×
Ad

ದೇವನೂರ ಮಹಾದೇವರ ಹೇಳಿಕೆಯಿಂದ ನೋವಾಗಿದೆ: ಸಚಿವ ಬಿ.ಸಿ.ನಾಗೇಶ್

Update: 2022-06-08 23:29 IST

ಧಾರವಾಡ, ಜೂ.8: ಸಾಹಿತಿ ದೇವನೂರ ಮಹಾದೇವ ಅವರು ಪಠ್ಯದಲ್ಲಾದ ತಪ್ಪುಗಳ ಬಗ್ಗೆ ನಮಗೆ ಸಲಹೆ ನೀಡಬಹುದಿತ್ತು. ಆದರೆ ಪುಸ್ತಕ ಬಿಡುಗಡೆಗೆ ಸಿದ್ಧವಾದ ಮೇಲೆ ತಮ್ಮ ಪಠ್ಯ ತೆಗೆಯುವಂತೆ ಹೇಳಿದ್ದು ನೋವಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಧಾರವಾಡದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕದಲ್ಲಿ ಸಾಹಿತಿಗಳನ್ನು ಯಾವುದೇ ರೀತಿಯಲ್ಲೂ ಕಡೆಗಣಿಸಿಲ್ಲ. ಸಾಹಿತಿ ದೇವನೂರ ಮಹಾದೇವ ಅವರು ಪಠ್ಯದಲ್ಲಾದ ತಪ್ಪುಗಳ ಬಗ್ಗೆ ಹೇಳಿದ್ದು ತಪ್ಪು ಎನ್ನುತ್ತಿಲ್ಲ. ಆದರೆ ಬಿಡುಗಡೆ ಹಂತಕ್ಕೆ ಬಂದಾಗ ತಮ್ಮ ಪಠ್ಯ ತೆಗೆಯುವಂತೆ ಹೇಳಿದ್ದು ನೋವಾಯಿತು ಅಷ್ಟೇ ಎಂದು ಹೇಳಿದ್ದಾರೆ. 

ಕಾಂಗ್ರೆಸ್ ಅವಧಿಯಲ್ಲಿ ಮಹಾರಾಜರ ಕಥೆಗಳನ್ನು ತೆಗೆದು ಟಿಪ್ಪು ಸುಲ್ತಾನ್ ಕಥೆ ಹಾಕಲಾಗಿತ್ತು. ಸಿಂಧೂ ಸಂಸ್ಕøತಿ ಕಿತ್ತು ಹಾಕಿ ನೆಹರೂ ಪಾಠ ಹಾಕಲಾಗಿತ್ತು. ಇಸ್ಲಾಂ ಮತ್ತು ಕ್ರೈಸ್ತರನ್ನು ಮಾತ್ರ ಪುಸ್ತಕದಲ್ಲಿ ತರಲಾಗಿತ್ತು. ಇಂತಹ ನೂರು ಉದಾಹರಣೆಗಳನ್ನು ನಾನು ಹೇಳಬಲ್ಲೆ. ಬರಗೂರು ರಾಮಚಂದ್ರಪ್ಪನವರ ಕಾಲದಲ್ಲೂ ಪಠ್ಯದಲ್ಲಿ ತಪ್ಪುಗಳಾಗಿದ್ದವು. ಸಿದ್ದರಾಮಯ್ಯ ಸರಕಾರ ಇದ್ದಾಗಲೇ ನಾಡಗೀತೆಗೆ ಅಪಮಾನ ಮಾಡಲಾಗಿತ್ತು. ಅದನ್ನು ಯಾರೂ ಖಂಡಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಒಂದು ತಿಂಗಳಲ್ಲಿ ಪಠ್ಯಪುಸ್ತಕ ವಿತರಣೆಗೆ ಸಿದ್ಧ: ಪಠ್ಯ ಪುಸ್ತಕಗಳಲ್ಲಾಗಿರುವ ಲೋಪವನ್ನು ಆದಷ್ಟು ಬೇಗ ಸರಿಪಡಿಸಲಾಗುವುದು. ಈಗಾಗಲೇ ಶೇ.84 ರಷ್ಟು ಪರಿಷ್ಕೃತ ಪಠ್ಯ ಪುಸ್ತಕಗಳು ಬಿಇಓ ಕಚೇರಿ ಸೇರಿವೆ. ಇನ್ನೊಂದು ತಿಂಗಳಲ್ಲಿ ವಿತರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವಂತಹ ದೊಡ್ಡ ಜವಾಬ್ದಾರಿ ಸಿಕ್ಕಾಗ ಜಾಗರೂಕರಾಗಿರಬೇಕು. ಈ ರೀತಿಯ ತಪ್ಪು ಆಗಿರೋದನ್ನು ಗಮನಿಸಿ ಅದರ ಮರು ಪರಿಷ್ಕರಣೆಗೆ ನಾವು ಮುಂದಾಗಿದ್ದೇವೆ. ಬಸವಣ್ಣನ ಪಠ್ಯದಲ್ಲಿ ಹಲವು ಹೊಸ ವಿಚಾರಗಳನ್ನು ಅಳವಡಿಸಲಾಗಿದೆ. ಈ ರೀತಿಯ ಲೋಪಗಳು ಆದಾಗ ಅದನ್ನು ಯಾರೇ ಕಂಡುಹಿಡಿದರೂ ಸರಿಪಡಿಸುತ್ತೇವೆ. ನಾವು ತಪ್ಪನ್ನು ಮುಚ್ಚಿಡುವುದಿಲ್ಲ. ನಡೆಯುತ್ತಿರುವ ವಾದ, ವಿವಾದಗಳು ಮಕ್ಕಳ ಮೇಲೆ ಪರಿಣಾಮ ಬೀರುವುದು ಬೇಡ. ಹೀಗಾಗಿ ಪಠ್ಯದಲ್ಲಾದ ತಪ್ಪುಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ವಿವಾದಗಳಿಗೆ ತೆರೆ ಎಳೆಯುವ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News