ಮೋದಿ ಸರಕಾರದ 8 ವರ್ಷ; ನಿರುದ್ಯೋಗಿ ಯುವಜನರಿಗೆ ನರಕ ವಾಸ

Update: 2022-06-09 04:34 GMT

ಭಾಗ-2

ಇವರು ಉದ್ಯೋಗವನ್ನೂ ನೀಡುವುದಿಲ್ಲ. ದೇಶವನ್ನು ಮೇಲೆತ್ತುವುದೂ ಇಲ್ಲ. ಅದು ಇದ್ದ ಹಾಗೆ ಬಿಟ್ಟಿದ್ದರೂ ವ್ಯವಸ್ಥೆ ನಡೆಯುತ್ತಿತ್ತು. ಅವರು ಹಾಗೆ ಬಿಡುವುದೂ ಇಲ್ಲ. ಇನ್ನು 15 ವರ್ಷಕ್ಕೆ ಈ ದೇಶ ಮುದುಕ-ಮುದುಕಿಯರ ದೇಶವಾಗುತ್ತದೆ. ದುಡಿಮೆಯ ಶಕ್ತಿ ಕ್ಷೀಣಿಸುತ್ತಾ ಹೋಗುತ್ತದೆ. ಆಗ ಅಭಿವೃದ್ಧಿಯನ್ನು ಸಾಧಿಸುವುದು ಹೇಗೆ?

ಇದೆಲ್ಲ ಯುವಕರಿಗೆ ಅರ್ಥವಾಗಬಾರದು ಎಂಬ ಕಾರಣದಿಂದಲೇ ಬಿಜೆಪಿಯವರು ಮಾತೆತ್ತಿದರೆ ಹಿಂದೂ, ಮುಸ್ಲಿಮ್, ದಲಿತರ ದ್ವೇಷ, ಚೀನಾ, ಪಾಕಿಸ್ತಾನದ ವಿರುದ್ಧ ಮಾತನಾಡುತ್ತಾರೆ. ಜೊತೆಗೆ ಅಧಿಕಾರದ ಆಸೆಗಾಗಿ ವೈದಿಕಶಾಹಿಯ ಗುಲಾಮರಾಗಿರುವ ಶೂದ್ರ ನಾಯಕರನ್ನು ಪ್ರಚೋದಿಸಿ ಆರೆಸ್ಸೆಸ್‌ನ ದುಷ್ಟ ಅಜೆಂಡಾಗಳನ್ನು ತಲೆಯ ಮೇಲೆ ಹೊತ್ತು ನಡೆಯುವಂತೆ ಮಾಡುತ್ತಿದ್ದಾರೆ. ಇಟಲಿಯ ಮುಸ್ಸೋಲಿನಿಯಿಂದ, ಜರ್ಮನಿಯ ಹಿಟ್ಲರ್‌ನಿಂದ ಮೆದುಳು, ಹೃದಯಗಳನ್ನು ತಂದು ಕಸಿ ಮಾಡಿಕೊಂಡಿರುವ ಚಡ್ಡಿ ಪರಿವಾರವು ದೇಶದ ಸೌಹಾರ್ದ ಪರಂಪರೆಯ ಮೇಲೆ ದಾಳಿ ಮಾಡುತ್ತಿದೆ. ದ್ವೇಷದ ಬೆಂಕಿ ಹಚ್ಚಿ ಯುವಜನರ ಕನಸುಗಳನ್ನು ಅದಕ್ಕೆ ಆಹುತಿ ನೀಡುತ್ತಿದ್ದಾರೆ. ಉದ್ಯೋಗ ನೀಡುವ ಸಣ್ಣ ಪುಟ್ಟ ಉದ್ಯಮಿಗಳಲ್ಲಿ ಕಳೆದ ವರ್ಷ 11,716 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕೇಂದ್ರ ಸರಕಾರದ ದಾಖಲೆಗಳು ಹೇಳುತ್ತಿವೆ. ಇದು 2019ಕ್ಕೆ ಹೋಲಿಸಿದರೆ ಶೇ.29ರಷ್ಟು ಜಾಸ್ತಿ. ಇದರಲ್ಲೂ ಕರ್ನಾಟಕದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಬ್ಯುಸಿನೆಸ್‌ಮೆನ್‌ಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಇತ್ತೀಚೆಗಿನ ವರದಿಗಳ ಪ್ರಕಾರ 1,772 ಜನ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು 2019ಕ್ಕೆ ಹೋಲಿಸಿದರೆ ಶೇ.103ರಷ್ಟು ಹೆಚ್ಚು. ಸಣ್ಣ ಕೈಗಾರಿಕೆಗಳು ದಿಕ್ಕೆಟ್ಟರೆ ದೇಶವೂ ದಿಕ್ಕೆಡುತ್ತದೆ.

