮಾತನಾಡಿದರು. ಸಂತ್ರಸ್ತರ ಸಮಸ್ಯೆ ನಿವಾರಣೆಗಾಗಿ ನನ್ನ ಕೊನೆ ಉಸಿರು ಇರುವವರೆಗೂ ಹೋರಾಟ ಮಾಡಲು ಸಿದ್ಧನಿದ್ದೇನೆ ಎಂದು ರಾಮಪ್ಪನವರು ಘೋಷಿಸಿದರು.
ಶರಾವತಿ ಹಿನ್ನೀರಿನಿಂದ ಸ್ಥಿರ ಮತ್ತು ಚರ ಆಸ್ತಿ ಕಳೆದುಕೊಂಡವರು ತಾವು ಪುನರ್ವಸತಿ ಪಡೆದ ಸ್ಥಳದಲ್ಲಿ ಹಕ್ಕುಪತ್ರವಿಲ್ಲದೆ ನಿರಾಶ್ರಿತರಾಗಿ ಬದುಕುತ್ತಿದ್ದಾರೆ. ಸರಕಾರ ಅವರಿಗೆ ಹಕ್ಕುಪತ್ರ ನೀಡಲು ನೂರಾರು ಕಾನೂನಿನ ಸಬೂಬು ಹೇಳುತ್ತ ದಿನ ದೂಡುತ್ತಿದೆ. ಇದರಿಂದ ಸಂತ್ರಸ್ತರು ತಮ್ಮ ಜಮೀನನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗದೆ ನಿತ್ಯವೂ ಚಿಂತೆಯಿಂದ ಬದುಕಬೇಕಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನಾ.ಶ್ರೀನಿವಾಸ ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಬಗ್ಗೆ ಶಾಸನ ಸಭೆಯಲ್ಲಿ ಶಾಸಕ ಹಾಲಪ್ಪ,ಕುಮಾರ್ ಬಂಗಾರಪ್ಪ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಸಂತ್ರಸ್ತರಿಗೆ ಹಕ್ಕುಪತ್ರ ನೀಡಲು ಇರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಲು ಸರಕಾರ ಕೂಡಲೇ ಕ್ರಮಕೈಗೊಳ್ಳಬೇಕು,ಇಲ್ಲವಾದಲ್ಲಿ ಹೆಂಗಸರು,ಮಕ್ಕಳು ಸೇರಿ ಸರ್ಕಾರಗಳ ವಿರುದ್ದ ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೋರಾಟ ಸಮಿತಿಯ ಜಿ. ಲೋಕೇಶ್ ಮಾತನಾಡಿ, ಜಿಲ್ಲಾದ್ಯಂತ ಶರಾವತಿ ಸಂತ್ರಸ್ತರನ್ನು ಸಂಘಟಿಸಿ ಬೃಹತ್ ನಡೆಸಲಾಗುವುದು ಎಂದು ವಿವರಿಸಿದರು.
ಸಭೆಯಲ್ಲಿ ಹೂವಪ್ಪ, ರಘುಪತಿ ನಿಂಬೆ, ಸುಧೀರ್ ಸಂಕ್ಲಾಪುರ, ನೂರಾರು ಸಂತ್ರಸ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.ಕ