ಮಡಿಕೇರಿ ಕೋರ್ಟ್‍ನಲ್ಲಿ ಶಂಕಿತ ನಕ್ಸಲ್ ಮುಖಂಡ ರೂಪೇಶ್ ವಿಚಾರಣೆ

Update: 2022-06-09 12:59 GMT

ಮಡಿಕೇರಿ ಜೂ.9 : ನಕ್ಸಲ್ ಸಂಘಟನೆಯ ಶಂಕಿತ ಮುಖಂಡ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಕ್ಸಲ್ ಪ್ರಕರಣವನ್ನು ಎದುರಿಸುತ್ತಿರುವ ರೂಪೇಶ್ ನನ್ನು ಬಿಗಿ ಭದ್ರತೆಯಲ್ಲಿ ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. 

ಕೇರಳ ರಾಜ್ಯದ ವೈವೂರು ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ರೂಪೇಶ್‍ನನ್ನು ಬುಧವಾರ ಸಂಜೆ ವೇಳೆಯಲ್ಲಿ ಮಡಿಕೇರಿಗೆ ಕರೆತಂದು ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು. ಗುರುವಾರ ಬೆಳಗೆ ಶಸ್ತ್ರ ಸಜ್ಜಿತ ಕೊಡಗು ಕಮಾಂಡೋ ಮತ್ತು ಕೇರಳ ಥಂಡರ್ ಬೋಲ್ಟ್ ಕಮಾಂಡೋಗಳ ಬಿಗಿ ಭದ್ರತೆಯಲ್ಲಿ ರೂಪೇಶ್‍ನನ್ನು ನ್ಯಾಯಾಲಯಕ್ಕೆ ಕರೆತರಲಾಯಿತು. ಪೊಲೀಸ್ ವಾಹನದಿಂದ ಕೆಳಗಿಳಿಯುತ್ತಿದ್ದಂತೆಯೇ ‘ಡೌನ್‍ಡೌನ್ ಸಿಲ್ವರ್ ಲೈನ್’. ‘ಕಮುನಿಸ್ಟ್ ಸರಕಾರಗಳು ನವ ಉದಾರವಾದಿ ನೀತಿಗೆ ಜೋತು ಬಿದ್ದಿವೆ’ ಎಂದು ಅಸಮಾಧಾನದ ಘೋಷಣೆ ಕೂಗಿ ನ್ಯಾಯಾಲಯ ಆವರಣ ಪ್ರವೇಶಿಸಿದ. 

ಪ್ರಕರಣ : 2013ರ ಫೆಬ್ರವರಿ 1 ರಂದು ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡ್ರೋಟು ಎಂಬ ಪ್ರದೇಶದಲ್ಲಿರುವ ಮಾಗುಂಡಿ ಎಂಬ ತೋಟದಲ್ಲಿ ರೂಪೇಶ್ ಮತ್ತಿತರರು ಕಾರ್ಮಿಕರಿಂದ ಬಲವಂತವಾಗಿ ದಿನ ಬಳಕೆ ವಸ್ತುಗಳನ್ನು ಪಡೆದು ಸ್ಥಳದಿಂದ ಕಾಲ್ಕಿತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 

ನಂತರ ನಡೆದ ಬೆಳವಣಿಗೆಯಲ್ಲಿ ರೂಪೇಶ್ ತಮಿಳುನಾಡಿನಲ್ಲಿ ಸೆರೆಸಿಕ್ಕಿದ್ದು, ವಿಚಾರಣೆ ಸಂದರ್ಭ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರೂಪೇಶ್ ವಿರುದ್ಧ ಪ್ರಕರಣ ದಾಖಲಾಗಿರುವುದು ಕಂಡು ಬಂದಿತ್ತು. ಈ ಕಾರಣದಿಂದ ಮಡಿಕೇರಿ ನ್ಯಾಯಾಲಯದಲ್ಲೂ ವಿಚಾರಣೆ ನಡೆಯುತ್ತಿದೆ. ಇಂದು ನ್ಯಾಯಾಧೀಶರು ಮುಂದಿನ ವಿಚಾರಣೆಯ ದಿನಾಂಕವನ್ನು ಜೂ.24ಕ್ಕೆ ನಿಗಧಿಪಡಿಸಿದರು.

ನಗರ ಠಾಣಾಧಿಕಾರಿ ದಿವಾಕರ್ ನೇತೃತ್ವದಲ್ಲಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು. ನ್ಯಾಯಾಲಯಕ್ಕೆ ಹಾಜರಾಗಿ ಹೊರ ಬಂದ ರೂಪೇಶ್‍ನನ್ನು ಪೊಲೀಸ್ ಸರ್ಪಗಾವಲಿನಲ್ಲಿ ಕೇರಳದ ವೈವೂರು ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News