ದೇಶದಲ್ಲಿ ಯಾವ ಮಟ್ಟದ ನಿರುದ್ಯೋಗ ಇದೆ ಎಂದರೆ, 2019ರಲ್ಲಿ ರೈಲ್ವೆ ಇಲಾಖೆಯಲ್ಲಿ 35,000 ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ 1.26 ಕೋಟಿ ಯುವಕ- ಯುವತಿಯರು ಅರ್ಜಿ ಸಲ್ಲಿಸಿದ್ದರು. ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಹತೆ ಸಾಕಿರುವ ಈ ಹುದ್ದೆಗಳಿಗೆ ಡಿಗ್ರಿ, ಪೋಸ್ಟ್ ಗ್ರಾಜುಯೇಷನ್, ಪಿಎಚ್‌ಡಿ, ಇಂಜಿನಿಯರಿಂಗ್ ಮುಂತಾದ ವಿದ್ಯಾರ್ಹತೆಯುಳ್ಳವರು ಲಕ್ಷಾಂತರ ಜನ ಅರ್ಜಿ ಸಲ್ಲಿಸಿದ್ದಾರೆ. ಒಂದು ಹುದ್ದೆಗೆ 350 ಜನ ಅರ್ಜಿ ಸಲ್ಲಿಸಿದ್ದಾರೆ. ಒಬ್ಬರಿಗೆ ಕೆಲಸ ಸಿಕ್ಕಿದರೆ ಉಳಿದವರಿಗೆ ಉದ್ಯೋಗವಿಲ್ಲ. ಇಷ್ಟಾದರೂ ನೇಮಕಾತಿ ಆಗಲಿಲ್ಲ. ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿ ದೇಶದ ಅನೇಕ ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆಗಳು ನಡೆದವು. ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ನಿರುದ್ಯೋಗದ ವಿರುದ್ಧ ಚಳವಳಿಗಳೇ ಪ್ರಾರಂಭವಾದವು. ನಮ್ಮಲ್ಲೂ ಕೆಲವೇ ಸರಕಾರಿ ಹುದ್ದೆಗಳಿಗೆ ಲಕ್ಷಾಂತರ ಯುವಜನರು ಅರ್ಜಿ ಸಲ್ಲಿಸುತ್ತಾರೆ. ಬಿಜೆಪಿ ಸರಕಾರ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಸುಮಾರು ಆರು ಸಾವಿರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಿತು. ಸಬ್ ಇನ್‌ಸ್ಪೆಕ್ಟರ್, ಸಹಾಯಕ ಪ್ರಾಧ್ಯಾಪಕ, ಇಂಜಿನಿಯರ್.. ಹೀಗೆ. ಇವುಗಳಲ್ಲಿ ಸಾವಿರಕ್ಕೂ ಹೆಚ್ಚು ಕೋಟಿಗಳ ಭ್ರಷ್ಟಾಚಾರ ನಡೆದಿದೆ ಎಂದು ಹೇಳಲಾಗುತ್ತಿದೆ. ಸಬ್ ಇನ್‌ಸ್ಪೆಕ್ಟರ್, ಸಹಾಯಕ ಪ್ರಾಧ್ಯಾಪಕ ಮುಂತಾದವುಗಳ ನೇಮಕಾತಿಯಲ್ಲಿ ರಾಜ್ಯದ ಮಾನ ಮೂರು ಕಾಸಿಗೆ ಹರಾಜಾಗಿದೆ.

