×
Ad

ಜೆಡಿಎಸ್ ಗೆ ಅಡ್ಡ ಮತದಾನದ ಭಯವಿಲ್ಲ, ಅಡ್ಡ ಮತದಾನ ಮಾಡಿಸಿದರೂ ಕಾಂಗ್ರೆಸ್ ಗೆಲ್ಲಲ್ಲ ಎಂದ ಕುಮಾರಸ್ವಾಮಿ

Update: 2022-06-09 17:42 IST

ಬೆಂಗಳೂರು, ಜೂ.9: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿಸಿದರೂ ಕಾಂಗ್ರೆಸ್ ಗೆಲ್ಲಲು ಸಾಧ್ಯವೇ ಇಲ್ಲ. ನಮಗೆ ಅಡ್ಡ ಮತದಾನದ ಆತಂಕವೂ ಇಲ್ಲ, ಭಯವೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಗುರುವಾರ ನಗರದಲ್ಲಿರುವ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮತ ನೀಡುವಂತೆ ಕೋರಿ ಜೆಡಿಎಸ್ ಶಾಸಕರಿಗೆ ಪತ್ರ ಬರೆದಿರುವುದು ನಾಚಿಕೆಗೇಡು ಎಂದು ಹರಿಹಾಯ್ದರು.

ಅವರು ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಜೆಡಿಎಸ್ ಪಕ್ಷದ ಎರಡೂ ಕಣ್ಣು ಹೋಗಲಿ ಎನ್ನುವಂತೆ ವರ್ತನೆ ಮಾಡುತ್ತಿದ್ದಾರೆ. ಕೇವಲ ಬಿಜೆಪಿ ಗೆಲ್ಲಲು ಅನುಕೂಲ ಮಾಡುತ್ತಿದ್ದಾರೆ. ರಾಜ್ಯಸಭೆ ಚುನಾವಣೆ ಫಲಿತಾಂಶ ಬಂದ ಮೇಲೆ ಬಿಜೆಪಿ ‘ಬಿ’ ಟೀಮ್ ಯಾವುದು ಎನ್ನುವುದು ಅರ್ಥ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ನಮ್ಮ ಪಕ್ಷದ 32 ಶಾಸಕರು ನಮ್ಮ ಜತೆಯಲ್ಲೇ ಇದ್ದಾರೆ. ಮುಂದಿನ ಚುನಾವಣೆ ಬರುವವರೆಗೆ ನಮ್ಮ ಶಾಸಕರು ನಮ್ಮ ಜತೆಯೇ ಇರುತ್ತೇವೆಂದು ಹೇಳಿದ್ದಾರೆ. ಬೇರೆ ಪಕ್ಷದವರು ನನ್ನ ಸಂಪರ್ಕದಲ್ಲಿ ಯಾರು ಇಲ್ಲ. ನನ್ನ ಆತ್ಮೀಯರಾದ ಕೆಲ ಕಾಂಗ್ರೆಸ್ ಶಾಸಕರಿಗೆ ನಮಗೆ ಎರಡನೇ ಪ್ರಾಶಸ್ತ್ಯದ ಮತ ನೀಡಲು ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಜತೆ ನಾನು ದೂರವಾಣಿಯಲ್ಲಿ ಮಾತಾಡಿದ್ದು ಸತ್ಯ. ಜೆಡಿಎಸ್ ಎರಡನೇ ಪ್ರಾಶಸ್ತ್ಯ ಮತ ಕಾಂಗ್ರೆಸ್ ಅಭ್ಯರ್ಥಿಗೆ ಕೊಡಿ ಎಂದು ಮನವಿ ಮಾಡಿಕೊಂಡರು. ನಾವು ಎರಡನೇ ಪ್ರಾಶಸ್ತ್ರ ಮತ ಕೊಟ್ಟರೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲ್ಲ. ಹೀಗಾಗಿ ನಮ್ಮ ಅಭ್ಯರ್ಥಿಗೆ ನಿಮ್ಮ ಎರಡನೇ ಪ್ರಾಶಸ್ತ್ರ ಮತ ಕೊಡಿ ಎಂದು ಮನವಿ ಮಾಡಿಕೊಂಡಿದ್ದೇನೆ. ಅವರು ಏನು ಮಾಡುತ್ತಾರೆ ನೋಡೋಣ ಎಂದು ಕುಮಾರಸ್ವಾಮಿ ತಿಳಿಸಿದರು.

