ಪರಿಷ್ಕೃತ ಪಠ್ಯದಲ್ಲಿ 'ವಾಲ್ಮೀಕಿ ದಾರಿಗಳ್ಳನಾಗಿದ್ದ' ಎಂದು ಅವಮಾನ: ಪಠ್ಯವನ್ನು ಹಿಂಪಡೆಯುವಂತೆ ಒತ್ತಾಯ

Update: 2022-06-09 15:16 GMT
ಫೈಲ್ ಚಿತ್ರ- ಪ್ರಸನ್ನಾನಂದ ಸ್ವಾಮೀಜಿ 

ಬೆಂಗಳೂರು, ಜೂ.9: ರೋಹಿತ್ ಚಕ್ರತೀರ್ಥ ಎಂಬುವರ ಅಧ್ಯಕ್ಷತೆಯಲ್ಲಿ ನಡೆದಿರುವ ಪಠ್ಯ ಪರಿಷ್ಕರಣ ಪ್ರಕ್ರಿಯೆಯಲ್ಲಿ ಪೂಜ್ಯ ಮಹಾ ಋಷಿ ವಾಲ್ಮೀಕಿ, ಸುರಪುರದ ನಾಯಕರು ಮತ್ತು ಆದಿವಾಸಿಗಳಿಗೆ ಅವಮಾನ ಮಾಡಲಾಗಿದೆ. ಹಾಗಾಗಿ ಪರಿಷ್ಕೃತ ಪಠ್ಯವನ್ನು ಹಿಂಪಡೆಯಬೇಕು. ಸಮುದಾಯವನ್ನು ಅವಮಾನ ಮಾಡಿದ ವ್ಯಕ್ತಿ ಕ್ಷಮೆ ಕೇಳಬೇಕು. ಈ ರೀತಿಯ ತಪ್ಪುಗಳು ಮರುಕಳಿಸದಂತೆ ತಾವು ಎಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಹತ್ತನೇಯ ತರಗತಿಯ `ವೀರಲವ’ ಎಂಬ ಪಾಠದಲ್ಲಿ ಮಹಾಕವಿ ಶ್ರೀ ವಾಲ್ಮೀಕಿ ಕುರಿತು  `ಯೌವನಾವಸ್ಥೆಯಲ್ಲಿ ಬೇಡರ ಸಂಗಡ ಸೇರಿ ದಾರಿಗಳ್ಳನಾಗಿದ್ದ’ ಎಂದು ನಮೂದಿಸಲಾಗಿದೆ. ದೇಶದ ಮೂಲನಿವಾಸಿ ಬುಡಕಟ್ಟು ಸಮುದಾಯವಾಗಿರುವ ಬೇಡ ಸಮುದಾಯವನ್ನು `ಕಳ್ಳರಾಗಿದ್ದರು’ ಎಂಬಂತೆ ಬಿಂಬಿಸುವ ಮೂಲಕ ಇಡೀ ಬೇಡ, ವಾಲ್ಮೀಕಿ ಸಮುದಾಯಕ್ಕೆ ಅವಮಾನ ಮಾಡಲಾಗಿದೆ. ವಾಲ್ಮೀಕಿ ಸಮುದಾಯದ ಭಾವನೆಯನ್ನು ಕೆಣಕಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಹಿಂದಿನ ಸಾಲಿನ `ಸುರಪುರದ ನಾಯಕರು’ ಎಂಬ ಶೀರ್ಷಿಕೆಯಡಿ ದೊರೆ ಸಂಸ್ಥಾನದ ಕೊಡುಗೆಗಳನ್ನು ಪರಿಚಯಿಸಿದ್ದ ಪಾಠವನ್ನು ಈ ಬಾರಿ ಕೈಬಿಡಲಾಗಿದೆ. ರಾಜ್ಯದ ನಾಲ್ಕನೆಯ ಅತಿದೊಡ್ಡ ಸಮುದಾಯದ ಚರಿತ್ರೆ ಮತ್ತು ಪರಂಪರೆಯನ್ನು ಕಡೆಗಣಿಸಲಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಹತ್ತನೇ ತರಗತಿಯ ಕನ್ನಡ ಪಠ್ಯದಲ್ಲಿ `ಸ್ವಾಮಿ ವಿವೇಕಾನಂದ ಅವರ ಚಿಂತನೆಗಳು’ ಎಂಬ ಶೀರ್ಷಿಕೆಯಡಿ ಈ ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ `ಸಂಸ್ಕೃತಿ ಇಲ್ಲ’ ಎಂದು ಅಪಮಾನ ಮಾಡಿರುವುದು ಸಮರ್ಥನೀಯವಲ್ಲ ಎಂದು ಅವರು ಟೀಕಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News