ಭಾಗವತರೊಂದು ಹೇಳಿಕೆ ನೀಡಿದರು; ಪ್ರಶಂಸೆಯ ಮಹಾಪೂರವೇ ಹರಿಯಿತು...!

Update: 2022-06-09 04:59 GMT

ಕೆಲವರಂತೂ ಆರೆಸ್ಸೆಸ್ ಮುಖ್ಯಸ್ಥರನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಅವರ ಭಾಷಣವು ಹೊಸ ಶಕೆಯ ಉದಯ ಎಂಬುದಾಗಿ ಭಾವಿಸಿದ್ದಾರೆ. ಆದರೆ, ಅವರ ಭಾಷಣವು ಎಷ್ಟರ ಮಟ್ಟಿಗೆ ಪರಿಸ್ಥಿತಿಯನ್ನು ಸುಧಾರಿಸಬಹುದು ಎನ್ನುವುದು ಇವರಿಗೆ ಗೊತ್ತಿಲ್ಲ.

ನಾಗಪುರದಲ್ಲಿ ಜೂನ್ 2ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಮಾಡಿದ ಭಾಷಣವನ್ನು ಶ್ಲಾಘಿಸಿ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರುತ್ತಿದೆ. ಇದು ಮುಸ್ಲಿಮರ ವಿರುದ್ಧದ ಆಕ್ರಮಣಶೀಲತೆಯ ಶಮನಕ್ಕೆ ನೀಡಿದ ಕರೆ ಎಂಬುದಾಗಿ ಜನರು ಭಾವಿಸಿದ್ದಾರೆ. ಈ ಬೆಳವಣಿಗೆಯು ಒಂದು ವಿಷಯವನ್ನಂತೂ ಸಂಶಯಾತೀತವಾಗಿ ಸಾಬೀತುಪಡಿಸುತ್ತದೆ. ಅದೆಂದರೆ, ಮುಸ್ಲಿಮರ ವಿರುದ್ಧದ ದ್ವೇಷದ ಮೂಲಸೆಲೆ ಆರೆಸ್ಸೆಸ್ ಮತ್ತು ವಿವಿಧ ಹಿಂದುತ್ವ ಗುಂಪುಗಳು ಮುಸ್ಲಿಮರ ವಿರುದ್ಧ ನಡೆಸುವ ಹಿಂಸೆಗೆ ಅದುವೇ ಪ್ರಚೋದನೆ ನೀಡುತ್ತದೆ.

ಅಲ್ಲದಿದ್ದರೆ, ‘‘ಪ್ರತಿ ಮಸೀದಿಯಲ್ಲಿ ನೀವು ಶಿವಲಿಂಗವನ್ನು ಹುಡುಕುವ ಅಗತ್ಯವಿಲ್ಲ’’ ಎಂಬುದಾಗಿ ತನ್ನ ಸ್ವಯಂಸೇವಕರಿಗೆ ಮತ್ತು ಸಂಘ ಪರಿವಾರದ ಇತರ ಸದಸ್ಯರಿಗೆ ಭಾಗವತ್ ಹೇಳಿದ ಬಳಿಕ ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿರುವ ನೆಮ್ಮದಿಯ ಅರ್ಥವೇನು? ದೇಶದಲ್ಲಿ ನೆಲೆಸಿರುವ ಕೋಮು ಉದ್ವಿಗ್ನತೆಯ ಸೈದ್ಧಾಂತಿಕ ಮೂಲ ಸ್ವತಃ ಆರೆಸ್ಸೆಸ್ ಎಂಬುದಾಗಿ ನಾವು ನಂಬಿದಾಗಷ್ಟೇ ತನ್ನ ಅನುಯಾಯಿಗಳನ್ನು ನಿಯಂತ್ರಿಸುವ ಅವರ ಪ್ರಯತ್ನವು ವಿಶ್ವಾಸಾರ್ಹವಾಗುತ್ತದೆ.