 ದೇಶದಲ್ಲಿ ಉದ್ಯೋಗ ಮಾಡುವ ಜನರ ಸಂಖ್ಯೆ 107 ಕೋಟಿ. ಈಗ ಸಣ್ಣ ಪುಟ್ಟ ಉದ್ಯೋಗ ಮಾಡುತ್ತಿರುವವರ ಪ್ರಮಾಣ ಶೇ.37.5 ಕೋಟಿ ಮಾತ್ರ. ಇದರಲ್ಲಿ ಕೃಷಿಯಲ್ಲಿ ತೊಡಗಿರುವ ಜನರೂ ಇದ್ದಾರೆ. ಮೋದಿಯವರು 2014ರಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಯ ಮಾತನ್ನಾಡಿದ್ದರು. ಆ ಉದ್ಯೋಗಗಳು ಎಲ್ಲಿಗೆ ಹೋದವು? ಈ ಬಾರಿ ಬಜೆಟ್‌ನಲ್ಲಿ ‘ಪ್ರಧಾನಮಂತ್ರಿ ಗತಿಶಕ್ತಿ ಯೋಜನೆ’ ಎಂದು ಪ್ರಸ್ತಾಪಿಸಿದ್ದಾರೆ. ರಸ್ತೆ, ರೈಲ್ವೆ ಮುಂತಾದವುಗಳ ವಿಚಾರದಲ್ಲಿ ಬಂಡವಾಳ ವೆಚ್ಚವನ್ನು ಹೆಚ್ಚು ಮಾಡಿ 60 ಲಕ್ಷ ಉದ್ಯೋಗಗಳನ್ನು ಮುಂದಿನ 5 ವರ್ಷಗಳಲ್ಲಿ ಸೃಷ್ಟಿಸಲಾಗುವುದೆಂದು ಹೇಳಿದ್ದಾರೆ. ಅಂದರೆ ವರ್ಷಕ್ಕೆ 12 ಲಕ್ಷ ಎಂದು ಅಂದಾಜು. ಆದರೆ ಪ್ರತೀ ವರ್ಷ ಉದ್ಯೋಗ ಮಾರುಕಟ್ಟೆಗೆ 47.5 ಲಕ್ಷ ಜನರು ಬರುತ್ತಾರೆ. ಇವರಿಗೆ ಉದ್ಯೋಗ ಒದಗಿಸಲು ಮೋದಿಯವರ ಬಳಿ ಯೋಜನೆಗಳೇ ಇಲ್ಲ.

