ಮೂಡಿಗೆರೆ ಪಿಎಸ್ಸೈ ವರ್ಗಾವಣೆ ರದ್ದತಿಗೆ ಒತ್ತಾಯಿಸಿ ಐಜಿಗೆ ಪತ್ರ ಬರೆದ ಶಾಸಕ ಎಂ.ಪಿ ಕುಮಾರಸ್ವಾಮಿ

Update: 2022-06-09 16:23 GMT

ಚಿಕ್ಕಮಗಳೂರು, ಜೂ.9: ಮೂಡಿಗೆರೆ ಪೊಲೀಸ್ ಠಾಣೆಯ ಪಿಎಸ್ಸೈಯೊಬ್ಬರನ್ನು ವರ್ಗಾವಣೆ ಮಾಡಿ, ತಾನು ಶಿಫಾರಸು ಮಾಡಿದ ಬೇರೊಬ್ಬ ಪಿಎಸ್ಸೈಯನ್ನು ಅಲ್ಲಿಗೆ ನಿಯುಕ್ತಿ ಮಾಡಬೇಕೆಂದು ಐಜಿಗೆ ಪತ್ರ ಬರೆದಿದ್ದ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು,  ಮತ್ತೆ ಐಜಿಗೆ ಪತ್ರ ಬರೆದು ಹಿಂದಿನ ಪಿಎಸ್ಸೈ ಅವರನ್ನೇ ಮುಂದುವರಿಸಬೇಕು, ತಪ್ಪಿದಲ್ಲಿ ಐಜಿ ಕಚೇರಿ ಎದುರು ಧರಣಿ ಕೂರುತ್ತೇನೆಂದು ಪತ್ರದಲ್ಲಿ ಎಚ್ಚೆರಿಸಿದ್ದಾರೆ. 

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ಮೂಡಿಗೆರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮಲ್ಲಂದೂರು ಪೊಲೀಸ್ ಠಾಣಗೆ ಹೊಸದಾಗಿ ನಿಯುಕ್ತಿಯಾಗಿದ್ದ ಎಸ್ಸೈ ರವೀಶ್ ಎಂಬವರಿಗೆ ಕರೆ ಮಾಡಿ, ತನ್ನ ಗಮನಕ್ಕೆ ತಾರದೇ ಸ್ಥಳ ನಿಯುಕ್ತಿ ಆದ ಬಗ್ಗೆ ಪ್ರಶ್ನಿಸಿ, ನನ್ನನ್ನು ಏಕೆ ಭೇಟಿಯಾಗಿಲ್ಲ, ಯಾರನ್ನು ಕೇಳಿ ರಿಪೋರ್ಟ ಮಾಡಿಕೊಂಡೇ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲೇ ಠಾಣೆ ಬಿಟ್ಟು ಹೋಗಬೇಕೆಂದು ಬೆದರಿಕೆಯನ್ನೂ ಹಾಕಿದ್ದರು. ಶಾಸಕ ಕುಮಾರಸ್ವಾಮಿ ಅವರು ಎಸ್ಸೈಗೆ ಬೆದರಿಕೆ ಹಾಕಿದ್ದ ಆಡಿಯೋ ವೈರಲ್ ಆಗಿ ಶಾಸಕರ ವಿರುದ್ಧ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು.

ಈ ಘಟನೆ ಬೆನ್ನಲ್ಲೇ ಶಾಸಕ ಕುಮಾರಸ್ವಾಮಿ ಅವರು ಕಳೆದ ಜೂ.6 ಪಶ್ಚಿಮ ವಲಯದ ಐಜಿಗೆ ಪತ್ರ ಬರೆದು ತನ್ನ ಮತಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲ ಪೊಲೀಸ್ ಠಾಣೆಗಳಲ್ಲಿರುವ ಠಾಣಾಧಿಕಾರಿಗಳನ್ನು ವರ್ಗಾವಣೆ ಮಾಡದಂತೆ ಕೋರಿದ್ದರು. ಆದರೆ ಜೂ.1ರಂದು ಆದರ್ಶ ಎಂಬ ಪಿಎಸ್ಸೈ ಅವರನ್ನು ಮೂಡಿಗೆರೆ ಠಾಣೆಗೆ ನಿಯುಕ್ತಿಗೊಳಿಸುವಂತೆ ಐಜಿಗೆ ಬರೆದಿದ್ದರು. ಶಾಸಕ ಕುಮಾರಸ್ವಾಮಿ ಅವರ ಶಿಫಾರಸಿನ ಮೇರೆಗೆ ಪಶ್ಚಿಮ ವಲಯದ ಐಜಿ ಮೂಡಿಗೆರೆ ಪಿಎಸ್ಸೈ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿ ಪಿಎಸ್ಸೈ ಆದರ್ಶ ಅವರನ್ನು ಮೂಡಿಗೆರೆ ವರ್ಗಾವಣೆ ಮಾಡಲು ಆದೇಶಿಸಿದ್ದರು. ಈ ಆದೇಶ ಬಂದ ನಂತರ ಮತ್ತೆ ಐಜಿಗೆ ಪತ್ರ ಬರೆದಿರುವ ಶಾಸಕ ಕುಮಾರಸ್ವಾಮಿ, ಮೂಡಿಗೆರೆ ಪಿಎಸ್ಸೈ ರವಿ ಅವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು. ವರ್ಗಾವಣೆ ಮಾಡಿದಲ್ಲಿ ಐಜಿ ಕಚೇರಿ ಎದುರು ಧರಣಿ ಕೂರುವುದಾಗಿ ಬೆದರಿಕೆ ಹಾಕಿದ್ದಾರೆ.

ಅಲ್ಲದೇ ಮಲ್ಲಂದೂರು ಪೊಲೀಸ್ ಠಾಣೆಗೆ ಎಸ್ಸೈ ರವೀಶ್ ಅವರನ್ನು ನಿಯುಕ್ತಿ ಮಾಡುವಂತೆ ಶಿಫಾರಸು ಮಾಡಿದ್ದ ಶಾಸಕು ಕುಮಾರಸ್ವಾಮಿ ಸದ್ಯ ರವೀಶ್ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆ ಪತ್ರದಲ್ಲಿ ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ. ಶಾಸಕ ಕುಮಾರಸ್ವಾಮಿ ಅವರು ಈ ನಡವಳಿಕೆಯಿಂದಾಗಿ ಮೂಡಿಗೆರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪೊಲೀಸ್ ಠಾಣೆಗಳ ಅಧಿಕಾರಿಗಳು ಮಾನಸಿಕವಾಗಿ ನೊಂದಿದ್ದು, ಶಾಸಕರು ಪದೇ ಪದೇ ಐಜಿಗೆ ಪತ್ರ ಬರೆದು ಒಮ್ಮೆ ವರ್ಗಾವಣೆ ಮಾಡುವಂತೆ, ಮತ್ತೊಮ್ಮೆ ವರ್ಗಾವಣೆ ರದ್ದು ಮಾಡುವಂತೆ ಪತ್ರ ಬರೆಯುತ್ತಿರುವುದರಿಂದ ಠಾಣಾಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಶಾಸಕರ ಈ ದ್ವಂಧ್ವದ ವಿರುದ್ಧ ಸಾರ್ವಜನಿಕರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News