ಭಾಗವತರ ಹೇಳಿಕೆಗಳಿಗೆ ಕೆಲವರು ನೀಡಿರುವ ಪ್ರತಿಕ್ರಿಯೆಯನ್ನು ಗಮನಿಸಿದರೆ, ಗುಂಪೊಂದರ ಸರದಾರನು ತನ್ನ ಜನರ ಅಶಿಸ್ತಿನ ನಡವಳಿಕೆಯಿಂದ ಬೇಸತ್ತು, ಮಿತಿಯನ್ನು ದಾಟದಂತೆ ಅವರಿಗೆ ನೀಡಿದ ಸೂಚನೆಯಂತೆ ಭಾಗವತರ ಹೇಳಿಕೆಯನ್ನು ಪರಿಗಣಿಸಿದ್ದಾರೆ ಎನ್ನುವುದು ಸ್ಪಷ್ಟ. ಅವರಿಗೆ ಅಶಾಂತಿಯೇ ನೆಮ್ಮದಿಯ ಮೂಲ ಎಂಬಂತಾಗಿದೆ. ‘‘ಮಸೀದಿಗಳು ಮಸೀದಿಗಳಲ್ಲ, ತಮ್ಮ ದೇವಾಲಯಗಳು ಎಂದು ಹೇಳಿಕೊಂಡು ತಿರುಗುತ್ತಿರುವವರನ್ನು ಭಾಗವತರ ಹೇಳಿಕೆಗಳು ನಿಯಂತ್ರಣದಲ್ಲಿಡಬಹುದು; ಹಿಂಸಾಚಾರವನ್ನು ಕಡಿಮೆ ಮಾಡಬಹುದು; ಇಷ್ಟು ಸಾಲದೇ?’’ ಎಂಬುದಾಗಿಯೂ ಅವರು ಕೇಳಬಹುದು.

ಹೆಚ್ಚಿನವರು ಇಂತಹ ಯೋಚನೆಗಳ ಆಧಾರದಲ್ಲಿ ಆರೆಸ್ಸೆಸ್ ಮುಖ್ಯಸ್ಥರ ಭಾಷಣವನ್ನು ಶ್ಲಾಘಿಸಿದ್ದಾರೆ. ಆರೆಸ್ಸೆಸ್ ಮುಖ್ಯಸ್ಥ ಸೈದ್ಧಾಂತಿಕ ಮುಖ್ಯಸ್ಥನಾಗಿದ್ದಾರೆ ಮತ್ತು ಗುಂಪಿನ ನಿಯಂತ್ರಣವನ್ನು ಹೊಂದಿದ್ದಾರೆ ಎಂಬ ಭಾವನೆಯನ್ನು ಅವರು ಹೊಂದಿದ್ದಾರೆ. ಹಾಗಾಗಿ, ತಳ ಮಟ್ಟದಲ್ಲಿ ಹಿಂಸಾಚಾರ ನಡೆಸುವ ಹಿಂದುತ್ವದ ಕಾಲಾಳುಗಳ ಮೇಲೆ ಸಂಘದ ಮುಖ್ಯಸ್ಥರ ಮಾತುಗಳು ಪರಿಣಾಮ ಬೀರಬಹುದು ಎಂಬುದಾಗಿ ಅವರು ಭಾವಿಸಿದ್ದಾರೆ.

ವಾಸ್ತವವಾಗಿ, ಜ್ಞಾನವಾಪಿ ಮಸೀದಿ ಪ್ರಕರಣದ ದೂರುದಾರರು ಸಾಧಾರಣ ಭಕ್ತರಲ್ಲ. ತಮ್ಮ ದೇವರ ಮೇಲಿನ ಭಕ್ತಿಯಿಂದಾಗಿ, ಮಸೀದಿಯನ್ನು ತಮ್ಮ ಮಂದಿರವನ್ನಾಗಿ ಮಾಡುವಂತೆ ಕೋರಿ ನ್ಯಾಯಾಲಯಕ್ಕೆ ಹೋದ ಸಾಮಾನ್ಯ ಭಕ್ತರಲ್ಲ.