 ದೇಶದಲ್ಲಿ 60 ಲಕ್ಷ ಎಂಎಸ್‌ಎಂಇಗಳನ್ನು ಮುಚ್ಚಲಾಗಿದೆ. 2014ರಲ್ಲಿ ಎಂಎಸ್‌ಎಂಇ ಮತ್ತು ಅವುಗಳ ಸಂಬಂಧಿತ ವಲಯದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರ ಸಂಖ್ಯೆ ಸುಮಾರು 10 ಕೋಟಿಗಳಷ್ಟಿತ್ತು. ಆಗ ಮೋದಿಯವರು ವರ್ಷಕ್ಕೆ 2 ಕೋಟಿಯಂತೆ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳಿದ್ದರು. ಅದರ ಲೆಕ್ಕದಲ್ಲಿ ಹೋದರೆ ಎಂಎಸ್‌ಎಂಇ ವಲಯವೊಂದರಲ್ಲೇ ಹೊಸದಾಗಿ ಕನಿಷ್ಠ ಎಂದರೂ 16 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ಈಗ 2014ರಲ್ಲಿ ಇದ್ದ ಉದ್ಯೋಗಗಳೂ ನಾಶವಾಗಿ ಹೋಗಿ ಎಂಎಸ್‌ಎಂಇಯಲ್ಲಿ ಕೇವಲ 2.5 ಕೋಟಿ ಉದ್ಯೋಗಗಳು ಇಂದು ಉಳಿದಿವೆ ಎಂದು ವರದಿಗಳು ಹೇಳುತ್ತಿವೆ. ದೇಶದ ಸಂಪತ್ತು ಕೆಲವರ ಬಳಿಯೇ ಸಂಗ್ರಹವಾಗುತ್ತಿದೆ. ಮೋದಿ ಸರಕಾರ ಕಾರ್ಪೊರೇಟ್ ಬಂಡವಾಳಿಗರೆಂಬ ಕೊರೋನಕ್ಕಿಂತಲೂ ಅಪಾಯಕಾರಿಯಾದ ಬೃಹತ್ ವೈರಸ್‌ಗಳನ್ನು ಸಾಕುತ್ತಿದೆ. ನೋಟು ನಿಷೇಧ, ಜಿಎಸ್‌ಟಿ ವ್ಯವಸ್ಥೆಗಳು ಲಾಭ ಮಾಡಿಕೊಟ್ಟದ್ದು ಇದೇ ವೈರಸ್‌ಗಳಿಗೆ. ಇದನ್ನು ಬಿಜೆಪಿಯವರು ಒಪ್ಪಲು ಸಿದ್ಧರಿಲ್ಲ. ಆದರೆ ವಾಸ್ತವಾಂಶಗಳು ಇದನ್ನು ನಿಜ ಎನ್ನುತ್ತವೆ. ಕೊರೋನದ ಒಂದು ವರ್ಷದ ಅವಧಿಯಲ್ಲಿ 142 ಜನ ಕಾರ್ಪೊರೇಟ್ ಬಂಡವಾಳಿಗರ ಸಂಪತ್ತು 23 ಲಕ್ಷ ಕೋಟಿಯಿಂದ 53 ಲಕ್ಷ ಕೋಟಿಗೆ ಏರಿಕೆಯಾಯಿತು. ಈ ಅವಧಿಯಲ್ಲಿ 60 ಲಕ್ಷ ಸಣ್ಣ ಕೈಗಾರಿಕೆಗಳು ಮುಚ್ಚಿ ಹೋದವು. ನಿರುದ್ಯೋಗ, ಬಡತನ ತೀವ್ರವಾಯಿತು. ಈ ರೀತಿ ಏಕಾಯಿತು ಎಂದು ಬಿಜೆಪಿ ಸರಕಾರ ಜನರಿಗೆ ತಿಳಿಸಬೇಕಲ್ಲ. ಯಾವ ದೇಶದಲ್ಲಿ ಎಂಎಸ್‌ಎಂಇಗಳು ಚೆನ್ನಾಗಿರುತ್ತವೋ ಅಲ್ಲಿ ಉದ್ಯೋಗ ಸೃಷ್ಟಿ ಸಮರ್ಪಕವಾಗಿರುತ್ತದೆ. ಇಂದು ಪೀಣ್ಯ ಕೈಗಾರಿಕಾ ಪ್ರದೇಶ ನೋಡಿದರೆ ಅದು ಹಾಳು ಬಿದ್ದಿರುವುದು ಕಾಣುತ್ತದೆ.