ಸಿದ್ದರಾಮಯ್ಯ ನಮ್ಮ ಪಕ್ಷದ ಶಾಸಕರಿಗೆ ಹೇಗೆ ಪತ್ರ ಬರೆಯುತ್ತಾರೆ. ಒಂದು ಕಡೆ ಜೆಡಿಎಸ್ ಪಕ್ಷ ಬಿಜೆಪಿಯ ‘ಬಿ’ ಟೀಮ್ ಎಂದು ಟೀಕೆ ಮಾಡುತ್ತಾರೆ. ಇನ್ನೊಂದು ಕಡೆ ನಮ್ಮದೇ ಶಾಸಕರಿಗೆ ಪತ್ರ ಬರೆದು ಮತ ಕೇಳುತ್ತಾರೆ. ಅವರಿಗೆ ಕೊಂಚವಾದರೂ ನಾಚಿಕೆ ಬೇಡವೇ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಒಂದು ಕಾಲದಲ್ಲಿ ಸಿದ್ದರಾಮಯ್ಯ ಬಿಜೆಪಿಗೆ ಟವೆಲ್ ಹಾಕಿದ್ದರು. ಆತ್ಮಸಾಕ್ಷಿ ಇದ್ದರೆ ಸತ್ಯ ಹೇಳಲಿ ಈಗ. ಕಾಂಗ್ರೆಸ್ ಪಕ್ಷದಲ್ಲಿ ತಮಗೆ ಅಧಿಕಾರ ಸಿಗಲ್ಲ ಎಂದು 2009ರಲ್ಲೆ ಸಿದ್ದರಾಮಯ್ಯ ಹಾಗೂ ಅವರ ತಂಡ ಬಿಜೆಪಿ ಸೇರಲು ಪ್ರಯತ್ನ ಮಾಡಿದ್ದರು. ಈ ಸಂಬಂಧ ಎಲ್.ಕೆ.ಅಡ್ವಾಣಿ ಅವರೊಂದಿಗೆ ಚೌಕಾಸಿ ಮಾಡಿದ್ದರು. ಅದು ಸುಳ್ಳು ಎಂದು ಸಿದ್ದರಾಮಯ್ಯ ಹೇಳಲಿ ನೋಡೋಣ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

ಮೈತ್ರಿ ಸರಕಾರದಲ್ಲಿ ಇವರೆಲ್ಲ ಏನೇನು ಆಟ ಆಡಿದರು ಎಂಬುದು ಗೊತ್ತಿದೆ. ನಿಮಗೆ ಬೇಕಾದ ಖಾತೆಗಳು, ನಿಮಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಂಡು ಮೆರೆದರು. ಸಾಕಷ್ಟು ಒತ್ತಡ ಇದ್ದರೂ ರೈತರ ಸಾಲ ಮನ್ನಾ ಮಾಡಲು ನಾನು ಸುಮ್ಮನೆ ಇದ್ದೆ. ಎಲ್ಲವನ್ನೂ ಸಹಿಸಿಕೊಂಡಿದ್ದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಬರಲು ಸಿದ್ದರಾಮಯ್ಯನವರೇ ಕಾರಣ. ಈಗ ನೋಡಿದರೆ ಪಠ್ಯದ ಬಗ್ಗೆ ಧರಣಿ ಕೂತಿದ್ದಾರೆ ಎಂದು ಕುಮಾರಸ್ವಾಮಿ ಕುಟುಕಿದರು.

ನೀವು ಎಷ್ಟು ಬಾರಿ ಜೆಡಿಎಸ್‍ಗೆ ಬೆಂಬಲ ಕೊಟ್ಟಿದ್ದೀರಿ. ಧರಂಸಿಂಗ್ ಸಿಎಂ ಆಗಿದ್ದು ಯಾರ ಬೆಂಬಲದಿಂದ? ದೇವೆಗೌಡರು ಪ್ರಧಾನಿ ಆಗಿದ್ದು ಎಲ್ಲ ಮಿತ್ರಪಕ್ಷಗಳ ಬೆಂಬಲದಿಂದ. ಆಗ ನೀವು ಎಲ್ಲಿದ್ದೀರಿ ಸಿದ್ದರಾಮಯ್ಯನವರೇ? ಬೇರೆಯವರ ಬಳಿ ನಿಮ್ಮ ಆಟ ಆಡಿ, ನನ್ನ ಹತ್ತಿರ ಅಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಅವರು ಗುಡುಗಿದರು.

ಕಾಂಗ್ರೆಸ್ ಪಕ್ಷದಲ್ಲಿ ನಾಮಕಾವಸ್ತೆಗೆ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿದ್ದಾರೆ. ಅವರ ಮಾತು ಏನು ನಡೆಯಲ್ಲ. ಕಾಂಗ್ರೆಸ್ ಹೈಕಮಾಂಡ್ ಮಾತು ಕೂಡ ನಡೆಯಲ್ಲ. ಇಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಒಬ್ಬರೇ ಇದ್ದಾರೆ. ಅವರ ಮಾತೇ ಇಲ್ಲಿ ನಡೆಯುವುದು ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷಕ್ಕೆ 2023ಕ್ಕೆ ಕೊನೆ ಮೊಳೆ ಹೊಡೆದು ಸಿದ್ದರಾಮಯ್ಯ ಹೋಗುತ್ತಾರೆ ಎಂದು ಕುಮಾರಸ್ವಾಮಿ, ನಿನ್ನೆ ರಾತ್ರಿ ನಾನು ಡಿ.ಕೆ.ಶಿವಕುಮಾರ್ ಜತೆ ದೂರವಾಣಿಯಲ್ಲಿ ಮಾತಾಡಿದ್ದು ಸತ್ಯ. ಇದರಲ್ಲಿ ಕದ್ದು ಮುಚ್ಚಿ ಇಡೋದು ಏನಿದೆ? ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News