Scroll.inನಲ್ಲಿ ಮೇ 20ರಂದು ಪ್ರಕಟಗೊಂಡಿರುವ ವರದಿಯ ಪ್ರಕಾರ, ಈ ದೂರುದಾರರ ನಾಯಕ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)ನ ಓರ್ವ ಸದಸ್ಯನೊಂದಿಗೆ ನಂಟು ಹೊಂದಿದ್ದಾರೆ. ಅದೇ ರೀತಿ, ಇತರ ಸ್ಥಳಗಳಲ್ಲೂ, ಮಸೀದಿಗಳನ್ನು ದೇವಸ್ಥಾನಗಳನ್ನಾಗಿ ಮಾಡುವಂತೆ ಹೋರಾಡುತ್ತಿರುವ ಜನರು ಯಾವುದಾದರೊಂದು ರೀತಿಯಲ್ಲಿ ಆರೆಸ್ಸೆಸ್‌ಗೆ ಸೇರಿದ ಸಂಘಟನೆಯೊಂದರ ಜೊತೆ ನಂಟು ಹೊಂದಿದ್ದಾರೆ.

ಕೆಲವರಂತೂ ಆರೆಸ್ಸೆಸ್ ಮುಖ್ಯಸ್ಥರನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಅವರ ಭಾಷಣವು ಹೊಸ ಶಕೆಯ ಉದಯ ಎಂಬುದಾಗಿ ಭಾವಿಸಿದ್ದಾರೆ. ಆದರೆ, ಅವರ ಭಾಷಣವು ಎಷ್ಟರ ಮಟ್ಟಿಗೆ ಪರಿಸ್ಥಿತಿಯನ್ನು ಸುಧಾರಿಸಬಹುದು ಎನ್ನುವುದು ಇವರಿಗೆ ಗೊತ್ತಿಲ್ಲ.

ಹಿಂದೂಯೇತರರ ಆರಾಧನಾ ಸ್ಥಳಗಳನ್ನು ದೇವಾಲಯಗಳನ್ನಾಗಿ ಪರಿವರ್ತಿಸುವ ಅಭಿಯಾನಕ್ಕೆ ತಡೆ ವಿಧಿಸಲು ಅವರು ಕರೆ ನೀಡುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಅವರನ್ನು ಶ್ಲಾಘಿಸಲಾಗುತ್ತಿದೆಯೇ? ಅಥವಾ, ಮಸೀದಿಗಳನ್ನು ದೇವಸ್ಥಾನಗಳಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸುವ ಯಾವುದೇ ಅಭಿಯಾನವನ್ನು ಆರೆಸ್ಸೆಸ್ ಆರಂಭಿಸುವುದೂ ಇಲ್ಲ, ಅಂತಹ ಚಳವಳಿಯಲ್ಲಿ ಭಾಗವಹಿಸುವುದೂ ಇಲ್ಲ ಎಂಬುದಾಗಿ ಅವರು ಹೇಳಿರುವುದಕ್ಕಾಗಿ ಶ್ಲಾಘಿಸಲಾಗುತ್ತಿದೆಯೇ? ಅಥವಾ ನ್ಯಾಯಾಲಯಗಳಲ್ಲಿ ನಂಬಿಕೆ ಇಡಿ ಎಂಬುದಾಗಿ ತನ್ನ ಅನುಯಾಯಿಗಳಿಗೆ ಕರೆ ನೀಡಿರುವುದಕ್ಕಾಗಿಯೇ? ಅಥವಾ ನ್ಯಾಯಾಲಯಗಳ ತೀರ್ಪುಗಳಿಗೆ ಎಲ್ಲರೂ ತಲೆಬಾಗುತ್ತಾರೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿರುವುದಕ್ಕಾಗಿಯೇ?

ರಾಮ ಜನ್ಮಭೂಮಿ ಚಳವಳಿಯು ಒಂದು ಅಪವಾದ ಎಂದು ಭಾಗವತ್ ಹೇಳುತ್ತಾರೆ. ಒಮ್ಮೆ ಆರೆಸ್ಸೆಸ್ ತನ್ನ ಘೋಷಿತ ನೀತಿಗೆ ವಿರುದ್ಧವಾಗಿ, ಹಿಂದೂಗಳ ಭಾವನೆಗಳನ್ನು ಗೌರವಿಸಿ ಆ ಚಳವಳಿಯಲ್ಲಿ ಭಾಗವಹಿಸಿತು. ಹಿಂದೂಗಳ ಸಂಘಟನೆಯೊಂದು ಹಿಂದೂಗಳ ಭಾವನೆಯನ್ನು ನಿರ್ಲಕ್ಷಿಸಲು ಹೇಗೆ ಸಾಧ್ಯ? ಆದರೆ ಅದು ಒಂದು ಬಾರಿಯ ಅಪವಾದ. ಅಲ್ಲಿ ತನ್ನ ಗುರಿಯನ್ನು ಸಾಧಿಸಿದ ಬಳಿಕ, ಆರೆಸ್ಸೆಸ್ ತನ್ನ ಪ್ರಧಾನ ಕಾರ್ಯವಾದ ವ್ಯಕ್ತಿತ್ವ ನಿರ್ಮಾಣಕ್ಕೆ ಮರಳಿತು ಎಂದು ಅವರು ಹೇಳಿಕೊಂಡಿದ್ದಾರೆ.