   ಇತ್ತ ಸರಕಾರಿ ಉದ್ಯೋಗಗಳನ್ನೂ ತುಂಬುತ್ತಿಲ್ಲ. 8.72 ಲಕ್ಷ ಉದ್ಯೋಗಗಳು ಕೇಂದ್ರ ಸರಕಾರದಲ್ಲಿ ಖಾಲಿ ಇವೆ. 12 ಲಕ್ಷ ಉದ್ಯೋಗಗಳನ್ನು ಕೇಂದ್ರ ಸರಕಾರ ಭರ್ತಿ ಮಾಡಿಲ್ಲ. ರಾಜ್ಯಗಳು ಸುಮಾರು 45 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಕೇಂದ್ರ ಸರಕಾರ ನಿಗದಿಪಡಿಸಿರುವ ಕನಿಷ್ಠ ಕೂಲಿ ರೂ.590. ನರೇಗಾ ಕಾರ್ಮಿಕರಿಗೂ ಇಷ್ಟೇ ಕೂಲಿಯನ್ನು ಕೊಡಬೇಕು. ಆದರೆ ಕಳೆದ ವರ್ಷ ಕರ್ನಾಟಕದ ನರೇಗಾ ಕೂಲಿ ಕಾರ್ಮಿಕರಿಗೆ 289 ರೂ. ನಿಗದಿಪಡಿಸಿದ್ದರು. ಈ ವರ್ಷ ಇನ್ನೂ ರಿವೈಸ್ ಮಾಡಿಲ್ಲ. ಕಳೆದ ವರ್ಷ ದೇಶದಲ್ಲಿ 6.50 ಕೋಟಿ ಕುಟುಂಬಗಳು ನರೇಗಾ ಯೋಜನೆಯಲ್ಲಿ ಕೆಲಸ ಮಾಡಿವೆ. 2022-23ರ ಆರ್ಥಿಕ ವರ್ಷದಲ್ಲಿ 11 ಕೋಟಿ ಜನ ಕೆಲಸ ಬೇಕೆಂದು ಅರ್ಜಿ ಹಾಕಿದ್ದಾರೆಂದು ನರೇಗಾ ಸಂಘರ್ಷ ಸಮಿತಿಗಳು ಮತ್ತು ಪಿಎಐಜಿ ಮಾಡಿರುವ ಸಮೀಕ್ಷೆಗಳ ವರದಿಗಳು ಹೇಳುತ್ತಿವೆ. 11 ಕೋಟಿ ಜನರಿಗೆ ಕನಿಷ್ಠ 100 ದಿನ ಉದ್ಯೋಗ ನೀಡಬೇಕೆಂದರೆ ಕನಿಷ್ಠ ಅಂದರೂ ರೂ.2.65 ಲಕ್ಷ ಕೋಟಿ ಅನುದಾನವನ್ನು ನೀಡಬೇಕು. ಹಣದುಬ್ಬರವನ್ನು ಲೆಕ್ಕ ಹಾಕಿ ರೂ.334 ಕೊಟ್ಟಿದ್ದರೆ ರೂ.3.3 ಲಕ್ಷ ಕೋಟಿ ಇಡಬೇಕಾಗಿತ್ತು. ಇದು ರೂ.39.50 ಲಕ್ಷ ಕೋಟಿ ಬಜೆಟ್‌ನಲ್ಲಿ ಶೇ.10 ಕ್ಕಿಂತ ಕಡಿಮೆ. ಆದರೆ ಸುಮಾರು 10 ಕೋಟಿ ಕುಟುಂಬಗಳಿಗೆ ಬದುಕಿನ ಆಸರೆ ಆಗುತ್ತಿತ್ತು. ಆದರೆ ಬಜೆಟ್‌ನಲ್ಲಿ ಕೇವಲ ರೂ.73,000 ಕೋಟಿ ಅನುದಾನ ಒದಗಿಸಲಾಗಿದೆ. ಇದರಲ್ಲಿ ಹಳೆಯ ಬಾಕಿ ಮೊತ್ತವಾದ ರೂ. 18,000 ಕೋಟಿಯನ್ನು ಕಳೆದರೆ ನೈಜವಾಗಿ ನರೇಗಾಕ್ಕೆ ಸಿಗುವುದು ರೂ.55,000 ಕೋಟಿ ಮಾತ್ರ. ಇದರಲ್ಲಿ ದಿನಕ್ಕೆ ರೂ.334 ರೀತಿ ಕೂಲಿ ಕೊಟ್ಟರೆ 10 ಕೋಟಿ ಕುಟುಂಬಗಳಿಗೆ ಕೇವಲ 16 ದಿನಗಳಿಗೆ ಮಾತ್ರ ಸಾಕಾಗುತ್ತದೆ.

