ಸಿದ್ದಾಪುರ: ವೃದ್ಧ ದಂಪತಿಯನ್ನು ಕೋಣೆಯಲ್ಲಿ ಕೂಡಿಹಾಕಿ ದುಷ್ಕರ್ಮಿಗಳ ತಂಡದಿಂದ ದರೋಡೆ

Update: 2022-06-09 07:37 GMT

ಸಿದ್ದಾಪುರ, ಜೂ.9: ವೃದ್ಧ ದಂಪತಿಯನ್ನು ಕೋಣೆಯಲ್ಲಿ ಕೂಡಿಹಾಕಿ 2 ಲಕ್ಷ ರೂ. ನಗದು ಹಾಗೂ 38 ಸಾವಿರ ರೂ. ಬೆಲೆಬಾಳುವ ಚಿನ್ನವನ್ನು ದರೋಡೆ ಮಾಡಿರುವ ಘಟನೆ ಸಿದ್ದಾಪುರ ಸಮೀಪದ ಮಾಲ್ದಾರೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆಯ (ಬಾಡಗ) ತಂಗಪ್ಪಣ್ಣ ಹಾಗೂ ಜಾನಕಿ ದಂಪತಿ ಮನೆಗೆ ಬುಧವಾರ ರಾತ್ರಿ ಅಂದಾಜು 9 ಗಂಟೆಗೆ ಮೂರು ಮಂದಿ ಮುಸುಕು ದಾರಿಗಳು ದಾಳಿ ಮಾಡಿದ್ದಾರೆ. ಮನೆಯ ಹಿಂಬದಿಯ ಬಾಗಿಲು ಮೂಲಕ ಒಳಗೆ ಪ್ರವೇಶಿಸಿದ ದರೋಡೆಕೋರರು ಆಯುಧಗಳನ್ನು ತೋರಿಸಿ ಚಿನ್ನ ಹಾಗೂ ನಗದು ಎಲ್ಲಿಟ್ಟಿದ್ದೀರಿ ಎಂದು ಬೆದರಿಸಿ, ದಂಪತಿಯನ್ನು ಮನೆಯ  ಕೋಣೆಯೊಂದರಲ್ಲಿ ಕೂಡಿ ಹಾಕಿದರು ಎನ್ನಲಾಗಿದೆ.

ಬಳಿಕ ದರೋಡೆಕೋರರು ಮನೆಯಲ್ಲಿದ್ದ 2 ಲಕ್ಷ ರೂ. ದೋಚಿದ್ದಾರೆ. ಕೊನೆಯಲ್ಲಿ ಜಾನಕಿ ಅವರ ಕುತ್ತಿಗೆಯಲ್ಲಿದ್ದ ಸರವನ್ನು ಎಳೆದಾಡಿದ್ದಾರೆ. ಪರಿಣಾಮ ಅರ್ಧ ಭಾಗ ಸರ ದರೋಡೆಕೋರರ ಕೈ ಸೇರಿದೆ. ದರೋಡೆಕೋರರು ಹಿಂದಿ ಹಾಗೂ ಕನ್ನಡದಲ್ಲಿ ಮಾತನಾಡಿದರು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಎಂ.ಎ ಅಯ್ಯಪ್ಪ, ಡಿ.ವೈ.ಎಸ್.ಪಿ ಗಜೇಂದ್ರ ಪ್ರಸಾದ್, ಸಿ.ಐ ವೆಂಕಟೇಶ್, ಪಿ.ಎಸ್.ಐ ಮೋಹನ್ ರಾಜ್ ಭೇಟಿ ನೀಡಿ, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News