ಚಾರಿತ್ರ ನಿರ್ಮಾಣದ ತನ್ನ ಕೆಲಸದ ಮೇಲೆ ಹೆಚ್ಚಿನ ಗಮನ ಹರಿಸಲು ಆರೆಸ್ಸೆಸ್ ಬಯಸಿದೆ ಎಂದು ಭಾಗವತರು ಹೇಳಿದ್ದಾರೆ. ಆದರೆ ಅವರು ಹೇಳುವ ‘ವ್ಯಕ್ತಿ’ ನಮಗೆ ಗೊತ್ತಿರುವ ಒಬ್ಬ ಸಾಮಾನ್ಯ ‘ವ್ಯಕ್ತಿ’ಯಲ್ಲ. ಆರೆಸ್ಸೆಸ್ ನಿಘಂಟಿನಲ್ಲಿ ಅದಕ್ಕೆ ಸ್ಪಷ್ಟ ಅರ್ಥವಿದೆ. ಅದರ ಪ್ರಕಾರ, ‘ವ್ಯಕ್ತಿ’ ಎಂದರೆ ಒಂದು ಗುಂಪಿನಂತೆ ಯೋಚಿಸುವ ಮತ್ತು ವರ್ತಿಸುವ ಮನುಷ್ಯ.

ಈ ಬಾರಿ, ಭಾಗವತರ ಭಾಷಣಕ್ಕೆ ಪತ್ರಿಕೆಗಳು ಎಚ್ಚರಿಕೆಯ ಪ್ರತಿಕ್ರಿಯೆ ನೀಡಿರುವುದು ಕುತೂಹಲಕರವಾಗಿದೆ. ಜೂನ್ 4ರ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಸಂಪಾದಕೀಯವು, ಭಾಷಣವನ್ನು ಸ್ವಾಗತಿಸುತ್ತಾ ಎಚ್ಚರಿಕೆಯನ್ನೂ ನೀಡುತ್ತದೆ. ‘‘ಹಿಂದೆ ಆರಾಧನಾ ಸ್ಥಳಗಳಿಗೆ ಸಂಬಂಧಿಸಿದ ಹಿಂದೂ-ಮುಸ್ಲಿಮ್ ವಿವಾದಗಳು ಯಾವ ತಿರುವುಗಳನ್ನು ಪಡೆದವು ಮತ್ತು ಅವುಗಳಲ್ಲಿ ಆರೆಸ್ಸೆಸ್ ವಹಿಸಿದ ಸಂಶಯಾಸ್ಪದ ರಾಜಕಾರಣವನ್ನು ಗಮನದಲ್ಲಿಟ್ಟುಕೊಂಡರೆ, ಭಾಗವತ್ ಏನು ಹೇಳಿದರು ಮತ್ತು ಅವರ ಆಲೋಚನೆ ಏನಾಗಿತ್ತು ಎಂಬ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗಬಾರದು’’.