ಕೇಂದ್ರ ಸರಕಾರ ನಿರಂತರವಾಗಿ ಸರಕಾರಿ ಸಂಸ್ಥೆ, ಕಂಪೆನಿ, ಕಾರ್ಖಾನೆಗಳನ್ನು ಮುಚ್ಚುವ ಕೆಲಸವನ್ನು ಮಾಡುತ್ತಿದೆ. 2014ಕ್ಕೆ ಹೋಲಿಸಿದರೆ 2018ರ ಹೊತ್ತಿಗೆ ಕೇಂದ್ರ ಸರಕಾರದ ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಸಂಖ್ಯೆ ಸುಮಾರು 2.5 ಲಕ್ಷದಷ್ಟು ಕಡಿಮೆಯಾಗಿದೆ. 2013-14ರಲ್ಲಿ 16.50 ಲಕ್ಷದಷ್ಟಿದ್ದ ಕೇಂದ್ರ ಸರಕಾರದ ಸಾರ್ವಜನಿಕ ಉದ್ದಿಮೆಗಳ ನೌಕರರ ಸಂಖ್ಯೆ 2018ರ ವೇಳೆಗೆ 14 ಲಕ್ಷಕ್ಕೆ ಇಳಿದಿದೆ. 2021ರಲ್ಲಿ ಈ ಸಂಖ್ಯೆ ಇನ್ನಷ್ಟು ಕಡಿಮೆಯಾಗಿದೆ. ಇದೇ ರೀತಿ ಕೇಂದ್ರ ಸರಕಾರದ ಸಾರ್ವಜನಿಕ ಸಂಸ್ಥೆ ಅಥವಾ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ, ಹಂಗಾಮಿ ನೌಕರರ ಸಂಖ್ಯೆ 2014-15ರಲ್ಲಿ ಶೇ.24.8 ರಷ್ಟಿದ್ದದ್ದು, 2017-18ರ ವೇಳೆಗೆ ಶೇ.34.7ಕ್ಕೆ ಏರಿಕೆಯಾಗಿದೆ. ಖಾಸಗಿ ಮತ್ತು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುತ್ತಿರುವ ನೌಕರರ ಸಂಖ್ಯೆ 1,000 ಜನಕ್ಕೆ ಭಾರತದಲ್ಲಿ ಈಗ ಸುಮಾರು 12 ರಿಂದ 14ರಷ್ಟಿದೆ. ಅಮೆರಿಕದಲ್ಲಿ 77, ಬ್ರೆಝಿಲ್‌ನಲ್ಲಿ 111, ಫ್ರಾನ್ಸ್‌ನಲ್ಲಿ 114, ಚೀನಾದಲ್ಲಿ ಸುಮಾರು 60ರಷ್ಟಿದೆ. ಸ್ವೀಡನ್‌ನಲ್ಲಿ 138, ನಾರ್ವೆಯಲ್ಲಿ 160ರಷ್ಟಿದೆ. ಅಂದರೆ 1,000 ಜನಕ್ಕೆ ಭಾರತದಲ್ಲಿ ಕೇವಲ 12 ಜನ ಮಾತ್ರ ಸಾರ್ವಜನಿಕ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅರ್ಥ. ಕೇಂದ್ರ ಸರಕಾರವು ಎಸ್‌ಟಿ/ಎಸ್‌ಸಿ, ಒಬಿಸಿ, ಜಾತಿ ಪಂಗಡಗಳ ಯುವಕ, ಯುವತಿಯರಿಗೆ ಬದುಕಿನ ಅವಕಾಶಗಳನ್ನು ನಾಶ ಮಾಡಬೇಕೆಂಬ ಉದ್ದೇಶದಿಂದಲೇ ಕಂಪೆನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ. ಇದಿಷ್ಟೇ ಅಲ್ಲದೆ ಕೇಂದ್ರ ಸರಕಾರದ ಪ್ರಮುಖ 10 ಇಲಾಖೆಗಳಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಜನರಿಗಾಗಿ ಮೀಸಲಿಟ್ಟಿರುವ ಉದ್ಯೋಗಗಳಲ್ಲಿ ಶೇ.50ರಷ್ಟು ಖಾಲಿ ಇದೆ ಎಂದು ವರದಿಗಳು ಹೇಳುತ್ತಿವೆ. (ಈ ಒಬಿಸಿ ಪಟ್ಟಿಯ 16 ಜಾತಿಗಳಲ್ಲಿ ಒಕ್ಕಲಿಗ, ಲಿಂಗಾಯಿತ ಜಾತಿಗಳೂ ಸೇರಿವೆ.) ಈ ಎಲ್ಲರಿಗೂ ಕೇಂದ್ರದ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಅನ್ಯಾಯ ಮಾಡುತ್ತಿದೆ. 