ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತ: ಯು.ಟಿ.ಖಾದರ್

Update: 2022-06-09 15:19 GMT

ಬೆಂಗಳೂರು, ಜೂ.9: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಜೈರಾಮ್ ರಮೇಶ್ ಹಾಗೂ ಮನ್ಸೂರ್ ಅಲಿ ಖಾನ್ ಅವರ ಗೆಲುವು ನಿಶ್ಚಿತವಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಘೋಷಿಸುವ ಮುನ್ನವೆ ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್ ಖಾನ್ ಹಾಗೂ ನಮ್ಮ ಅಭ್ಯರ್ಥಿ ಮನ್ಸೂರ್ ಅಲಿ ಖಾನ್, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಬೆಂಬಲ ಯಾಚಿಸಿದ್ದಾರೆ ಎಂದರು.

ಆದರೆ, ನಂತರ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದ ಬೆನ್ನಲ್ಲೆ ಬಿಜೆಪಿ ಪಕ್ಷವು ತನ್ನ ಮೂರನೆ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ಈ ಹಿಂದೆ ಎಚ್.ಡಿ.ದೇವೇಗೌಡರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವುದು ಜೆಡಿಎಸ್ ಧರ್ಮ ಎಂದು ಖಾದರ್ ಹೇಳಿದರು.

ಕಾಂಗ್ರೆಸ್ ಪಕ್ಷ ಮನ್ಸೂರ್ ಅಲಿ ಖಾನ್ ಅವರನ್ನು ‘ಹರಕೆಯ ಕುರಿ’ ಮಾಡಿದೆ ಎಂಬ ಆಪಾದನೆ ಸತ್ಯಕ್ಕೆ ದೂರವಾದದ್ದು. ಅಲ್ಪಸಂಖ್ಯಾತರಿಗೆ ಸ್ಥಾನಮಾನ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಎಂದಿಗೂ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬಹುದಾಗಿದ್ದ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನವನ್ನು ಅಬ್ದುಲ್ ಜಬ್ಬಾರ್ ಅವರಿಗೆ ನೀಡಿದೆ ಎಂದು ಅವರು ತಿಳಿಸಿದರು.

ರಹ್ಮಾನ್‍ಖಾನ್ ಅವರಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಡಾ.ಸೈಯ್ಯದ್ ನಾಸೀರ್ ಹುಸೇನ್ ಅವರನ್ನು ಆಯ್ಕೆ ಮಾಡಲಾಯಿತು. ಸದ್ಯ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿದ್ದಾರೆ. ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಜೈರಾಮ್ ರಮೇಶ್ ಹಾಲಿ ಸದಸ್ಯರಾಗಿದ್ದು ಅವರಿಗೆ ಪುನಃ ಅವಕಾಶ ನೀಡಲಾಗಿದೆ. ಆಸ್ಕರ್ ಫೆರ್ನಾಂಡಿಸ್ ಅವರಿಂದ ತೆರವಾಗಿರುವ ಸ್ಥಾನಕ್ಕೆ ಮನ್ಸೂರ್ ಅಲಿ ಖಾನ್ ಅವರಿಗೆ ಅವಕಾಶ ನೀಡಲಾಗಿದೆ ಎಂದು ಅವರು ವಿವರಿಸಿದರು.

ಅಲ್ಪಸಂಖ್ಯಾತರು ಹಾಗೂ ಜಾತ್ಯತೀತತೆ ಬಗ್ಗೆ ಮಾತನಾಡುವ ಜೆಡಿಎಸ್ ನಾಯಕರು ತಮ್ಮ ಕೃತಿಯ ಮೂಲಕವು ಅದನ್ನು ಸಾಬೀತುಪಡಿಸಲಿ. ಜೆಡಿಎಸ್‍ನವರು ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಹೊಂದಿದ್ದರೆ ಕುಪೇಂದ್ರ ರೆಡ್ಡಿ ಬದಲಾಗಿ ತಮ್ಮ ಪಕ್ಷಕ್ಕಾಗಿ ಹಲವಾರು ವರ್ಷಗಳಿಂದ ದುಡಿಯುತ್ತಿರುವ ಝಫರುಲ್ಲಾ ಖಾನ್, ಬಿ.ಎಂ.ಫಾರೂಕ್ ಅಥವಾ ಸಿ.ಎಂ.ಇಬ್ರಾಹೀಂ ಅವರನ್ನು ಕಣಕ್ಕಿಳಿಸಬಹುದಾಗಿತ್ತು ಎಂದು ಖಾದರ್ ಹೇಳಿದರು.

ನಮ್ಮ ಅಭ್ಯರ್ಥಿಗಳಾದ ಜೈರಾಮ್ ರಮೇಶ್ ಹಾಗೂ ಮನ್ಸೂರ್ ಅಲಿ ಖಾನ್ ಅವರ ಗೆಲುವಿಗಾಗಿ ನಾವು ನಮ್ಮದೆ ಆದ ಚುನಾವಣಾ ತಂತ್ರಗಾರಿಕೆ ರೂಪಿಸಿದ್ದು, ಇಬ್ಬರೂ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News