ಇಂತಹ ಸಂಶಯಕ್ಕೆ ಒಂದು ಕಾರಣವಿದೆ. 2018ರಲ್ಲಿ, ಗೋಳ್ವಾಲ್ಕರ್‌ರ ‘ಬಂಚ್ ಆಫ್ ಥಾಟ್ಸ್’ ಪುಸ್ತಕವು ಅಪ್ರಸ್ತುತವಾಗಿದೆ ಎಂಬ ಅರ್ಥದಲ್ಲಿ ಭಾಗವತ್ ಮಾತನಾಡಿದರು. ಆ ಪುಸ್ತಕದಲ್ಲಿ ಮುಸ್ಲಿಮರನ್ನು ಶತ್ರುಗಳು ಎಂಬುದಾಗಿ ಕರೆಯಲಾಗಿದೆ. ಆಗ ಭಾಗವತರನ್ನು ಒಂದು ರೀತಿಯ ಕ್ರಾಂತಿಕಾರಿ ಎಂಬುದಾಗಿ ವ್ಯಾಪಕವಾಗಿ ಬಣ್ಣಿಸಲಾಯಿತು. ‘‘ಆದರೆ, ಅವರ ಕ್ರಾಂತಿಕಾರಿಯೆನ್ನಲಾದ ಮಾತುಗಳು ರಾಜಕೀಯ ಮಟ್ಟದಲ್ಲಿ ಯಾವುದೇ ಬದಲಾವಣೆಗಳನ್ನು ತರಲಿಲ್ಲ’’ ಎಂಬುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಸಂಪಾದಕೀಯವು ಹೇಳುತ್ತದೆ.

ಆರೆಸ್ಸೆಸ್ ಒಂದು ಘೋಷಣೆಯನ್ನು ಹೊರಡಿಸುವುದು. ಅದು ನಮ್ಮ ಒಳ್ಳೆಯ ಮನಸ್ಸಿನ ಗೆಳೆಯರಲ್ಲಿ ವ್ಯಾಪಕ ಸಂಭ್ರಮವನ್ನು ಸೃಷ್ಟಿಸುವುದು. ಆದರೆ ಬಳಿಕ ಅದು ನಿರಾಶೆಯಲ್ಲಿ ಕೊನೆಗೊಳ್ಳುವುದು ಸಾಮಾನ್ಯ ಸಂಗತಿಯೆಂಬಂತಾಗಿದೆ. ಆರೆಸ್ಸೆಸ್‌ನ ಕಾರ್ಯವಿಧಾನವನ್ನು ಅರ್ಥಮಾಡಿಕೊಳ್ಳುವಲ್ಲಿನ ಅವರ ವೈಫಲ್ಯ ಅಥವಾ ಆರೆಸ್ಸೆಸ್ ಮೂಲತಃ ಒಂದು ಫ್ಯಾಶಿಸ್ಟ್ ಸಂಘಟನೆ ಎನ್ನುವುದನ್ನು ನಂಬಲು ಅವರು ನಿರಾಕರಿಸುವುದು ಇದಕ್ಕೆ ಕಾರಣವಾಗಿರಬಹುದು.

ಬಹುಶಃ ಇದಕ್ಕೆ ಕಾರಣ ನಾವು ಘಟನೆಗಳಿಗೆ ಅನುಗುಣವಾಗಿ ಯೋಚಿಸುವುದು. ಒಂದು ದಿನ ಗೋರಕ್ಷಣೆ ಹೆಸರಿನಲ್ಲಿ ಮುಸ್ಲಿಮರನ್ನು ಹೊಡೆದು ಕೊಲ್ಲುವ ಹೀನ ಕೃತ್ಯಕ್ಕೆ ನಾವು ಪ್ರತಿಕ್ರಿಯಿಸುತ್ತೇವೆ. ಇನ್ನೊಂದು ದಿನ ಹಿಂದೂಗಳ ಹಬ್ಬದ ಸಂದರ್ಭದಲ್ಲಿ ಮೆರವಣಿಗೆಗಳನ್ನು ಮುಸ್ಲಿಮರು ವಾಸಿಸುವ ಸ್ಥಳಗಳಿಗೆ ಬಲವಂತವಾಗಿ ತೆಗೆದುಕೊಂಡು ಹೋಗಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದನ್ನು ನೋಡುತ್ತೇವೆ. ಇನ್ನೊಂದು ದಿನ ಕ್ರೈಸ್ತರು ಮತ್ತು ಅವರ ಚರ್ಚ್‌ಗಳ ಮೇಲೆ ದಾಳಿ ನಡೆಯುತ್ತದೆ. ಮತ್ತೊಮ್ಮೆ ‘ಲವ್ ಜಿಹಾದ್’ ಹೆಸರಿನಲ್ಲಿ ಮದುವೆಯಾಗಿರುವ ಮುಸ್ಲಿಮ್ ಪುರುಷರು ಮತ್ತು ಹಿಂದೂ ಮಹಿಳೆಯರ ಮೇಲೆ ದಾಳಿ ನಡೆಯುತ್ತದೆ.