2021ರ ಮಾರ್ಚ್‌ನಲ್ಲಿ ಕೇಂದ್ರ ಸರಕಾರದ ಪರ್ಸನಲ್ ಲಾ ಕುರಿತಾದ ಸ್ಟ್ಯಾಂಡಿಂಗ್ ಕಮಿಟಿಯು ಪಾರ್ಲಿಮೆಂಟ್‌ನಲ್ಲಿ ಮಂಡಿಸಿದ ವರದಿಯಂತೆ ಭಾರತೀಯ ರೈಲ್ವೆಯಲ್ಲಿ 29,541 ಹುದ್ದೆಗಳನ್ನು ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಗುಂಪಿನ ಯುವಜನರಿಗಾಗಿ ಮೀಸಲಿರಿಸಲಾಗಿದೆ. ಅದರಲ್ಲಿ 17,769 ಹುದ್ದೆಗಳು ಖಾಲಿ ಇವೆ. ಗೃಹ ಇಲಾಖೆಯಲ್ಲಿ 3,943 ಹುದ್ದೆಗಳು ಈ ವರ್ಗದವರಿಗಾಗಿ ಮೀಸಲಿವೆ. ಆದರೆ 2021ರ ಮಾರ್ಚ್ ವೇಳೆಗೆ 17,493 ಹುದ್ದೆಗಳು ಖಾಲಿ ಇದ್ದವು. ಹಣಕಾಸು ಇಲಾಖೆಯಲ್ಲಿ ಶೇ.70ರಷ್ಟು ಮೀಸಲಾತಿ ಹುದ್ದೆಗಳಲ್ಲಿ ಶೇ.70ರಷ್ಟು ಹುದ್ದೆಗಳು ಖಾಲಿ ಇದ್ದವು. ಈ ಇಲಾಖೆಯಲ್ಲಿ 10,921 ಹುದ್ದೆಗಳು ಮೀಸಲಾತಿ ವರ್ಗದವರಿಗೆ ಮೀಸಲಿದ್ದರೆ, 7,040 ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಪ್ರಸ್ತುತ ಕೇಂದ್ರ ಸರಕಾರದಲ್ಲಿ 9 ಲಕ್ಷ ಹುದ್ದೆಗಳು ಖಾಲಿ ಇವೆ. ಬಿಎಸ್‌ಎಫ್‌ನಲ್ಲಿ 28,905, ಸಿಐಎಸ್‌ಎಫ್‌ನಲ್ಲಿ 25,000, ಸಿಆರ್‌ಪಿಎಫ್‌ನಲ್ಲಿ 28,000, ಎಸ್‌ಎಸ್‌ಬಿಯಲ್ಲಿ 18,633 ಹುದ್ದೆಗಳು ಖಾಲಿ ಇವೆಯೆಂಬ ಮಾಹಿತಿ ಇದೆ.

 ಸಿಎಂಐಇ (ದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ)ಯ ಪ್ರಸ್ತುತ ವರದಿಗಳ ಪ್ರಕಾರ ಈಗ ನಗರ ನಿರುದ್ಯೋಗ ಶೇ.7.9ರಷ್ಟಿದೆ ಹಾಗೂ ಗ್ರಾಮೀಣ ನಿರುದ್ಯೋಗ ಶೇ. 7.0ರಷ್ಟಿದೆ. ಬಹುಶಃ ಈ ಪ್ರಮಾಣ 100 ವರ್ಷಗಳಲ್ಲೇ ಅಧಿಕವಿರಬೇಕು. ದೇಶ ಬರಗಾಲ, ಪ್ರವಾಹ, ಯುದ್ಧಗಳು, ವಿಶ್ವ ಆರ್ಥಿಕ ಕುಸಿತಗಳನ್ನು ಕಂಡಿದ್ದಾಗಲೂ ಈ ಪ್ರಮಾಣದ ಸಮಸ್ಯೆಗಳಾಗಿರಲಿಲ್ಲ.

Writer - ಸಿದ್ದರಾಮಯ್ಯ

contributor

Editor - ಸಿದ್ದರಾಮಯ್ಯ

contributor

Similar News