ಈ ಎಲ್ಲ ಘಟನೆಗಳನ್ನು ಬೆಸೆಯುವ ಸಾಮಾನ್ಯ ನಂಟೊಂದನ್ನು ನೋಡುವಲ್ಲಿ ನಾವು ವಿಫಲರಾಗಿದ್ದೇವೆ. ಆರೆಸ್ಸೆಸ್‌ನ ಸಿದ್ಧಾಂತವೇ ಈ ಎಲ್ಲ ಘಟನೆಗಳನ್ನು ಜೊತೆಗೂಡಿಸುವ ನೂಲು. ‘ಹಿಂದೂಗಳು ಹಿಂದೂವಿನಲ್ಲಿ ನಂಬಿಕೆ ಇಡಬೇಕು; ಹಿಂದೂ ಎಂದರೆ ಭಾರತ’ ಎಂಬುದಾಗಿ ಆರೆಸ್ಸೆಸ್ ಸಿದ್ಧಾಂತ ಹೇಳುತ್ತದೆ. ಹಿಂದೂಗಳು ಈ ದೇಶದ ಪ್ರಥಮ ‘ಮಾಲಕರು’ ಎಂಬ ಕಲ್ಪನೆಯನ್ನು ಅದು ಬಿತ್ತುತ್ತದೆ.

ಭಾಗವತ್ ತನ್ನ ಭಾಷಣದಲ್ಲಿ ಹೇಳುತ್ತಾರೆ: ‘‘ಈ ದೇಶಕ್ಕೆ ನಂತರ ಬಂದವರು ಅಥವಾ ಭಾರತದ ಹೊರಗಿನ ಆರಾಧನಾ ವಿಧಾನಗಳನ್ನು ಅಳವಡಿಸಿಕೊಂಡವರಿಗೆ ಹಿಂದೂ ಆರಾಧನಾ ವಿಧಾನವನ್ನು ಗೌರವಿಸುವ ಹೆಚ್ಚುವರಿ ಜವಾಬ್ದಾರಿಯಿದೆ. ಹಿಂದೂ ಆರಾಧನಾ ವಿಧಾನವೆಂದರೆ ಮಾನವ ಧರ್ಮ (ಜಾಗತಿಕ ಧರ್ಮ).’’ ಅವರ ಪ್ರಕಾರ, ಹಿಂದೂ ಧರ್ಮವು ಇತರ ಧರ್ಮಗಳಿಗಿಂತ ದೊಡ್ಡದು. ಅಂದರೆ ಹಿಂದೂ ಧರ್ಮವು ವಾಸ್ತವಿಕವಾಗಿ ಮಾನವ ಧರ್ಮ.

ಸಮಸ್ಯೆಗಳನ್ನು ಸೃಷ್ಟಿಸುತ್ತಿರುವವರು ‘‘ಅವರು’’ ಎಂಬುದಾಗಿ ಭಾಗವತ್ ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದೂಗಳು ಸಾಮಾನ್ಯವಾಗಿ ತಮ್ಮನ್ನು ನಿಯಂತ್ರಿಸಿಕೊಳ್ಳುತ್ತಾರೆ. ಅವರ ಮಾತುಗಳು ಪ್ರತಿಯೊಂದು ಹಿಂಸಾಪೀಡಿತ ಸ್ಥಳಗಳಲ್ಲಿ ದೊಂಬಿಕೋರರು ಹೇಳುವ ಮಾತುಗಳನ್ನು ಪುಷ್ಟೀಕರಿಸುತ್ತದೆ. ಆ ಮಾತುಗಳ ಮಾದರಿ ಹೀಗಿದೆ: ‘‘ನಿನ್ನ ಮಸೀದಿ ನನಗೆ ಸೇರಿದ್ದೆಂದು ನಾನು ಭಾವಿಸಿದ್ದೇನೆ. ಅದನ್ನು ನಿರಾಕರಿಸುವ ಮೂಲಕ ನೀನು ಗಲಾಟೆ ಸೃಷ್ಟಿಸುತ್ತಿ. ನನಗೆ ಸತ್ಯವೆಂದು ಅನಿಸಿದ ಮಾತುಗಳನ್ನು ನಾನು ಹೇಳುತ್ತಿದ್ದೇನೆ. ಆದರೆ ನೀನು ವಿವಾದವನ್ನು ಸೃಷ್ಟಿಸುತ್ತಿರುವೆ’’.

ಇದೆಲ್ಲವೂ ಅತ್ಯಂತ ಸ್ಪಷ್ಟವಾಗಿದೆ. ಹಿಂದೂ/ಭಾರತೀಯರು ಶ್ರೇಷ್ಠರು ಎಂಬ ಕಲ್ಪನೆಯನ್ನು ಬೋಧಿಸುವ ಮೂಲಕ ಮತ್ತು ಮುಸ್ಲಿಮರು ಹಿಂದೂ ಮೂಲದಿಂದ ಬಂದವರು ಎಂದು ಹೇಳುವ ಮೂಲಕ ಆರೆಸ್ಸೆಸ್ ಮುಸ್ಲಿಮರನ್ನು ಅಪಹಾಸ್ಯಗೈಯುತ್ತಿದೆ ಹಾಗೂ ತಮ್ಮ ಮೂಲ ಸಂಸ್ಕೃತಿ ಹಿಂದೂ ಅಲ್ಲದೆ ಬೇರೇನೂ ಅಲ್ಲ ಎನ್ನುವುದನ್ನು ಒಪ್ಪಿಕೊಳ್ಳುವಂತೆ ಅವರನ್ನು ಬಲವಂತಪಡಿಸುತ್ತಿದೆ. ‘‘ಆರೆಸ್ಸೆಸ್ ಹಿಂದೂ ಮನಸ್ಸುಗಳನ್ನು ಸಿದ್ಧಪಡಿಸುವಲ್ಲಿ ನಿರತವಾಗಿದೆ’’ ಎಂಬುದಾಗಿ ಭಾಗವತ್ ಹೇಳುತ್ತಾರೆ. ಅವರು ಹೇಳುವುದು ಸರಿಯೂ ಹೌದು. ಆರೆಸ್ಸೆಸ್‌ನ ಈ ಕೃತ್ಯವು ಇತರ ಸಮುದಾಯಗಳು ಮತ್ತು ಜಗತ್ತಿಗೆ ಅತ್ಯಂತ ಅಪಾಯಕಾರಿಯಾಗಿದೆ.

ಶಾಖೆಗಳಲ್ಲಿ, ಸರಸ್ವತಿ ಶಿಶು ಮಂದಿರಗಳಲ್ಲಿ, ದುರ್ಗಾ ವಾಹಿನಿಯಲ್ಲಿ, ಬಜರಂಗ ದಳದಲ್ಲಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ, ಸಂಸ್ಕಾರ ಭಾರತಿಯಲ್ಲಿ ಮತ್ತು ಸಂಘ ಪರಿವಾರದಡಿ ಬರುವ ಇಂತಹ ಹತ್ತಾರು ಸಂಘಟನೆಗಳಲ್ಲಿ ಇದೇ ಮನಸ್ಥಿತಿಯನ್ನು ರೂಪಿಸಲಾಗುತ್ತಿದೆ. ಹಿಂದೂ/ಭಾರತೀಯರು ಶ್ರೇಷ್ಠರು ಎಂಬ ಕಲ್ಪನೆಯನ್ನು ಅನುಷ್ಠಾನಗೊಳಿಸುವಾಗ ಎದುರಾಗುವ ಯಾವುದೇ ರೀತಿಯ ಹಿಂಸಾ ಕೃತ್ಯದಲ್ಲಿ ಪಾಲ್ಗೊಳ್ಳಲು ಅಥವಾ ಹಿಂಸಾಚಾರವನ್ನು ಸೃಷ್ಟಿಸಲು ಈ ಮನಸ್ಥಿತಿ ಸದಾ ಸಿದ್ಧವಾಗಿರುತ್ತದೆ.

ಈ ಸುದೀರ್ಘ ‘ತಾಲೀಮು’ ಆರೆಸ್ಸೆಸ್‌ನ ಮಾರ್ಗದರ್ಶನದಲ್ಲಿ ನಡೆಯುತ್ತದೆ ಹಾಗೂ ಇದು ನಾವು ಒಂದರ ನಂತರ ಒಂದರಂತೆ ನೋಡುತ್ತಿರುವ ಹಿಂಸಾತ್ಮಕ ಘಟನೆಗಳಿಗೆ ಕಾರಣವಾಗುತ್ತದೆ. ಬಳಿಕ, ಅದು ಮುಸ್ಲಿಮರ ಹಟಮಾರಿತನಕ್ಕೆ ಅಥವಾ ಇತಿಹಾಸದ ಕಲ್ಪಿತ ಅನ್ಯಾಯಗಳಿಗೆ ಪ್ರತಿಕ್ರಿಯೆಯಾಗಿದೆ ಹಾಗೂ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಲು ಅದು ಅಗತ್ಯವಾಗಿದೆ ಎಂಬ ವಿವರಣೆಗಳನ್ನು ಅದಕ್ಕೆ ನೀಡಲಾಗುತ್ತದೆ.

ಇಂತಹ ಹಿಂಸಾಚಾರದ ಕೃತ್ಯಗಳನ್ನು ನಡೆಸಲು ಆರೆಸ್ಸೆಸ್ ಯಾವುದೇ ನಿರ್ಣಯವನ್ನು ಅಂಗೀಕರಿಸುವುದಿಲ್ಲ. ಇಂತಹ ಕೃತ್ಯಗಳನ್ನು ನಡೆಸುವುದು ಅದು ಸಿದ್ಧಪಡಿಸಿದ ‘ವ್ಯಕ್ತಿಗಳು’. ಇಂತಹ ಕೃತ್ಯಗಳಿಗಾಗಿ ಆರೆಸ್ಸೆಸ್ ಯಶಸ್ಸಿನ ಶ್ರೇಯವನ್ನೂ ಪಡೆಯುವುದಿಲ್ಲ.

ಉದಾಹರಣೆಗೆ; ನಾಥೂರಾಮ್ ಗೋಡ್ಸೆಯ ಕೃತ್ಯಕ್ಕೆ ಆರೆಸ್ಸೆಸ್ ಯಶಸ್ಸಿನ ಶ್ರೇಯವನ್ನು ಪಡೆದುಕೊಂಡಿದೆಯೇ? ಆದರೂ, ಗೋಡ್ಸೆಯ ಮನೋಸ್ಥಿತಿಯನ್ನು ಆರೆಸ್ಸೆಸ್‌ನ ಶಾಖೆಗಳು ಮತ್ತು ಬೌದ್ಧಿಕ್‌ಗಳಲ್ಲಿ ಸೃಷ್ಟಿಸಲಾಗುತ್ತದೆ. ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ ನಡೆದಿರುವ ಹಲವಾರು ಹಿಂಸಾ ಕೃತ್ಯಗಳಿಗೆ ಆರೆಸ್ಸೆಸ್ ಯಶಸ್ಸಿನ ಶ್ರೇಯವನ್ನು ಕೋರಿದೆಯೇ? ಆದರೆ ಅದು ಸಿದ್ಧಪಡಿಸಿದ ವ್ಯಕ್ತಿಗಳಿಲ್ಲದೆ ಇಂತಹ ಕೃತ್ಯಗಳು ಸಾಧ್ಯವಿತ್ತೇ?

ಈ ದ್ವೇಷ ಉತ್ಪಾದಕ ಕಾರ್ಖಾನೆಯ ಸೈದ್ಧಾಂತಿಕ ಮೇಲುಸ್ತುವಾರಿಯಾಗಿರುವ ವ್ಯಕ್ತಿಯು ಶಾಂತಿ ಬಯಸುತ್ತಾನೆ ಎಂದು ಭಾವಿಸುವುದು ಮುಗ್ಧತನವಾಗುತ್ತದೆ.

ಕೃಪೆ: thewire.in

Writer - ಅಪೂರ್ವಾನಂದ್

contributor

Editor - ಅಪೂರ್ವಾನಂದ್

contributor

Similar News